Kannada NewsKarnataka NewsLatest

ಬಿಜೆಪಿ ಪರ ಡಾ.ಪ್ರಭಾಕರ ಕೋರೆ ಮತಯಾಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಜ್ಜನ ಹಾಗೂ ನಿಷ್ಠವಂತ ರಾಜಕಾರಣಿ, ರೈತಬಂಧುವಾಗಿದ್ದ ದಿವಂಗತ ಸುರೇಶ ಅಂಗಡಿ ಅವರು ಇಂದು ನಮ್ಮ ಮಧ್ಯದಲ್ಲಿಲ್ಲ. ಆದರೆ ಅವರು ಮಾಡಿದ ಕಾರ್ಯಗಳು ಸಮಾಜದಲ್ಲಿ ಇಂದಿಗೂ ಜೀವಂತವಾಗಿವೆ. ಅವರ ನಿಧನ ನಂತರ ತೆರವಾಗಿರುವ ಲೋಕಸಭಾ ಸ್ಥಾನಕ್ಕೆ ಅವರ ಧರ್ಮಪತ್ನಿ ಮಂಗಲಾ ಅಂಗಡಿಯವರಿಗೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕಾಗಿ ಕೆಎಲ್‌ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.
ಅವರು ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿರುವ ಎಲ್ಲ ಅಂಗಸಂಸ್ಥೆಗಳ ಸಿಬ್ಬಂದಿವರ್ಗದವರನ್ನು ಕುರಿತು ಮತ ಯಾಚಿಸಿದರು. ದಿವಂಗತ ಸುರೇಶ ಅಂಗಡಿಯವರು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದರು. ಜನಪ್ರೀತಿಯಿಂದ ಪಕ್ಷವನ್ನು ಸಂಘಟಿಸಿದರು. ಬೆಳಗಾವಿಯಲ್ಲಿ ಕಾಂಗ್ರೇಸನ ಪ್ರಾಬಲ್ಯ ಇರುವ ಸಂದರ್ಭದಲ್ಲಿಯೇ ಗಂಡುಮೆಟ್ಟಿದ ನೆಲೆ ಬೆಳಗಾವಿಯಲ್ಲಿ ಬಿಜೆಪಿಗೆ ಭದ್ರನೆಲೆಗಟ್ಟನ್ನು ರೂಪಿಸಿದರು.
ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಅಹರ್ನಿಶಿ ಶ್ರಮಿಸಿದರು. ಅದರ ಫಲವೆಂಬಂತೆ ಅಂದು ನೆಟ್ಟ ಬೀಜ ಇಂದು ಹೆಮ್ಮರವಾಗಿ ತನ್ನ ರೆಂಬೆಕೊಂಬೆಗಳನ್ನು ಚಾಚಿ ಬೃಹದಾಕಾರವಾಗಿ ಬೆಳೆದುನಿಂತಿದೆ. ಇಡೀ ರಾಜ್ಯಕ್ಕೆ ಬಿಜೆಪಿ ಬಹುಮುಖ್ಯ ಪಾತ್ರವನ್ನು ನೀಡುವಂತೆ ಮಾಡಿದವರು ದಿ. ಸುರೇಶ ಅಂಗಡಿಯವರು. ಇಂದು ಬೆಳಗಾವಿ ಜಿಲ್ಲೆಯಲ್ಲಿ ೧೩ ಶಾಸಕರನ್ನು, ೨ ಲೋಕಸಭಾ ಸದಸ್ಯರನ್ನು, ಎಲ್ಲ ಸ್ಥಳೀಯ ಸದಸ್ಯರನ್ನು ಬಿಜೆಪಿ ಪಕ್ಷ ನಾಡಿಗೆ ರಾಷ್ಟ್ರಕ್ಕೆ ನೀಡಿದೆ. ಇದಕ್ಕೆ ಸುರೇಶ ಅಂಗಡಿಯವರ ಕೊಡುಗೆ ಅಪಾರ. ೨೦೧೯ರಲ್ಲಿ ೪ನೇ ಬಾರಿಗೆ ಸಂಸತ್ ಪ್ರವೇಶಿಸಿ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಲ್ಪಾವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಜನರ ಬಹುದಿನಗಳ ಕನಸನ್ನು ನನಸಾಗಿಸಿದ್ದರು.
ಅಂತೆಯೇ ಅವರದು ಕೆಎಲ್‌ಇ ಸಂಸ್ಥೆಯೊಂದಿಗೂ ನಿಕಟ ಸಂಪರ್ಕಹೊಂದಿದ್ದರು. ಕೆಎಲ್‌ಇ ಸಂಸ್ಥೆಯ ಜಿ.ಎ.ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿದ್ದ ಅವರು ಸಂಸ್ಥೆಯ ಅಸಂಖ್ಯ ಸಭೆ ಸಮಾರಂಭಗಳಿಗೆ ಸಾಕ್ಷಿಯಾಗಿದ್ದರು. ಅವರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಸಂಸ್ಥೆಯ ಮೇಲಿನ ಪ್ರೀತಿ, ನನ್ನೊಂದಿಗೆ ಅದೇ ಒಡನಾಟವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ನನ್ನ ಸಹೋದರ ಸಮಾನವಾಗಿದ್ದ ಸುರೇಶ ಅಂಗಡಿಯವರು ಮಾಡಿರುವ ಸೇವೆಗಳು ನಿತ್ಯ ನೂತನವಾಗಿ, ಎಲ್ಲರ ಹೃದಯದಲ್ಲಿ ಹಸಿರಾಗಿವೆ.
ಇಂದು ಅವರ ನಿಧನದಿಂದ ತೆರವಾದ ಸ್ಥಾನವನ್ನು ತುಂಬಲು ಅವರ ಧರ್ಮಪತ್ನಿ ಮಂಗಳಾ ಸುರೇಶ ಅಂಗಡಿಯವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಿಗೆ ನಮ್ಮ ಅಂಗ ಸಂಸ್ಥೆಗಳ ಎಲ್ಲ ಸಿಬ್ಬಂದಿ ವರ್ಗದವರು ಬಹುಮೂಲ್ಯ ಮತವನ್ನು ನೀಡುವುದರ ಮೂಲಕ ಅವರನ್ನು ಬಹುಮತದಿಂದ ಆರಿಸಿ ತರಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸುರೇಶ ಅಂಗಡಿಯವರ ಮಗಳು ಡಾ.ಸ್ಫೂರ್ತಿ ಅಂಗಡಿ ಪಾಟೀಲ ಅವರು ಮತಯಾಚಿಸಿದರು. ಕೆಎಲ್‌ಇ ಅಂಗಸಂಸ್ಥೆಗಳ ನೂರಾರು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button