ಡಾ.ಪ್ರಭಾಕರ ಕೋರೆಗೆ ಅಮೆರಿಕೆಯ ಪ್ರತಿಷ್ಠಿತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯಸಭಾ ಸದಸ್ಯರು, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆಂಡ್ ರಿಸರ್ಚ್‌ನ ಕುಲಾಧಿಪತಿಗಳಾದ ಡಾ.ಪ್ರಭಾಕರ ಕೋರೆ ಅವರಿಗೆ ಶಿಕ್ಷಣ, ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆಗಳ ಅಂತರಾಷ್ಟ್ರೀಯ ಸಹಯೋಗಗಳನ್ನು ಸಾಧಿಸಿ ಪೋಷಿಸಿದ ಸಾಧನೆಗಳಿಗಾಗಿ ಅಮೆರಿಕಾದ ಫಿಲಾಡೆಲ್ಫಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ.
ಅಮೆರಿಕಾದ ಫಿಲಾಡೆಲ್ಫಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದಲ್ಲಿ ೨೦ ಮೇ, ೨೦೨೦ ರಂದು ಜರುಗಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಲಿದ್ದಾರೆ.
ದೇಶದ ಈ ಭಾಗದಲ್ಲಿ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಸಂಶೋಧನೆಗಳ ಮೂಲಕ ಸಮಾಜದ ಉನ್ನತೀಕರಣಕ್ಕಾಗಿ ಸಲ್ಲಿಸಿದ ಅನುಪಮ ಸೇವೆಗಳನ್ನು ಗುರುತಿಸಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್‌ನ ಕುಲಾಧಿಪತಿಗಳಾದ ಡಾ.ಪ್ರಭಾಕರ ಕೋರೆ ಅವರಿಗೆ ಈ ಪ್ರತಿಷ್ಠಿತ ಗೌರವ ದೊರೆತಿರುವುದು ಕೆಎಲ್‌ಇ ಸಂಸ್ಥೆಗೆ ತುಂಬಾ ಹೆಮ್ಮೆಯ ವಿಷಯವಾಗಿದೆ. ಅಮೇರಿಕೆಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯವು ಈ ಗೌರವ ಪ್ರಶಸ್ತಿಯನ್ನು ನೀಡುತ್ತಿರುವುದು ಇನ್ನೂ ವಿಶೇಷವಾಗಿದೆ.
ಡಾ.ಪ್ರಭಾಕರ ಕೋರೆಯವರು ಕೆಎಲ್‌ಇ ಸಂಸ್ಥೆ ಹಾಗೂ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆಂಡ್ ರಿಸರ್ಚ್ ಅನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಳಗಾವಿಯಂತಹ ದ್ವಿತೀಯ ಶ್ರೇಣಿ ನಗರಗಳಲ್ಲಿ ವಿಶ್ವದರ್ಜೆಯ ಮೂಲ ಸೌಕರ‍್ಯಗಳನ್ನು ನಿರ್ಮಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಪಾರಂಪರಿಕ ಹಾಗೂ ವೃತ್ತಿಪರ ಶಿಕ್ಷಣ, ಉನ್ನತ ಮಾಪನಾಂಕದ ಸಂಶೋಧನೆ ಮತ್ತು ಬಡ ಹಾಗೂ ಅಗತ್ಯವಿರುವ ರೋಗಿಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಆಸ್ಪತ್ರೆಗಳ ಮೂಲಕ, ಕೈಗೆಟುಕುವ ದರದಲ್ಲಿ ಆರೋಗ್ಯ ಆರೈಕೆ ಸೇವೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಡಿಯಾ ಸೆಂಟರ್ ಫಾರ್ ಸ್ಟಡಿಸ್
ಅಮೆರಿಕೆಯ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದಲ್ಲಿ ಜರುಗಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಇಂಡಿಯಾ ಸೆಂಟರ್ ಫಾರ್ ಸ್ಟಡಿಸ್ ಅನ್ನು ಉದ್ಘಾಟಿಸಲಾಗುವುದು. ಈ ಸಮಾರಂಭವನ್ನು ಉದ್ಘಾಟಿಸಲು ಗೌರವಾನ್ವಿತ ಸಂಯುಕ್ತ ಅಮೆರಿಕಾದ ಭಾರತೀಯ ರಾಯಭಾರಿ ಅವರನ್ನು ಆಮಂತ್ರಿಸಲಾಗಿದೆ. ಈ ಅಧ್ಯಯನ ಕೇಂದ್ರವು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆಂಡ್ ರಿಸರ್ಚ್ ಹಾಗೂ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ನಡುವೆ ಶೈಕ್ಷಣಿಕ ಹಾಗೂ ಸಂಶೋಧನ ಸಹಯೋಗಗಳನ್ನು ನಿರ್ವಹಿಸಲಿದೆ. ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾಗಿರುವ ನಾಲ್ಕು ವಿದೇಶಿ ಕೇಂದ್ರಗಳಲ್ಲಿ ಇದು ಒಂದಾಗಿದೆ. ಇನ್ನುಳಿದ ಮೂರು ಕೇಂದ್ರಗಳು ಇಟಲಿ, ಐರ್ಲೆಂಡ್ ಹಾಗೂ ಇಸ್ರೇಲ್ ದೇಶಗಳದ್ದಾಗಿವೆ.
ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆಂಡ್ ರಿಸರ್ಚ್ ಹಾಗೂ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ನಡುವೆ ಸಹಯೋಗ:
ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆಂಡ್ ರಿಸರ್ಚ್ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ವಿಶ್ವವಿದ್ಯಾಲಯ ಹಾಗೂ ಸಂಸ್ಥೆಗಳೊಂದಿಗೆ ಹಲವಾರು ಸಹಯೋಗಗಳನ್ನು ಸ್ಥಾಪಿಸಿದೆ. ಅಮೆರಿಕಾದ ಫಿಲಾಡೆಲ್ಫಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದೊಂದಿಗೆ ಹೊಂದಿರುವ ಸಹಯೋಗವು ದೀರ್ಘಕಾಲದ ಅರ್ಥಪೂರ್ಣ ಸಹಯೋಗವಾಗಿದೆ.
ಈ ಸಹಯೋಗವು ತಾಯಿ ಮತ್ತು ನವಜಾತ ಶಿಶು ಆರೋಗ್ಯ ಕ್ಷೇತ್ರದಲ್ಲಿ ವಿಶ್ವದರ್ಜೆಯ ಸಂಶೋಧನೆಗಳನ್ನು ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ ಹಾಗೂ ಕೆಎಲ್‌ಇ ಜಂಟಿಯಾಗಿ ನಿರ್ವಹಿಸುವತ್ತ ಕೇಂದ್ರೀಕರಿಸಿದೆ. ಈ ಸಹಯೋಗವು ಉತ್ತಮ ಗುಣಮಟ್ಟದ, ಹೆಚ್ಚಿನ ಪ್ರಭಾವದ, ವೈಜ್ಞಾನಿಕ ಪ್ರಕಟಣೆಗಳಿಗೆ ಸೀಮಿತವಾಗದೆ, ಸಾವಿರಾರು ಸಂಖ್ಯೆಯ ತಾಯಂದಿರ ಹಾಗೂ ನವಜಾತ ಶಿಶುಗಳ ಜೀವವನ್ನು ಕಾಪಾಡಿದ ಶ್ರೇಯಸ್ಸು ಇದಕ್ಕಿದೆ.
ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಂಶೋಧನೆಗಳು ಮನ್ನಣೆ ಪಡೆದು ಆರೋಗ್ಯ ನೀತಿ ಹಾಗೂ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಈ ಸಂಶೋಧನೆಗಳಿಂದ ನಿರೂಪಿಸಲ್ಪಟ್ಟ ನೀತಿ ಹಾಗೂ ಮಾರ್ಗಸೂಚಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹಾಗೂ ೫೪ ರಾಷ್ಟ್ರಗಳ ಆರೋಗ್ಯ ಸಚಿವಾಲಯಗಳು ಅಳವಡಿಸಿಕೊಂಡಿವೆ.
ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆಂಡ್ ರಿಸರ್ಚ್‌ಗೆ ಈ ಜಾಗತಿಕ ಉದ್ದೇಶಗಳನ್ನು ಸಾಧಿಸಲು ಡಾ.ಕೋರೆ ಅವರ ನಿರಂತರ ಸಲಹೆ, ಮಾರ್ಗದರ್ಶನ, ಬೆಂಬಲ ಹಾಗೂ ಪ್ರೋತ್ಸಾಹಗಳೇ ಕಾರಣವಾಗಿವೆ.
ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದೊಂದಿಗೆ ತಾಯಿ ಮತ್ತು ನವಜಾತ ಶಿಶು ಆರೋಗ್ಯ ಸಂಶೋಧನೆಗಳ ಸಹಯೋಗದ ಹೊರತಾಗಿ, ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆಂಡ್ ರಿಸರ್ಚ್ ಈ ಸಹಯೋಗದೊಂದಿಗೆ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಪ್ರಸ್ತುತ ಮೂತ್ರಶಾಸ್ತ್ರ, ನರವಿಜ್ಞಾನ, ವಿಕಿರಣಶಾಸ್ತ್ರ, ಮನೋವೈದ್ಯಶಾಸ್ತ್ರ, ಸಾರ್ವಜನಿಕ ಆರೋಗ್ಯ, ಭೌತಿಕಚಿಕಿತ್ಸೆ, ಶುಶ್ರೂಷಾ ವಿಜ್ಞಾನ, ಸಮಗ್ರ ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸಹಯೋಗವನ್ನು ಮುಂದುವರೆಸಲಾಗಿದೆ.
ಈ ಸಂಶೋಧನಾ ಯೋಜನೆಗಳ ಫಲಿತಾಂಶಗಳು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರಲಿವೆ. ಈ ಸಂಶೋಧನಾ ಸಹಯೋಗದಡಿಯಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ವಿದ್ಯಾರ್ಥಿ ಹಾಗೂ ಅಧ್ಯಾಪಕರ ವಿನಿಮಯಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಕೆಎಲ್‌ಇ ವೈದ್ಯಕೀಯ ವಿದ್ಯಾರ್ಥಿಗಳಿಗೆ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದಲ್ಲಿ ಹಾಗೂ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆಂಡ್ ರಿಸರ್ಚ್‌ನಲ್ಲಿ ಹೆಚ್ಚಿನ ವೈದ್ಯಕೀಯ ಅನುಭವಗಳನ್ನು ಪಡೆದುಕೊಳ್ಳಲು ಇದು ಅವಕಾಶವನ್ನು ಒದಗಿಸಿದೆ.
ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ :
ಥಾಮಸ್ ಜೆಫರಸನ್ ವಿಶ್ವವಿದ್ಯಾಲಯವು ೧೮೨೪ ರಲ್ಲಿ ಸ್ಥಾಪಿತವಾದ ಅಮೆರಿಕೆಯ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಆ ರಾಷ್ಟ್ರದ ಪ್ರಮುಖ ೧೦ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿದೆ. ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ೧೦ ಕಾಲೇಜುಗಳು ಹಾಗೂ ೩ ಸಂಸ್ಥೆಗಳಲ್ಲಿ ಒಟ್ಟಾರೆ ೩೦,೦೦೦ ಸಿಬ್ಬಂದಿ, ೪,೬೦೦ ಬೋಧಕರು, ೮,೪೦೦ ವಿದ್ಯಾರ್ಥಿಗಳು, ೬೩,೦೦೦ ಹಳೆಯ ವಿದ್ಯಾರ್ಥಿಗಳು, ೬,೧೦೦ ವೈದ್ಯರು ಹಾಗೂ ೭,೪೦೦ ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದು, ೧೬೦ ಪದವಿ ಕೋರ್ಸಗಳನ್ನು ಹೊಂದಿರುವ ಬೃಹತ್ ಬಹುವಿಭಾಗೀಯ ವಿಶ್ವವಿದ್ಯಾಲಯವಾಗಿದೆ.
ಇದು ಅಮೆರಿಕಾದ ೫ನೇ ಅತ್ಯಂತ ನಾವೀನ್ಯತೆಗಳನ್ನು ಹೊಂದಿರುವ ವಿಶ್ವವಿದ್ಯಾಲಯವಾಗಿದ್ದು, ಬಹುಮೌಲ್ಯಯುತ ಶಾಲೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಸಾಫ್ಟವೇರ್ ನಾವೀನ್ಯತೆಗಳು, ವೈದ್ಯಕೀಯ ಉಪಕರಣಗಳು ಹಾಗೂ ರೋಗ ನಿರ್ಣಯ ಶಾಸ್ತ್ರಗಳಲ್ಲಿ ಕೈಗೊಂಡ ಸಂಶೋಧನೆಗಳು ೧೦೦೦ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಹೊಂದಿರುವ ಅನನ್ಯ ವಿಶ್ವವಿದ್ಯಾಲಯವಾಗಿದೆ.
ಥಾಮಸ್ ಜೆಫರಸನ್ ವಿಶ್ವವಿದ್ಯಾಲಯವು ಸಮುದಾಯ ಆರೋಗ್ಯದ ಉನ್ನತಿಗಾಗಿ ೨೮೮ ದಶಲಕ್ಷ ಡಾಲರ್‌ಗಳಿಗೂ ಅಧಿಕ ಹಣವನ್ನ್ನು ಚಾರಿಟೇಬಲ್ ಸೇವೆಗಳಿಗಾಗಿ ಹಾಗೂ ೧೩೬ ದಶಲಕ್ಷ ಡಾಲರ್‌ಗಳನ್ನು ಸಾರ್ವಜನಿಕ/ಖಾಸಗಿ ಸಂಶೋಧನಾ ನಿಧಿಗಳಿಗೆ ವ್ಯಯಿಸುತ್ತಲಿದೆ. ಈ ವಿಶ್ವವಿದ್ಯಾಲಯವು ಇತ್ತೀಚೆಗೆ ಆರೋಗ್ಯ ಆರೈಕೆ ಸೇವೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಅಮೆರಿಕಾದಲ್ಲಿ ಬೃಹತ್ ಆರೋಗ್ಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿದೆ.
ಈ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ೩,೦೦೦ ಪರವಾನಿಗೆ ಪಡೆದ ಹಾಸಿಗೆಗಳಿವೆ. ಅಲ್ಲದೇ ೧,೨೭,೦೦೦ ಒಳರೋಗಿಗಳಿಗೆ, ೩೮,೦೦,೦೦೦ ಹೊರರೋಗಿಗಳಿಗೆ; ೫,೦೦,೦೦೦ ತುರ್ತು ಚಿಕಿತ್ಸಾ ರೋಗಿಗಳು ಹಾಗೂ ೪೮,೦೦೦ ಶಸ್ತ್ರಚಿಕಿತ್ಸಾ ಸೇವೆಗಳನ್ನು ಒದಗಿಸಿದೆ.
ಕೆಎಲ್‌ಇ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ‘ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕ’:
ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್‌ನ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ‘ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕ’ ಜಾಗತಿಕವಾಗಿ ತಾಯಂದಿರ ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದ ಪ್ರಮುಖ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ.
ಸಂಶೋಧನಾ ಘಟಕವು ತನ್ನ ಚಟುವಟಿಕೆಯ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಲೇ ಇದ್ದು, ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನ ರಾಜ್ಯಗಳ ಒಟ್ಟು ೧೦ ವೈದ್ಯಕೀಯ ಕಾಲೇಜು ಅಥವಾ ಸಂಶೋಧನಾ ಕೇಂದ್ರಗಳ ಜೊತೆ ಸಹಯೋಗವನ್ನು ಸಾಧಿಸಿದೆ. ಜೆ.ಎನ್.ಎಂ.ಸಿ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ಫೋಗಾರ್ಟಿ ಇಂಟರನ್ಯಾಷನಲ್ ಸೆಂಟರ್ ಸಂಯುಕ್ತ ಅಮೇರಿಕಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ, ಯು.ಕೆ. ಮೆಡಿಕಲ್ ರಿಸರ್ಚ್ ಕೌನ್ಸಿಲ್, ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗ, ವಿಶ್ವ ಆರೋಗ್ಯ ಸಂಸ್ಥೆ, ಜಿನಿವಾ, ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನೆಯ ಜಾಗತಿಕ ಜಾಲ, ಯುನಿಸ್ ಕೆನಡಿ ಶ್ರಿವರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಆಂಡ್ ಹ್ಯೂಮನ್ ಡೆವಲೆಪ್‌ಮೆಂಡ್, ಯು.ಎಸ್.ಎ., ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ (ಎನ್.ಸಿ.ಐ.) ಯುಎಸ್‌ಎ, ಚಿಲ್ಡ್ರನ್ಸ್ ಇನ್‌ವೆಸ್ಟಮೆಂಡ್ ಫಂಡ್ ಫೌಂಡೇಶನ್, ಯು.ಕೆ.ಮತ್ತು ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್, ಯುಎಸ್‌ಎ ಮುಂತಾದ ಸಂಸ್ಥೆಗಳಿಂದ ಸಂಶೋಧನಾ ಅನುದಾನ ಪಡೆದಿದೆ. ಅದಲ್ಲದೆ ಲಂಡನ್‌ನ ಕಿಂಗ್ಸ್ ಕಾಲೇಜ್, ಯು.ಕೆ., ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯ, ಸಂಯುಕ್ತ ಅಮೇರಿಕಾದ – ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ, ಕೊಲರಾಡೊ ವಿಶ್ವವಿದ್ಯಾಲಯ, ನಾರ್ಥಕ್ಯಾರೋಲಿನಾ ವಿಶ್ವವಿದ್ಯಾಲಯ, ಜಾನ್ ಹಾಪಕಿನ್ಸ್ ವಿಶ್ವವಿದ್ಯಾಲಯ, ಹಾರ್ವರ್ಡ್ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ, ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯ, ಕೊಲಂಬಿಯಾ ವಿಶ್ವವಿದ್ಯಾಲಯ, ನಾರ್ಥಕ್ಯಾರೋಲಿನಾದ ಆರ್.ಟಿ.ಐ. ಇಂಟರನ್ಯಾಷನಲ್ ಮತ್ತು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ವಿಶ್ವವಿದ್ಯಾಲಯಗಳೊಂದಿಗೆ ಸಂಶೋಧನಾ ಹಾಗೂ ಶೈಕ್ಷಣಿಕ ಒಡಂಬಡಿಕೆಗಳನ್ನೂ ಸಾಧಿಸಿದೆ.
ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದ ಪ್ರಮುಖರು :
ಅಲೆಕ್ಸ ಗೊರಸ್ಕಿ – ಜಾನಸನ್ ಆಂಡ್ ಜಾನಸನ್ ಕಂಪನಿಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು. ಅವರು ೧೯೪೪ ರಲ್ಲಿ ಸ್ಥಾಪಿತವಾದ ಸಾರ್ವಜನಿಕ ವ್ಯವಹಾರದ ಈ ಹೆಸರಾಂತ ಕಂಪನಿಯ ೭ನೇ ಮುಖ್ಯಸ್ಥರಾಗಿದ್ದಾರೆ.
ರ್ನಾಲ್ಡ್ ಲೋನ್ – ಪ್ರತಿಷ್ಠಿತ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ಹಾಗೂ ೫೦ ವರ್ಷಗಳಿಗೂ ಅಧಿಕ ಹೃದ್ರೋಗ ಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ಗೈದು ಮನುಕುಲಕ್ಕೆ ಸುಧಾರಣೆಯನ್ನು ಕಲ್ಪಿಸಿದ್ದಾರೆ. ಅವರು ಡೈರೆಕ್ಟ್ ಕರೆಂಟ್ ಡಿಫಿಬ್ರಿಲೇಟರ್ ಹಾಗೂ ಕಾರ್ಡಿಯೋಒವರ್ಟರ್ ಉಪಕರಣಗಳ ಮೂಲ ನಿರ್ಮಾತೃಗಳಾಗಿದ್ದಾರೆ.
ಡೊನ್ನಾ ಬ್ರಜಿಲ್ – ಅಮೆರಿಕದ ರಾಜಕೀಯ ತಂತ್ರಜ್ಞ, ಪ್ರಚಾರ ವ್ಯವಸ್ಥಾಪಕ, ರಾಜಕೀಯ ವಿಶ್ಲೇಷಕ, ಲೇಖಕ ಮತ್ತು ಫಾಕ್ಸ್ ನ್ಯೂಸ್‌ನ ಕೊಡುಗೆದಾರಲ್ಲದೇ ಈ ಹಿಂದಿನ ಸಿಎನ್‌ಎನ್ ಸುದ್ದಿ ವಾಹಿನಿಯ ಪ್ರಮುಖರಾಗಿದ್ದರು.
ಪಾಲ್ ಫಾರ್ಮರ್ – ಅಮೆರಿಕದ ವೈದ್ಯಕೀಯ ಮಾನವಶಾಸ್ತ್ರಜ್ಞ ಮತ್ತು ಹೆಸರಾಂತ ವೈದ್ಯರು. ಹಾರ್ವರ್ಡ ವಿಶ್ವವಿದ್ಯಾಲಯದಿಂದ ಎಂ.ಡಿ. ಮತ್ತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಹಾರ್ವರ್ಡ ವೈದ್ಯಕೀಯ ಮಹಾವಿದ್ಯಾಲಯದ ಜಾಗತಿಕ ಆರೋಗ್ಯ ಹಾಗೂ ಸಾಮಾಜಿಕ ವೈದ್ಯಕೀಯ ಸೇವೆಗಳ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ