ಸ್ಪಷ್ಟ ಗುರಿಯ ದೂರದೃಷ್ಟಿಯ ನೇತಾರ
“ಕೋರೆ ಯುಗವು ಕೆ.ಎಲ್.ಇ. ಸಂಸ್ಥೆಗೆ ಒಂದು ಸುವರ್ಣ ಯುಗವಾಗಿದೆ. ಅವರು ಶ್ರೇಷ್ಟ ನಾಯಕರಾಗಿದ್ದಾರೆ. ಇತರರು ಮಾಡಲು ಸಾಧ್ಯವಾಗಿಲ್ಲ, ಎಂದು ಸುಮ್ಮನಿರದೇ ಅವರು ಅನೇಕ ಗುರಿಗಳನ್ನು ಸಾಧಿಸಿದ್ದಾರೆ.” – ಎಂಬ ಡಾ. ಪಾಟೀಲ ಪುಟ್ಟಪ್ಪನವರ ಮಾತಿನೊಂದಿಗೆ ಪ್ರಾರಂಭಿಸುತ್ತಾ . .
ಧರ್ಮ ನ್ಯಾಯ ನೀತಿಯ ಆಧಾರದಲ್ಲಿ ಬದುಕುತ್ತಿದ್ದ 19-20 ನೇ ಶತಮಾನಗಳ ಜನತೆಯ ಬದುಕಿಗೂ 21ನೇ ಶತಮಾನದ ಬದುಕಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಇಂದು ಎಲ್ಲ ಕ್ಷೇತ್ರವೂ ಸ್ವಾರ್ಥ ಸಾಧನೆಗಾಗಿ ಗುಲಗೆಟ್ಟು ಹೋಗಿದೆ. ಇಂಥ ಕುಲಗೆಟ್ಟ, ಕಲುಷಿತ ವಾತಾವರಣದ ನಡುವೆಯೂ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಹಾಗೂ ಅಮೋಘ ಸಾಧನೆಗಳ ಮೂಲಕ ಕೆ.ಎಲ್.ಇ.ಸಂಸ್ಥೆಗೆ ಜಾಗತಿಕ ಮನ್ನಣೆ ಹಾಗೂ ಗುಣಮಟ್ಟ ತಂದುಕೊಟ್ಟ ಡಾ.ಪ್ರಭಾಕರ ಕೋರೆಯವರು ಇಂದು 72 ವರ್ಷಗಳ ಸಾರ್ಥಕ ಬದುಕನ್ನು ಬದುಕಿ, 72ರ ವಸಂತದೆಡೆಗೆ ಅಡಿ ಇಡುತ್ತಿದ್ದಾರೆ.
ಕಾಲ ಕಳೆಯುತ್ತಲೇ ಇರುತ್ತದೆ, ನೂರರ ಗಡಿಯನ್ನು ದಾಟಲೂ ಬಹುದು. ಎಷ್ಟು ಕಾಲ ಬುದುಕುತ್ತೇವೆ ಎನ್ನುವುದಕ್ಕಿಂತ ಇರುವಷ್ಟು ಕಾಲ ಸಮಾಜಕ್ಕಾಗಿ, ಸಂಸ್ಥೆಗಾಗಿ, ಇತರರಿಗಾಗಿ ಬದುಕುವವರು ತುಂಬ ವಿರಳ. ಅಂಥ ಅಪರೂಪದ ವ್ಯಕ್ತಿಗಳಲ್ಲಿ ಧಟ್ಟನೆ ಎದ್ದು ಕಾಣುವ ಹೆಸರು ಸ್ಪಷ್ಟ ಗುರಿಯ, ದೂರ ದೃಷ್ಟಿತ್ವದ ನೇತಾರ ಡಾ. ಪ್ರಭಾಕರ ಕೋರೆ ಅವರದು.
ಡಾ. ಕೋರೆಯವರು-ನೇರ-ದಿಟ್ಟ-ನಿರಂತರ, ಶಿಸ್ತುಬದ್ಧ, ಕ್ರಿಯಾಶೀಲ ವ್ಯಕ್ತಿತ್ವದವರು. ಯಾವುದೇ ಸಮಸ್ಯೆ ಇದ್ದರೂ ತತ್‌ಕ್ಷಣದಲ್ಲಿಯೇ ನಿರ್ಣಯ ತೆಗೆದುಕೊಳ್ಳುವಲ್ಲಿ ಅವರು ಸಿದ್ಧಹಸ್ತರು. ಏನೇ ಮಾಡಿದರೂ ಬೃಹತ್ತಾಗಿ, ಅಚ್ಚುಕಟ್ಟಾಗಿ ಮಾಡಬೇಕೆನ್ನುವವರು. ಅದು ಅವರ ವ್ಯಕ್ತಿ ವೈಶಿಷ್ಟ್ಯ ಕೂಡ. ಯಾವುದೇ ಕೆ.ಎಲ್.ಇ.ಶಿಕ್ಷಣ ಸಂಸ್ಥೆಗಳ ಆವರಣ ಒಳಹೊಕ್ಕು ನೋಡಿದರೆ ನಮಗೇ ವ್ಯತ್ಯಾಸ ಅರಿವಿಗೆ ಬರುತ್ತದೆ; ಒಂದು ರೀತಿಯ ಆನಂದ, ನೆಮ್ಮದಿ ಸಿಗುತ್ತದೆ, ಶೈಕ್ಷಣಿಕ ವಾತಾವರಣ ಗಮನ ಸೆಳೆಯುತ್ತದೆ.
ಜಗತ್ತಿನ ಭೂಪಟದಲ್ಲಿ…
ಕೆ.ಎಲ್.ಇ ಕಟ್ಟಿ ಬೆಳೆಸಿದ ಪುಣ್ಯಪುರುಷರೆನಿಸಿರುವ ಲಿಂ. ಅರಟಾಳ ರುದ್ರಗೌಡರು, ರಾಜಾ ಲಖಮಗೌಡರು, ಭೂಮರಡ್ಡಿ ಬಸಪ್ಪನವರು, ಚಚಡಿ ದೇಸಾಯರು, ವೈಜಪ್ಪ ಆನಿಗೋಳರು, ಪ್ರೊ. ಎಂ. ಆರ್. ಸಾಖರೆ, ಪ್ರೊ. ಎಸ್. ಎಸ್. ಬಸವನಾಳ, ಡಾ. ಎಚ್ .ಎಫ್. ಕಟ್ಟೀಮನಿ, ಬಿ. ಬಿ. ಮಮದಾಪುರ, ಪಿ. ಆರ್. ಚಿಕ್ಕೋಡಿ, ಬಿ. ಎಸ್. ಹಂಚಿನಾಳ ಹಾಗೂ ಸರದಾರ ವೀರನಗೌಡ ಪಾಟೀಲ ಇಂತಹ ಮಹನೀಯರ ತ್ಯಾಗ, ನಿಸ್ವಾರ್ಥ ಸೇವೆಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರು ನಡೆದ ದಾರಿಯಲ್ಲಿಯೇ ನಿಸ್ವಾರ್ಥ ಸೇವೆ ಎಂಬ ಪಥದಲ್ಲಿ ಸ್ಪಷ್ಟ ಗುರಿ ಮತ್ತು ದೂರ ದೃಷ್ಟಿಯೊಂದಿಗೆ ಸಂಸ್ಥೆಯನ್ನು ಮಹಾನ್ ಎತ್ತರಕ್ಕೆ ಬೆಳೆಸಿ ಜಗತ್ತಿನಾದ್ಯಂತ ಕೀರ್ತಿ ಪತಾಕೆ ಹಾರಿಸಿದ ಡಾ. ಪ್ರಭಾಕರ ಕೋರೆಯವರು ಬೆಳಗಾವಿ ಹಾಗೂ ಗಡಿಭಾಗಗಳಲ್ಲಿ ಮತ್ತು ಗಡಿಯ ಆಚೆಗೂ ಶಿಕ್ಷಣ ಸಂಸ್ಥೆಗಳನ್ನು ಸಾಲುಸಾಲಾಗಿ ಸ್ಥಾಪಿಸಿ ಕನ್ನಡಕ್ಕೆ ಭದ್ರ ನೆಲೆಗಟ್ಟು ಒದಗಿಸಿದ್ದಾರೆ.
ಕೆ.ಎಲ್.ಇ.ಸಂಸ್ಥೆಯ ಹೆಸರನ್ನು ಜಗತ್ತಿನ ಭೂಪಟದಲ್ಲಿ ಜನಜನಿತಗೊಳಿಸಿದವರು ಡಾ.ಪ್ರಭಾಕರ ಕೋರೆಯವರು. ಶಿಕ್ಷಣ ಪ್ರಸಾರದ ಜೊತೆಜೊತೆಗೇ ಸಂಸ್ಥೆಯನ್ನು ಮನರಂಜನೆ, ಕೃಷಿ ಮತ್ತು ಆರೋಗ್ಯ ಸೇವಾ ಕ್ಷೇತ್ರಗಳೆಡೆಗೂ ಕೊಂಡೊಯ್ದ ದೃಷ್ಟಾರರು. ಒಂದೊಂದೇ ಸಾಮಾನ್ಯ ಕಾಲೇಜನ್ನು ಮುನ್ನಡೆಸುವದೇ ಕಷ್ಟವೆನಿಸಿರುವಾಗ ಒಂದೇ ಊರಲ್ಲಿ ಎರಡೆರಡು ಇಂಜಿನಿಯರಿಂಗ್ ಕಾಲೇಜುಗಳನ್ನು ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ಶ್ರೀಯುತರದು.
ಕೆ. ಎಲ್. ಇ. ವಿಶ್ವವಿದ್ಯಾಲಯದ ಹಾಗೂ ಬಿ. ವ್ಹಿ. ಭೂಮರಡ್ಡಿ ತಾಂತ್ರಿಕ ವಿಶ್ವವಿದ್ಯಾಲಯಗಳ ಸ್ಥಾಪನೆಯಲ್ಲಿ ಅಪಾರ ಶ್ರಮಹಾಕಿರುವ ಡಾ.ಕೋರೆಯವರು ಕೆ.ಎಲ್.ಇ. ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿಸಿದ್ದಾರೆ.
ಕರ್ನಾಟಕದ ಆಚೆ ಪರರಾಜ್ಯ ಹಾಗೂ ಪರದೇಶಗಳಲ್ಲೂ ಕೆ.ಎಲ್.ಇ. ಅಂಗಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮೂಲಕ ಯಶಸ್ವಿಯಾಗಿ ಶ್ರಮಿಸಿರುವ ಡಾ. ಕೋರೆಯವರ ಸಂಪರ್ಕದ ಹರವು ತುಂಬ ದೊಡ್ಡದು. ನವೀ ಮುಂಬಯಿ, ಸೊಲ್ಲಾಪುರ, ಅಕ್ಕಲಕೋಟ, ಬಾರ್ಸಿ, ಇಚಲಕರಂಜಿ, ನವದೆಹಲಿ, ದುಬೈ, ಯು.ಕೆ., ಯು.ಎಸ್.ಎ. ಮಲೇಶಿಯಾ ಮುಂತಾದ ಕಡೆಗಳಲ್ಲಿ ಕೆ.ಎಲ್.ಇ. ಕೀರ್ತಿಪತಾಕೆ ಹಾರಿಸಿರುವ ಡಾ.ಕೋರೆಯವರು ಇಂದಿಗೂ ದಣಿವರಿಯದ ಸರದಾರ. ಅವರದು ಹೋರಾಟದ ಬದುಕು.
ಗುಣಮಟ್ಟವಿರುವದೆಲ್ಲವನ್ನೂ ಪ್ರೀತಿಸುತ್ತ, ಮೆಚ್ಚುತ್ತ ಬಂದಿರುವ ಕೋರೆಯವರು ಅರ್ಹತೆ-ಯೋಗ್ಯತೆ ಇದ್ದವರನ್ನೆಲ್ಲ ಜಾತ್ಯಾತೀತವಾಗಿ ಒಪ್ಪಿ-ಅಪ್ಪಿಕೊಂಡವರು.
ಅದ್ಭುತವಾದ ಸಂಘಟನಾ ಶಕ್ತಿ
ಕೋರೆಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಸಾಧನೆಗಳನ್ನು ಸ್ಮರಿಸಿ ಅಭಿನಂದಿಸಲೇಬೇಕು. ಅಖಿಲ ಭಾರತ ವೀರಶೈವ ಮಹಾಸಭೆಯ 21ನೇ ಮಹಾಧಿವೇಶನ(1992), ಅಖಿಲ ಭಾರತ 5ನೇ ಶರಣ ಸಾಹಿತ್ಯ ಸಮ್ಮೇಳನ, ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನ(2003), ಕರ್ನಾಟಕ ವಿಧಾನ ಮಂಡಲ ಅಧಿವೇಶನ(2006 ಮತ್ತು 2009), ಕರ್ನಾಟಕ ಸುವರ್ಣ ವಿಧಾನ ಸೌಧದ ನರ‍್ಮಾಣದಲ್ಲಿ ಅವರ ಯೋಗದಾನ, ರಾಣಿ ಚನ್ನಮ್ಮಾ ವಿಶ್ವವಿದ್ಯಾನಿಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಗಳನ್ನು ಬೆಳಗಾವಿಗೆ ತರಲು ಹಾಗೂ ಅವುಗಳಿಗೆ ಪ್ರಾರಂಭಿಕ ಹಂತದಲ್ಲಿ ಒದಗಿಸಿದ ಮೂಲಭೂತ ಸೌಲಭ್ಯಗಳು…….
ಒಂದೇ ಎರಡೇ ಅವುಗಳಿಗೆ ಲೆಕ್ಕ ಇಲ್ಲ. ಬೆಳಗಾವಿಯಲ್ಲಿ ಅವರ ನೇತೃತ್ವದಲ್ಲಿ ಪ್ರಾರಂಭಿಸಿದ ಕೆ.ಎಲ್.ಇ. ಮಲ್ಟಿಸ್ಪೆಶ್ಯಾಲಿಟಿ ಆಸ್ಪತ್ರೆ ಹಾಗೂ ಡಾ.ಪ್ರಭಾಕರ ಕೋರೆ ಉಚಿತಸೇವಾ ಆಸ್ಪತ್ರೆ, ಶಹಾಪೂರ-ಖಾಸಬಾಗದಲ್ಲಿ ಅದ್ಭುತವಾಗಿ ಅಭಿವೃದ್ಧಿಪಡಿಸಿರುವ ಬಿ.ಎಂ.ಕಂಕಣವಾಡಿ ಆಯುರ್ವೇದ ಆಸ್ಪತ್ರೆ ಹಾಗೂ ಕಾಲೇಜುಗಳನ್ನು ಕಂಡವರು –“ಇದು ಕೋರೆ” ಎಂದೇ ಹೇಳಬೇಕಾಗುತ್ತದೆ!
ಕೋರೆಯವರಲ್ಲಿ ಅದ್ಭುತವಾದ ಸಂಘಟನಾ ಶಕ್ತಿ ಇದೆ. ಒಂದು ರೀತಿಯ ಸಂಮೋಹಕ ಶಕ್ತಿ ಇದೆ. ಎಲ್ಲರನ್ನೂ ಆಕರ್ಷಿಸುವ ಚುಂಬಕ ಶಕ್ತಿ ಇದೆ. ಅಂತೆಯೇ ಅವರು ತಮ್ಮ ವಿರೋಧಿಗಳಿಗೂ ಬೇಕೆನಿಸುತ್ತಾರೆ. ಕೋರೆ ಇದೀಗ ಮಾಗಿದ ಫಲ. ಒಂದು ಕಾಲಕ್ಕೆ ಉಗ್ರಪ್ರತಾಪಿಯೆನಿಸಿದ್ದ ಕೋರೆ ಇದೀಗ ಮೌನಿಬಾಬಾ. ಸದಾಕಾಲ ಅವರ ತಲೆಯಲ್ಲಿ ಏನಾದರೊಂದು ಯೋಜನೆ, ಯೋಚನೆ ರೂಪುಗೊಳ್ಳುತ್ತಲೇ ಇರುತ್ತದೆ. ಸುಮ್ಮನೆ ಕೂಡ್ರುವ ಜಾಯಮಾನವೇ ಅವರದಲ್ಲ. ಅವರದು ಕಾಯಕ ಸಂಸ್ಕೃತಿ.
ಕಡಿಮೆ ಅವಧಿಯಲ್ಲಿ ದೊಡ್ಡ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ಶ್ರೇಯಸ್ಸು ಕೋರೆ ಅವರಿಗೆ ಸಲ್ಲುಬೇಕು. ಅವರು ಹಾಕಿಕೊಳ್ಳುವ ಕ್ರಿಯಾಯೋಜನೆಗಳು ಫಲಪ್ರದವಾಗಲೇಬೇಕು. ಹಿಡಿದ ಕಾರ್ಯಪೂರ್ಣಗೊಳ್ಳುವ ವರೆಗೆ ವಿಶ್ರಮಿಸದೆ ಅದಕ್ಕೊಂದು ರೂಪಕೊಡುವ ಅವರ ತುಡಿತ ಹೊಸ ಕಲಾಕೃತಿಯನ್ನು ಸೃಷ್ಟಿಸಿರುತ್ತದೆ.
ತಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಶಿಸ್ತು-ಗುಣಮಟ್ಟತೆ-ಪ್ರಯೋಜನ-ಸಾಫಲ್ಯ ಇರಲೇಬೇಕೆಂಬ ಅವರ ಅಪೇಕ್ಷೆ ವ್ಯರ್ಥವಾಗದ ಹಾಗೆ ನಿರ್ಮಾಣಗೊಳ್ಳುವುದು ಆಶ್ಚರ್ಯ ಎನಿಸುತ್ತದೆ. ಅಂದರೆ ಹಿಡಿದ ಕರ‍್ಯಕ್ಕೆ ಕೈಹಾಕುವ ಧ್ರಾಷ್ಟ್ಯಭಾವ ಡಾ.ಕೋರೆಯವರದು.
ಸಹಕಾರ ಚಳವಳಿಯ ನಾಯಕ
ಸಹಕಾರ ಚಳವಳಿಯ ನಾಯಕರಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶದ ಸಹಕಾರ ಚಳವಳಿಯನ್ನು ಮುಂಚೂಣಿಯಲ್ಲಿ ಚಿಕ್ಕೋಡಿಯ ದೂದಗಂಗಾ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಮಾದರಿಯ ಸಕ್ಕರೆಯ ಕಾರ್ಖಾನೆಯಾಗಿ ಹೊರಹೊಮ್ಮಿದೆ. ರೈತರಿಗೆ, ನಾಡಿಗೆ ಅಪಾರ ಕೊಡುಗೆ ನೀಡಿದೆ. ಪ್ರದೇಶದ ರೈತರ ಯೋಗಕ್ಷೇಮಕ್ಕಾಗಿ ನವದೆಹಲಿಯ ಆಲ್ ಇಂಡಿಯಾ ಸಹಕಾರ ಸಕ್ಕರೆ ಕಾರ್ಖಾನೆಗಳ ಲಿಮಿಟೆಡ್‌ನ ನಿರ್ದೇಶಕರಾಗಿದ್ದಲ್ಲದೇ ಅನೇಕ ಜವಾಬ್ದಾರಿ ನಿರ್ವಹಿಸಿದ್ದಾರೆ.
ಇದರೊಂದಿಗೆ ಶಿವಶಕ್ತಿ ಸುಗರ್ ಲಿಮಿಟೆಡ್‌ನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವದತ್ತಿಯಲ್ಲಿ ಸ್ಥಾಪಿಸಿದ್ದಾರೆ. ಅಲ್ಲದೇ ಹಲವಾರು ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಸಾಲಗಾರರ ಮತ್ತು ಠೇವಣಿದಾರರ ನಂಬಲಾಗದ ನಂಬಿಕೆಯನ್ನು ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕ್ ಲಿಮಿಟೆಡ್‌ನ್ನು ಬೇಳಗಾವಿಯಲ್ಲಿ ಸ್ಥಾಪಿಸಿದ್ದಲ್ಲದೇ ಜಿಲ್ಲೆಯ ನಾನಾ ಭಾಗಗಳಲ್ಲಿ ಅದರ ಶಾಖೆಗಳನ್ನು ತೆರೆದು ಯಶಸ್ವಿಯಾಗಿ ಲಾಭದಾಯಕವಾಗಿ ನಡೆಸುವಲ್ಲಿ ಸಫಲರಾಗಿದ್ದಾರೆ.
ಮುಗಿಸುಗಿವ ಮುನ್ನ “ಅವರು ಯಾವುದೇ ಪಕ್ಷದಲ್ಲಿರಬಹುದು, ಆದರೆ ನನಗೆ ಪ್ರಭಾಕರ ಕೋರೆ ಶಿಕ್ಷಣತಜ್ಞ, ಆಡಳಿತಗಾರ, ಸಾಂಸ್ಕೃತಿಕ ರಾಯಭಾರಿ ಮತ್ತು ಸಾಮಾಜಿಕ ಸ್ನೇಹಿ ವ್ಯಕ್ತಿ” ಎಂಬ ನಾಗತಿಹಳ್ಳಿ ಚಂದ್ರಶೇಖರರ ಮಾತನ್ನು ಉಲ್ಲೇಖಿಸುತ್ತೇನೆ.
ಈಗ ಡಾ. ಪ್ರಭಾಕರ ಕೊರೆ ಅವರಿಗೆ 72ರ ವಸಂತದ ಸಂಭ್ರಮ. ಅವರ ಜೀವನೋತ್ಸಾಹ ಹೀಗೆ ಮುಂದುವರೆಯಲಿ, ನೂರ್ಕಾಲ ಬದುಕಿ, ಅವರಿಂದ ಇನ್ನಷ್ಟು ಸಾಮಾಜಿಕ ಸೇವೆಗಳು ಮುನ್ನಡೆಯಲಿ ಎಂಬುವುದೇ ಅವರ ಅಭಿಮಾನಿಗಳ ಸದಾಶಯ.///
- -ಡಾ. ಎಚ್. ಎಮ್. ಚನ್ನಪ್ಪಗೋಳ
ಕನ್ನಡ ಸಹಾಯಕ ಪ್ರಾಧ್ಯಾಪಕ,
ಲಿಂಗರಾಜ ಮಹಾವಿದ್ಯಾಲಯ, ಬೆಳಗಾವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ