*ಡಾ.ಪ್ರಭಾಕರ ಕೋರೆಯವರಿಂದ ಎಂಎಲ್‌ಐಆರ್‌ಸಿಗೆ 1934ರ ಫೋರ್ಡ್ ಮಾಡೆಲ್ ಕಾರು ಹಸ್ತಾಂತರ*

ಪ್ರಗತಿವಾಹಿನಿ ಸುದ್ದಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ತಮ್ಮ ಮನೆಯಲ್ಲಿದ್ದ 1934 ಮಾಡೆಲ್ ಫೋರ್ಡ್ ಸಲೂನ್ ಕಾರನ್ನು ಬೆಳಗಾವಿಯ ಮರಾಠಾ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್ (ಎಂಎಲ್‌ಐಆರ್‌ಸಿ)ಗೆ ಇತ್ತೀಚಿಗೆ ಹಸ್ತಾಂತರಿಸಿದರು.
ಆಕರ್ಷಕ ವಿನ್ಯಾಸ ಹೊಂದಿದ್ದ 1934ರ ಮಾಡೆಲ್ ಫೋರ್ಡ್ ಸಲೂನ್ ಕಾರ್ ಇಂಜಿನ್ ಕ್ಷಮತೆಯಿಂದ ಕೂಡಿ ಇಂದಿಗೂ ಕಾರ್ಯನಿರ್ವಹಿಸುತ್ತಿತ್ತು. ಕೋರೆಯವರ ಪ್ರೀತಿಯ ಪ್ರತೀಕವಾಗಿದ್ದ ಫೋರ್ಡ್ ಕಾರ್‌ನ್ನು ತಂದೆಯವರ ನೆನಪಿನ ಪ್ರತೀಕವಾಗಿ ಜತನದಿಂದ ಇಟ್ಟುಕೊಂಡಿದ್ದರು.

ಇತ್ತೀಚಿಗೆ ಈ ಕಾರನ್ನು ಎಂಎಲ್‌ಆರ್‌ಸಿಯ ಕಮಾಂಡೆಂಟ್ ಬೀಗ್ರೇಡಿಯರ್ ಜಾಯದೀಪ ಮುಖರ್ಜಿ ಅವರಿಗೆ ಡಾ.ಕೋರೆಯವರು ಹಸ್ತಾಂತರಿಸಿದರು. ಈ ಕುರಿತು ಮಾತನಾಡಿದ ಅವರು “ಇದೊಂದು ಅತ್ಯಂತ ಹಳೆಯ ಮಾದರಿಯ ಅಪರೂಪದ ಫೋರ್ಡ್ ಸಲೂನ್ ಕಾರ್‌ವಾಗಿದ್ದು, ನಮ್ಮ ಪಾರಂಪರಿಕ ರೆಜಿಮೆಂಟಲ್ ಸೆಂಟರ್‌ಗೆ ಡಾ.ಕೋರೆಯವರ ಅಮೂಲ್ಯವಾದ ಕೊಡುಗೆಯಾಗಿದೆ. ಈ ವಿಂಟೇಜ್ ಕಾರು ನಮ್ಮ ಎಂಎಲ್‌ಐಆರ್‌ಸಿ ಸಂಗ್ರಹಾಲಯಕ್ಕೆ ಸೇರ್ಪಡೆಯಾಗಲಿದೆ ಹಾಗೂ ಇದು ಡಾ.ಕೋರೆಯವರ ನೆನಪಿನ ಸಂಕೇತವಾಗಿ ಉಳಿಯಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಕರ್ನಲ್ ವಿಕೆಬಿ ಪಾಟೀಲ ಹಾಗೂ ಮರಾಠಾ ಲಘು ಪದಾತಿದಳದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.