ಉತ್ತಮ ಸಮಾಜ ಕಾರ್ಯಗಳನ್ನು ಮಾಡುವುದು ಬದುಕಿನ ಧ್ಯೇಯವಾಗಲಿ: ಡಾ. ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೀವನದಲ್ಲಿ ಅದ್ಭುತವಾದುದನ್ನು ಸಾಧಿಸಿ ಸಮಾಜದ ಋಣ ತೀರಿಸಬೇಕು. ತಂದೆತಾಯಿ ಹಾಗೂ ಕಲಿಸಿದ ಶಾಲೆಯ ಗೌರವವನ್ನು ಹೆಚ್ಚಿಸಬೇಕೆಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಅವರು ಯಡ್ರಾಂವದ ಕೆಎಲ್ಇ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಮಾತನಾಡಿದರು. ಇಂದು ಸ್ಪರ್ಧೆ ಎಲ್ಲ ಕ್ಷೇತ್ರಗಳಲ್ಲಿಯೂ ಹಾಸುಹೊಕ್ಕಾಗಿದೆ. ಅದನ್ನು ಸವಾಲನ್ನಾಗಿ ಸ್ವೀಕರಿಸಿ ಸಾಧನೆಯನ್ನು ಮಾಡಬೇಕಾಗಿದೆ. ಜೀವನದಲ್ಲಿ ಅಂಕಗಳೇ ಮುಖ್ಯವಲ್ಲ ಅದರೊಂದಿಗೆ ಉತ್ತಮವಾದ ನಡೆನುಡಿಯನ್ನು ಪಡೆಯುವುದು ಮುಖ್ಯ. ಸಮಾಜಕ್ಕೆ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುವುದು ಬದುಕಿನ ಧ್ಯೇಯವಾಗಬೇಕು. ಮನೆತನದ ಹಾಗೂ ಶಾಲೆಯಕೀರ್ತಿಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ 2021-22 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಶೇ. 100 ಆಗಿದ್ದು, ಶೇ. 97.6 ಅಂಕಗಳಿಸಿ ಪ್ರಥಮ ಸ್ಥಾನ ಪಡೆದ ಅಕ್ಷತಾ ಸಂಗೋಟೆ, ಶೇ. 94.72 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದ ರಕ್ಷಿತಾ ಬಡಿಗೇರ ಹಾಗೂ ಶೇ.92.32 ಅಂಕ ಗಳಿಸಿ ತೃತೀಯ ಸ್ಥಾನ ಪಡೆದ ಅಕ್ಷಯ ಸ. ಮಾಳಿ ಹಾಗೂ ಶೇ.91.52 ಅಂಕ ಪಡೆದ ಅಕ್ಷಯಕುಮಾರ ಮಿಣಚೆ , ಸಾಕ್ಷಿ ಪುಠಾಣೆ, ಸೌಂದರ್ಯಾ ಯ. ಭಜಂತ್ರಿ , ಶೇ.90.72 ಅಂಕ ಪಡೆದ ಪುಷ್ಪಾ ಬ. ಮಾಳಿ, ಶೇ. 90.8 ಅಂಕ ಪಡೆದ ದಿವ್ಯಾ ಮ. ಮಾಳಿ ಅವರಿಗೆ ಡಾ. ಪ್ರಭಾಕರ ಕೋರೆ ಅವರು ಸತ್ಕರಿಸಿ ಪ್ರೋತ್ಸಾಹಿಸಿದರು.
ರಾಯಬಾಗ ಶಾಸಕ ದುರ್ಯೋಧನ ಎಂ. ಐಹೊಳೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಿ.ಬಿ. ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಭರತ ಬಣವಣೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸರ್ವ ಸದಸ್ಯರು, ಶಿವಶಕ್ತಿ ಶುಗರ್ಸ್ ನ ಬಿ.ಎ. ಪಾಟೀಲ, ಕೆಎಲ್ಇ ಶಾಲೆ ಯಡ್ರಾಂವ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಸತ್ಯಪ್ಪಾ ಬಿಷ್ಠೆ ಹಾಗೂ ಸರ್ವ ಸದಸ್ಯರು, ಅಂಕಲಿ ಅಂಗ ಸಂಸ್ಥೆಗಳ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು, ಶಾಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.