*ಧೀಮಂತ ರಾಜಕಾರಣಿ ಎಸ್. ಎಂ.ಕೃಷ್ಣ ನಿಧನಕ್ಕೆ ಡಾ.ಪ್ರಭಾಕರ ಕೋರೆ ಸಂತಾಪ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದೇಶಕಂಡ ಒಬ್ಬ ಶ್ರೇಷ್ಠ ದಾರ್ಶನಿಕ, ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಎಸ್.ಎಸ್.ಕೃಷ್ಣ ಅವರ ನಿಧನ ನಾಡಿಗೆ ಹಾಗೂ ದೇಶಕ್ಕೆ ತುಂಬಲಾರದ ದುಃಖವನ್ನುಂಟುಮಾಡಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಕೀಯದಲ್ಲಿ ತಮ್ಮ ವಿಶಿಷ್ಟವಾದ ವ್ಯಕ್ತಿತ್ವದಿಂದ ನಂ.1 ಮುಖ್ಯಮಂತ್ರಿಯ ಪಟ್ಟವನ್ನು ಪಡೆದುಕೊಂಡಿದ್ದ ಅವರು ಎಲ್ಲ ಪಕ್ಷದವರೊಂದಿಗೆ ಅತ್ಯುತ್ತಮ ಒಡನಾಟವನ್ನು ಹೊಂದಿದ್ದರು. ತಮ್ಮ ಪಾರದರ್ಶಕ ಆಡಳಿತ ಹಾಗೂ ವರ್ಚಸ್ಸಿನಿಂದ ರಾಜಕೀಯದಲ್ಲಿ ಅಜಾತಶತ್ರುವೆನಿಸಿಕೊಂಡಿದ್ದರು.
ರಾಜ್ಯದ ಅಭಿವೃದ್ಧಿಯಲ್ಲಿ ಬಹುಮೌಲಿಕ ಕೊಡುಗೆ ನೀಡಿದ್ದ ಅವರು ಬೆಂಗಳೂರು ಐಟಿಬಿಟಿ ಕ್ಷೇತ್ರದ ವಿಸ್ತರಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬೆಂಗಳೂರು ಸಿಲಿಕಾನ್ ಸಿಟಿ ಪಟ್ಟವನ್ನು ಪಡೆದುಕೊಂಡಿದ್ದರೆ ಅದರಲ್ಲಿ ಎಸ್.ಎಂ.ಕೃಷ್ಣ ಅವರ ಕೊಡುಗೆ ಅನುಪಮವೆನಿಸಿದೆ. ದೂರದೃಷ್ಟಿಯ ನಾಯಕರಾಗಿದ್ದ ಅವರು ಕೈಗೊಂಡ ಅನೇಕ ಯೋಜನೆಗಳು ರಾಜ್ಯದ ಬೆಳವಣಿಗೆಯಲ್ಲಿ ಇಂದಿಗೂ ಹಸಿರಾಗಿ ನಿಂತಿವೆ.
ನಾನು ಪಕ್ಷದಲ್ಲಿ ಅವರೊಂದಿಗೆ ಜೊತೆ ಜೊತೆಯಾಗಿ ಕೆಲಸವನ್ನು ಮಾಡಿದ್ದೆ. ಅವರ ಸೌಜನ್ಯದ ಮಾತುಗಳು ಹಾಗೂ ನಡೆನುಡಿಗಳು ಎಷ್ಟೋ ಸಂದರ್ಭಗಳಲ್ಲಿ ನನ್ನನ್ನು ಆಕರ್ಷಿಸಿತ್ತು. ಕೊನೆಗೆ ಅವರು ಭಾಜಪ ಪಕ್ಷಕ್ಕೆ ಬಂದಾಗಲೂ ಸಾಮಾಜಿಕ ಹಿತ ಕಾಪಾಡಿದರು. ತಮ್ಮ ನಿಷ್ಠುರ ನಿಲುವು, ದೃಢನಿರ್ಧಾರಗಳನ್ನು ಅವರೆಂದೂ ಕೈಬಿಡಲಿಲ್ಲ. ರಾಜ್ಯದ ಹಾಗೂ ದೇಶದ ಅಭಿವೃದ್ಧಿಯಲ್ಲಿ ಯಾವುದು ಪ್ರಯೋಜನಕಾರಿ ಇದೆಯೋ ಅದನ್ನೇ ಪಕ್ಷಾತೀತವಾಗಿ ಸ್ವೀಕರಿಸಿದರು. ಮೋದಿಯವರ ಅಭಿವೃದ್ಧಿಯ ಪರ್ವವನ್ನು ಮುಕ್ತಕಂಠದಿಂದ ಪ್ರಶಂಸಿದ್ದರು.
ನಮ್ಮ ಕೆಎಲ್‍ಇ ಸಂಸ್ಥೆಯ ಕೆಎಲ್‍ಇ ಸಂಸ್ಥೆಯ ಅಭಿಮಾನಿಗಳಾಗಿದ್ದ ಎಸ್.ಎಂ.ಕೃಷ್ಣ ಅವರು ಸಂಸ್ಥೆಗೆ ಹಲವು ಬಾರಿ ಭೇಟಿ ನೀಡಿದ್ದರು. ಸಂಸ್ಥೆಯು ಜಾಗತಿಕವಾಗಿ ಶಿಕ್ಷಣ-ಆರೋಗ್ಯಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಮುಕ್ತಕಂಠದಿಂದ ಅಭಿನಂದಿಸಿದ್ದರು. ಸಂಸ್ಥೆಯ ಬೆಳವಣಿಗೆಗೆ ಮಾರ್ಗದರ್ಶಿಸಿದ್ದರು. 2008ರಲ್ಲಿ ಬೆಳಗಾವಿಯ ಕೆಎಲ್‍ಇ ಡಾ.ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆಯ ಉದ್ಘಾಟನೆಯನ್ನು ಆಂಧ್ರಪ್ರದೇಶ ಅಂದಿನ ಮುಖ್ಯಮಂತ್ರಿಗಳಾಗಿದ್ದ ವಾಯ್‍ಎಸ್ ರಾಜಶೇಖರ ರೆಡ್ಡಿಯವರೊಂದಿಗೆ ನೆರವೇರಿಸಿದ್ದರು.
ಅಂತೆಯೇ ಕೆಎಲ್‍ಇ ಬೆಳಗಾವಿ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಮರುನಾಮಕರಣ ಸಮಾರಂಭವನ್ನು ನೆರವೇರಿಸಿದ್ದು ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿತ್ತು.
ಎಸ್.ಎಂ.ಕೃಷ್ಣ ಅವರ ಅಗಲಿದೆ ಸಮಸ್ತ ನಾಡಿಗೆ ಸಮಾಜಕ್ಕೆ ದುಃಖವನ್ನುಂಟುಮಾಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಅವರ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಕರುಣಿಸಲೆಂದು ಸಮಸ್ತ ಕೆಎಲ್‍ಇ ಸಂಸ್ಥೆಯ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆಂದು’ ಡಾ.ಕೋರೆಯವರು ಕಂಬನಿ ಮಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ