
ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವೈದ್ಯೆಯೊಬ್ಬರು ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಆಂಧ್ರ ಪ್ರದೇಶದ ಸಿಕಂದರಾಬಾದಿನ ಮಿಲಿಟರಿ ಆಸ್ಪತ್ರೆಯಲ್ಲಿ ಡಾ. ರಶ್ಮಿ ಹೆಗಡೆ, ಎಂ.ಡಿ. (ಜನರಲ್ ಮೆಡಿಸಿನ್) ಇದೀಗ ಸೈನಿಕರ ನೆರವಿನ ಸೇವೆಗೆ ಕಂಕಣತೊಟ್ಟಿದ್ದಾರೆ.
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸಿ, ಕಳೆದ ಜನೆವರಿ ತಿಂಗಳಿನಲ್ಲಿ ಕೆಎಂಸಿ ಹುಬ್ಬಳ್ಳಿಯಿಂದ ತಮ್ಮ ಎಂಡಿ ಪದವಿಯನ್ನು ಗಳಿಸಿದ್ದರು.
ತಾಲೂಕಿನ ಬೊಪ್ಪನಳ್ಳಿಯ ರೋಹಿಣಿ ಮತ್ತು ಡಾ. ಲಕ್ಷ್ಮೀನಾರಾಯಣ ಹೆಗಡೆ, ವಿಶ್ರಾಂತ ಡೀನ್(ಸ್ನಾತಕೋತ್ತರ), ತೋಟಗಾರಿಕಾ ವಿಶ್ವವಿದ್ಯಾಲಯದ, ಬಾಗಲಕೋಟ ಅವರ ಪುತ್ರಿಯಾಗಿದ್ದಾರೆ. ದೇಶ ಕಾಯುವ ಸೈನಿಕರ ಮತ್ತು ಅವರ ಕುಟುಂಬದವರ ವೈದ್ಯಕೀಯ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಹಲವು ಯುವ ವೈದ್ಯರಿಗೆ ಮಾದರಿಯಾಗಿರುವದು ಉಲ್ಲೇಖನೀಯವಾಗಿದೆ. ರಶ್ಮಿ ತಮ್ಮ ಪ್ರಾಥಮಿಕ ಅಭ್ಯಾಸವನ್ನು ಗೋಕಾಕಿನ ಕೆ.ಎಲ್.ಇ. ಸಂಸ್ಥೆಯಲ್ಲಿಯೂ ಮತ್ತು ಪಿಯುಸಿ ಯನ್ನು ಶಿರಸಿಯ ಚೈತನ್ಯ ಮಹಾವಿದ್ಯಾಲಯದಲ್ಲಿ ಪೂರೈಸಿ 2015ನೇ ಇಸವಿಯ ಪಿಯುಸಿ ಬೋರ್ಡ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ 4 ನೇ ಸ್ಥಾನವನ್ನು ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.