Karnataka News

*ಉದ್ಯೋಗ ನೀಡುವ ಜೊತೆಗೆ ಉತ್ತಮ ಸಂಬಳವನ್ನ ನೀಡಿ: ಡಾ. ಶರಣ್‌ ಪ್ರಕಾಶ್‌ ಪಾಟೀಲ್‌*

ಬೆಂಗಳೂರು, ಬೆಳಗಾವಿ, ಮಂಗಳೂರಿನಲ್ಲಿ ಜೀವನ ಸಾಗಿಸಲು ಕೈ ತುಂಬಾ ಸಂಬಳಬೇಕು: ಮಾನವೀಯ ನೆಲೆಗಟ್ಟಿನಲ್ಲಿ ವೇತನ ನೀಡಿ: ಉದ್ಯೋಗದಾತರರಿಗೆ ಸಚಿವರ ಮನವಿ

ಪ್ರಗತಿವಾಹಿನಿ ಸುದ್ದಿ: ಬೃಹತ್‌ ಉದ್ಯೋಗ ಮೇಳಗಳಲ್ಲಿ ಕಂಪನಿಗಳು ಅರ್ಹರಿಗೆ ಉದ್ಯೋಗ ನೀಡುತ್ತಿರುವುದು ಮಹತ್ಕಾರ್ಹವಾಗಿದೆ. ಇದರ ಜೊತೆಗೆ ಉದ್ಯೋಗ ಪಡೆಯುವವರು ಉತ್ತಮ ರೀತಿನಲ್ಲಿ ಜೀವನ ಸಾಗಿಸಲು ಅನುವಾಗುವಂತೆ ಗೌರವಾನ್ವಿತ ಅಥವಾ ಉತ್ತಮ ಜೀವನ ಸಾಗಿಸಲ ಅನುವಾಗುವಂತೆ ವೇತನ ನೀಡಿ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಸಲಹೆ ನೀಡಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್.ಕೆ.ಸಿ.ಸಿ.ಐ.) ವತಿಯಿದ ಸಂಸ್ಥೆಯ ಸರ್.ಎಂ.ವಿ. ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಿದ್ದ “ಎಫ್.ಕೆ.ಸಿ.ಸಿ.ಐ ಉದ್ಯೋಗ ಉತ್ಸವ್ 2025-26” ಉದ್ಘಾಟಿಸಿ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು, ಕಲಬುರಗಿ, ಹುಬ್ಬಳಿ, ಬೆಳಗಾವಿ, ಮಂಗಳೂರಿನಲ್ಲಿ ಕೆಲಸಕ್ಕೆ ಹೋಗುವ ವ್ಯಕ್ತಿಗೆ ಜೀವನ ಸಾಗಿಸಲು ಕೈ ತುಂಬಾ ಸಂಬಳ ಬೇಕಾಗುತ್ತದೆ. ಒಂದು ವೇಳೆ ಸಂಬಳ ಸಿಗದಿದ್ದರೆ ಆತ ಮತ್ತೆ ತನ್ನ ಗ್ರಾಮಕ್ಕೆ ತೆರಳಿ, ನಿರುದ್ಯೋಗಿಯಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಉದ್ಯೋಗದಾತರು ಮಾನವೀಯ ದೃಟ್ಟಿಯಿಂದಲೂ ಈ ರೀತಿಯ ಕ್ರಮಕ್ಕೆ ಚಿಂತನೆ ನಡೆಸಬೇಕು ಎಂದು ಡಾ. ಪಾಟೀಲ್‌ ಸಲಹೆ ನೀಡಿದರು.

Home add -Advt

ನಮ್ಮವರಿಗೆ ವಿದೇಶದಲ್ಲಿ ಉದ್ಯೋಗ

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರದ ವತಿಯಿಂದ ರಾಜ್ಯದ ವಿವಿಧೆಡೆ ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಜತೆಗೆ ಆರೋಗ್ಯ ವೃತ್ತಿಪರರಿಗಾಗಿ ಸಾಗರೋತ್ತರ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. “ಜರ್ಮನಿ, ಜಪಾನ್, ಇಟಲಿ ಮತ್ತಿತರ ರಾಷ್ಟ್ರಗಳಿಂದ ನರ್ಸ್, ಅರೆ ವೈದ್ಯಕೀಯ ಮುಂತಾದ ಆರೋಗ್ಯ ವೃತ್ತಿಪರರಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ಈ ಆರೋಗ್ಯ ವೃತ್ತಿಪರರಿಗಾಗಿಯೇ ಸಾಗರೋತ್ತರ ಉದ್ಯೋಗ ಮೇಳವನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಆಯೋಜಿಸಲಾಗುವುದು” ಎಂದರು.

“ರಾಜ್ಯದ ಆರೋಗ್ಯ ವೃತ್ತಿಪರರಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದ್ದರೂ ಭಾಷೆ ಎಂಬುದು ಅವರಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಜರ್ಮನ್ ಮತ್ತು ಜಾಪಾನೀಸ್ ಭಾಷೆಯನ್ನು ಪರಿಚಯಿಸಲು ಕೂಡ ನಿರ್ಧರಿಸಲಾಗಿದೆ. ಆ ಮೂಲಕ ಭಾಷಾ ಸಮಸ್ಯೆಯನ್ನು ಬಗೆಹರಿಸಲಾಗುವುದು” ಎಂದು ತಿಳಿಸಿದರು.

ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಮಾತನಾಡಿ, “ದೇಶದಲ್ಲಿ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡುತ್ತಿದ್ದುದರಿಂದ ಶಿಕ್ಷಣ ಮುಗಿಸಿ ಹೊರಬರುತ್ತಿರುವವರ ಪೈಕಿ ಶೇ. 85 ಮಂದಿಯಲ್ಲಿ ಕೌಶಲ್ಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಮೇಳಗಳ ಮೂಲಕ ಕಂಪನಿ, ಕೈಗಾರಿಕೆಗಳಿಂದ ಬರುವ ಕೌಶಲ ಬೇಡಿಕೆ ಆಧರಿಸಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರು ಹೊರತುಪಡಿಸಿ (ಬಿಯಾಂಡ್ ಬೆಂಗಳೂರು) ಇತರೆ ಪ್ರದೇಶಗಳಲ್ಲೂ ಕೌಶಲ್ಯಾಧರಿತ ಶಿಕ್ಷಣಕ್ಕೆ ಗಮನ ಹರಿಸಲಾಗುತ್ತಿದೆ. ಇದಕ್ಕೆ ಎಫ್ ಕೆಸಿಸಿಐ ಸಹಕಾರ ನೀಡಬೇಕು” ಎಂದರು.

ಎಫ್ ಕೆಸಿಸಿಐ ಕೌಶಲ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ಅಭಿಷೇಕ್ ಬಿ.ಎ. ಮಾತನಾಡಿ, “ಎಫ್ ಕೆಸಿಸಿಐ ಉದ್ಯೋಗ ಉತ್ಸವ್ ನಲ್ಲಿ 120ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ಉದ್ಯೋಗಾಂಕ್ಷಿಗಳಿಗೆ ಆವಕಾಶ ಮಾಡಿಕೊಡಲಿವೆ. ಈ ಪೈಕಿ 55 ಕಂಪನಿಗಳು ಎಫ್ ಕೆಸಿಸಿಐ ಸದಸ್ಯರದ್ದಾಗಿರುವುದು ವಿಶೇಷ. 9000 ಮಂದಿ ಇಲ್ಲಿ ನೋಂದಣಿ ಮಾಡಿಕೊಂಡಿದ್ದು,5000 ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದಾರೆ. ಬ್ಯಾಂಕಿಂಗ್, ಸೇವಾ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕೊಡಿಸಲು ಪ್ರಯತ್ನ ಮಾಡಾಗುತ್ತಿದೆ,” ಎಂದು ತಿಳಿಸಿದರು.

ಏ. 16ಕ್ಕೆ ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ

“ಉದ್ಯೋಗದಾತರ ಮೂಲಕ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲು ಈಗಾಗಲೇ ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಏ.16ರಂದು ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದಾದ ಬಳಿಕ ಮೈಸೂರು, ಹುಬ್ಬಳ್ಳಿ, ಬೆಳಗಾವಿಗಳಲ್ಲಿ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು”, ಎಂದು ಹೇಳಿದರು.

“ರಾಜ್ಯದಲ್ಲಿ ಉದ್ಯೋಗ ಸಮಸ್ಯೆಗಿಂತಲೂ ಕೌಶಲ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೌಶಲಭರಿತ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಕಲಬುರಗಿ, ಕೊಪ್ಪಳ ಮತ್ತು ಮೈಸೂರನ್ನು ಕೇಂದ್ರೀಕರಿಸಿ ‘ಮಲ್ಟಿ ಸ್ಕಿಲ್ ಡೆವಲಪ್ ಮಂಟ್ ಸೆಂಟರ್’ಗಳನ್ನು ಸ್ಥಾಪಿಸಲಾಗುವುದು”, ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಫ್ ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಹಿರಿಯ ಉಪಾಧ್ಯಕ್ಷ ಉಮಾರೆಡ್ಡಿ, ಉಪಾಧ್ಯಕ್ಷ ಟಿ.ಸಾಯಿರಾಂ ಪ್ರಸಾದ್, ಡೆವಲಪ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ತೇಜಸ್ ಎನ್.ಗೌಡ, ಎಫ್ ಕೆಸಿಸಿಐ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

Related Articles

Back to top button