ಖಾನಾಪುರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ: ಸಿಎಂ ಭೇಟಿಯಾದ ಡಾ.ಸೋನಾಲಿ ಸರ್ನೋಬತ್ ಮನವಿ

ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ, ಬಿಜೆಪಿ ಬೆಳಗಾವಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಬಿಜೆಪಿ ಖಾನಾಪುರ ತಾಲೂಕು ಪ್ರಭಾರಿ ಡಾ.ಸೋನಾಲಿ ಸರ್ನೋಬತ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸಂಜೆ ಬೊಮ್ಮಾಯಿ ಅವರನ್ನು ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ಮಾಡಿದ ಅವರು ಈ ಕುರಿತ ವಿವರಣೆ ನೀಡಿ ಮನವಿಯೊಂದನ್ನು ಸಲ್ಲಿಸಿದರು.
ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಸುಧಾರಣೆಯಾಗಬೇಕು. ಖಾನಾಪುರ ಅತಿದೊಡ್ಡ ತಾಲ್ಲೂಕಾಗಿರುವುದರಿಂದ ಸಾಕಷ್ಟು ಅಭಿವೃದ್ಧಿಯ ಅಗತ್ಯವಿದೆ. ಕೇವಲ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವೂ ಪರಿಣಾಮಕಾರಿಯಾಗಿಲ್ಲ. ವಿದ್ಯುತ್, ಗಟಾರಗಳು ಮತ್ತು ಇತರ ಪ್ರಾಥಮಿಕ ಮೂಲಭೂತ ಸಮಸ್ಯೆಗಳಿವೆ ಎಂದು ಗಮನ ಸೆಳೆದಿದ್ದಾರೆ.
ಸ್ಥಳೀಯ ನಾಯಕರು, ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಜಿಲ್ಲಾ ಉಸ್ತುವಾರಿ ಮಂತ್ರಿ ಗೋವಿಂದ್ ಕಾರ್ಜೋಳ ಮತ್ತು ಸಂಸದೆ ಮಂಗಳ ಅಂಗಡಿ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರು ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಪ್ರಯತ್ನಿ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ಖಾನಾಪುರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಯೋಜನೆಯೊಂದನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಸೋನಾಲಿ ಸರ್ನೋಬತ್ ವಿನಂತಿಸಿದರು.
ಎಲ್ಲವನ್ನೂ ತಾಳ್ಮೆಯಿಂದ ಆಲಿಸಿದ ಬಸವರಾಜ ಬೊಮ್ಮಾಯಿ, ಈ ಬಗ್ಗೆ ಪರಿಶೀಲಿಸಿ, ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜನವರಿ 26 ರಿಂದ 5 ಜಿಲ್ಲೆಗಳಲ್ಲಿ ಗ್ರಾಮ ಸೇವಾ ಯೋಜನೆಗೆ ಚಾಲನೆ: ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ