*ಡಾ.ಸುಶೀಲಾದೇವಿ ರಾಮಣ್ಣವರ ನಿಧನ: ದೇಹದಾನ ಮೂಲಕ ಸಾವಿಲ್ಲೂ ಸಾರ್ಥಕತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಲಹೊಂಗಲ ಪಟ್ಟಣದ ಬಸವನಗರದ ನಿವಾಸಿ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ, ಶತಾಯುಷಿ, ಆಯುರ್ವೇದ ವೈದ್ಯೆ ಡಾ.ಸುಶೀಲಾದೇವಿ ಬಸವಣ್ಣಪ್ಪ ರಾಮಣ್ಣವರ (101) ಅಂತಿಮ ಇಚ್ಛೆಯಂತೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಕೆಎಲ್ಇ ಶ್ರೀ ಬಿ. ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ದೇಹವನ್ನು ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ದೇಹದಾನ ಜಾಗೃತಿಗಾಗಿ ತಂದೆಯ ಮೃತ ದೇಹ ಛೇದಿಸಲು ಮಹಾಂತೇಶ್ ರಾಮಣ್ಣವರ ಅವರಿಗೆ ಆತ್ಮಸ್ಥೈರ್ಯ ಹಾಗೂ ಮನೋಬಲ ತುಂಬಿ ವೈದ್ಯಕೀಯ ಇತಿಹಾಸ ಸೃಷ್ಟಿಸಿದವರು.
ದೇಹ ದಾನ, ನೇತ್ರದಾನ ಜಾಗೃತಿಕರ್ತೆ
ಮಗನ ಜೊತೆ ಸೇರಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಡಾ.ರಾಮಣ್ಣವರ ಟ್ರಸ್ಟಿನ ಮುಖಾಂತರ ಜನರಲ್ಲಿ ನೇತ್ರದಾನ, ಚರ್ಮದಾನ, ದೇಹದಾನ ಜಾಗ್ರತಿ ಹಾಗೂ ಅಂಗಾಂಗ ದಾನಗಳ ಬಗ್ಗೆ ಮೂಡನಂಬಿಕೆ ಹಾಗೂ ಅಂಧ ಶ್ರದ್ದೆ ನಿರ್ಮೂಲನೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳ ಮುಖಾಂತರ ಸಾವಿರಾರು ಮಹಿಳೆಯರಿಗೆ ನೇತ್ರ ಚರ್ಮ, ದೇಹದಾನಕ್ಕೆ ಸ್ಪೂರ್ತಿ ನೀಡಿದ ಧೀಮಂತ ಮಹಿಳಾ ವೈದ್ಯೆಯಾಗಿದ್ದರು.
ದೇಹದಾನಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು , ದಂತ ಹಾಗೂ ಆಯುರ್ವೇದ ತಜ್ಞರು ಡಾ. ಬಿಎಸ್ ರಾಮಣ್ಣವರ ಧರ್ಮಪತ್ನಿ ಆಗಿರುವ ಸುಶೀಲಾದೇವಿಯವರು ಕಳೆದ 18 ವರ್ಷದ ಹಿಂದೆ ತಮ್ಮ ಪತಿ ಬಿಎಸ್ ರಾಮಣ್ಣವರ್ ದೇಹವನ್ನು ಅವರೇ ಬೈಲಹೊಂಗಲದಲ್ಲಿ ಸ್ಥಾಪಿಸಿದ ಡಾಕ್ಟರ್ ರಾಮಣ್ಣವರ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಬೆಳಗಾವಿ ಕೆಎಲ್ಇ ಆಯುರ್ವೇದ ವೇದಿಕೆಯ ಮಹಾವಿದ್ಯಾಲಯಕ್ಕೆ ದಾನ ಮಾಡಿ ಇತಿಹಾಸ ನಿರ್ಮಿಸಿದ್ದರು.
ಗಣ್ಯರ ಕಂಬನಿ
ಕೆ.ಎಲ್.ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಕಂಬಿನಿ ಮಿಡಿದಿದ್ದು, ಆಯುರ್ವೇದಿಕ್ ಕ್ಷೇತ್ರದಲ್ಲಿ ರಾಮಣ್ಣವರ ಕುಟುಂಬ ನೀಡಿದ ಕೊಡುಗೆ ಅಮೂಲ್ಯವಾದದು. ದೇಹ ದಾನ ನೇತ್ರದಾನ ಕುರಿತು ಡಾ. ಸುಶೀಲಾದೇವಿ ಅವರು ಕೈಗೊಂಡ ಅಭಿಯಾನ ಬಹುದೊಡ್ಡದು. ಮಾಂತೇಶ್ ರಾಮಣ್ಣವರ ಪ್ರೇರಣಶಕ್ತಿ ಅವರಾಗಿದ್ದರು. ಆಯುರ್ವೇದ ವೈದ್ಯವಿಜ್ಞಾನ ಅವರ ಸೇವೆಯನ್ನು ಸದಾ ಸ್ಮರಿಸುತ್ತದೆ. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ಅಂತೆ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಬೆಳಗಾವಿ ಕಾರಂಜಿ ಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿ, ಕೆಎಲ್ಇ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಿವಾನಂದ ಕೌಜಲಗಿ, ಶಾಸಕರಾದ ಮಹಾಂತೇಶ್ ಕೌಜಲಗಿ, ಬಿ ಎಂ ಕಂಕನವಾಡಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಸುಹಾಸ ಕುಮಾರ ಶೆಟ್ಟಿ, ಹಿರಿಯ ಸಾಹಿತಿ ಡಾ. ಬಸವರಾಜ್ ಜಗಜಂಪಿ, ಬಿಎಸ್ ಗವಿಮಠ, ಗುರುದೇವಿ ಹುಲೇಪ್ಪನವರಮಠ ಮೊದಲಾದವರು ಕಂಬನಿ ಮಿಡಿದಿದ್ದಾರೆ.



