![](https://pragativahini.com/wp-content/uploads/2025/02/IMG_20250206_195803_650_x_350_pixel.jpg)
ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಇಂದು ಬೆಳಗಾವಿಯ ಕನ್ನಡಭವನದಲ್ಲಿ ಮಹಾಂತೇಶ ನಗರ ರಹವಾಸಿಗಳ ಸಂಘ ಹಾಗೂ ಕನ್ನಡ ಭವನ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ರವರು ರಚಿಸಿದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಆಯ್ದ ಭಾಗ ವಾಲಿ ಸುಗ್ರೀವ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಅವರು, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕಗಳು ಇಂದಿನ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವಕ್ಕೆ ಪೂರಕವಾಗುತ್ತದೆ. ಕೇವಲ ಅಂಕ ಗಳಿಕೆಯೇ ಉದ್ದೇಶವಾಗಬಾರದು. ರಂಗಭೂಮಿಯ ಜ್ಞಾನವನ್ನು ಶಿಕ್ಷಣದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿದಾಗ ಶಿಕ್ಷಣದ ಗುರಿ ಉದ್ದೇಶಗಳು ಪರಿಪೂರ್ಣಗೊಳ್ಳತ್ತವೆ. ರಂಗಭೂಮಿಯ ಕಲೆ ಶಿಕ್ಷಕರನ್ನು ಸಮರ್ಥ ಬೋಧಕರನ್ನಾಗಿ ರೂಪಿಸುತ್ತದೆ. ಎಂ.ಎನ್.ಆರ್.ಎ ಬಿ.ಇಡಿ ಕಾಲೇಜು ಇಂತಹದ್ದೊಂದು ಪ್ರಯತ್ನ ಬೆಳಗಾವಿಯಲ್ಲಿಯೇ ಪ್ರಥಮ ಬಾರಿಗೆ ಮಾಡಿರುವುದು ಶ್ಲಾಘನೀಯ ಅದನ್ನು ಎಲ್ಲ ಮಹಾವಿದ್ಯಾಲಯಗಳು ಅನುಸರಿಸಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಗುರುಸಿದ್ಧ ಸ್ವಾಮೀಜಿ ಕಾರಂಜಿ ಮಠ ಬೆಳಗಾವಿ ರವರು ನಾಟಕ ಕಲೆ ವ್ಯಕ್ತಿಗಳ ಅಂತರಂಗದ ಮೇಲೆ ಪ್ರಕಾಶ ಬೀರುತ್ತದೆ. ಸಮಾಜದ ವಿವಿಧ ಸಮಸ್ಯೆಗಳನ್ನು ನಾಟಕ, ಸಾಹಿತ್ಯದ ಮೂಲಕ ಶಿಕ್ಷಕರು ಮಕ್ಕಳಿಗೆ ತಲುಪಿಸಿದರೆ ಸೂಕ್ತ ಪರಿಹಾರ ದೊರೆಯಬಹುದೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಂಗಸಂಪದ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿ ರವರು ನಾಟಕಗಳು ಮಾನವ ಸಮಾಜದ ಪ್ರತಿಬಿಂಬಗಳಾಗಿವೆ. ಕ್ಲಿಷ್ಟಕರವಾದ ವಿಷಯಗಳನ್ನು ನಾಟಕದ ಮೂಲಕ ಅತ್ಯಂತ ಸರಳವಾಗಿ ಹಾಗೂ ಶಾಶ್ವತವಾಗಿ, ಪರಿಹಾರಾತ್ಮಕವಾಗಿ ಹಾಗೂ ಪ್ರಯೋಗತ್ಮಾಕವಾಗಿ ಬೋಧಿಸಲು ಸಾಧ್ಯವಾಗುತ್ತದೆ.
ಇದನ್ನು ಬೆಳಗಾವಿಯಲ್ಲಿ ನನಸು ಮಾಡಿದ ಗೌರವ ಮಹಾಂತೇಶನಗರ ರಹವಾಸಿಗಳ ಸಂಘದ ಬಿ.ಎಡ್. ಕಾಲೇಜಿನ ಆಡಳಿತ ಮಂಡಳಿಗೆ ಮತ್ತು ಪ್ರಾಂಶುಪಾಲರಾದ ಡಾ.ನಿರ್ಮಲಾ ಬಟ್ಟಲ ಅವರಿಗೆ ಸಲ್ಲುತ್ತದೆ.
ಶ್ರೀ.ವೀರೂ ಅಣ್ಣೀಗೇರಿ ಅವರ ಸಮರ್ಥ ನಿರ್ದೇಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಪ್ರಸ್ತುತ ಪಡಿಸಿದ ಕುವೆಂಪುರವರ ರಾಮಾಯಣ ದರ್ಶನಂ ದ ಭಾಗ ವಾಲೀಸುಗ್ರೀವ ನಾಟಕ ಪ್ರದರ್ಶನ ಇಂತಹ ಪ್ರಯೋಗಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರಲು ಎಲ್ಲರನ್ನೂ ಪ್ರೋತ್ಸಾಹಿಸಿದವು..ಉಳಿದ ಕಾಲೇಜಗಳೂ ಸಹ ಇಂತಹ ಮಾದರಿಯನ್ನು ಅನುಕರಿಸಬೇಕೆಂದು ಎಂದು ಹೇಳಿದರು.
ಎಂ.ಎನ್.ಆರ್.ಎ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ನಾಟಕದಲ್ಲಿ ಪರಕಾಯ ಪ್ರವೇಶ ಮಾಡಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ ಎಂದು ಮೆಚ್ಚಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಲಕ್ಷ್ಮಿಕಾಂತ ಎಂ ಗುರುವ ಅಧ್ಯಕ್ಷರು ಮಹಾಂತೇಶ ನಗರ ರಹವಾಸಿಗಳ ಸಂಘ ರವರು ಪ್ರಶಿಕ್ಷಣಾರ್ಥಿಗಳು ತಮ್ಮ ವಯಸ್ಸಿಗಿಂತ ಮಿಗಿಲಾದ ಸಾಧನೆ ಮಾಡಿದ್ದಾರೆ. ಬದ್ಧತೆ, ಗಾಡವಾದ ಆಸಕ್ತಿ , ಸತತ ಪ್ರಯತ್ನದ ಮೂಲಕ ತಮ್ಮಲ್ಲಿರುವ ನಾಟಕ ಕಲೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ನಿರ್ದೇಶಕ ವೀರು ಅಣ್ಣಿಗೇರಿ ರವರನ್ನು ಗೌರವಿಸಲಾಯಿತು. ಡಾ.ನಿರ್ಮಲಾ ಜಿ ಬಟ್ಟಲ ಪ್ರಾಚಾರ್ಯರು ಎಂ.ಎನ್.ಆರ್.ಎ ಶಿಕ್ಷಣ ಮಹಾವಿದ್ಯಾಲಯ ರವರು ನಾಟಕ ತರಬೇತಿಯ ಉದ್ದೇಶ ಹಾಗೂ ಮಹಾವಿದ್ಯಾಲಯ ತನ್ನ ಪ್ರಶಿಕ್ಷಣಾರ್ಥಿಗಳಿಗೆ ನಾಟಕ ತರಬೇತಿ ನೀಡುವ ಹಾಗೂ ಯಶಸ್ವಿ ಪ್ರದರ್ಶನದ ವರೆಗೆ ನಡೆದು ಬಂದ ದಾರಿಯ ಕುರಿತು ವಿವರಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ