ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಚಿಗಡೊಳ್ಳಿ ಗ್ರಾಮದ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬುಧವಾರದಂದು ತಾಲೂಕಿನ ಚಿಗಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದ ಅವರು, ತಿಂಗಳೊಳಗೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಅವರು, ಗ್ರಾಮಕ್ಕೆ ಅಗತ್ಯವಿರುವ ಸಮುದಾಯ ಭವನ, ಶಾಲೆಯ ಕಂಪೌಂಡd ನಿರ್ಮಾಣ, ಶಾಲಾ ಕೊಠಡಿಗಳ ದುರಸ್ತಿ, ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಹಂತಹಂತವಾಗಿ ಈಡೇರಿಸುವುದಾಗಿ ಹೇಳಿದರು.
ಪ್ರಯಾಣಿಕರ ಅನುಕೂಲಕ್ಕಾಗಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯನ್ನು ದೊರಕಿಸಿಕೊಡಲಾಗುವುದು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸುತ್ತಿರುವುದಾಗಿ ಅವರು ಹೇಳಿದರು.
ಕಳೆದ ೧೫ ವರ್ಷಗಳಿಂದ ಅರಭಾವಿ ಕ್ಷೇತ್ರದ ಶಾಸಕನಾಗಿ ಕಾರ್ಯನಿರ್ವಹಿಸಲು ಕ್ಷೇತ್ರದ ಜನತೆ ಆಶೀರ್ವಾದ ಮಾಡುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಮನೋಭಾವನೆ ನನ್ನದಾಗಿದ್ದು, ಕ್ಷೇತ್ರದ ಸರ್ವತೋಮುಖ ಏಳ್ಗೆಗೆ ಸದಾ ಬದ್ಧನಿದ್ದೇನೆಂದು ಅವರು ಹೇಳಿದರು.
ಉತ್ತಮ ವ್ಯಕ್ತಿಯನ್ನು ಆರಿಸಿ: ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಗ್ರಾಮ ಪಂಚಾಯತಿಗೆ ಆಯ್ಕೆ ಮಾಡಿದರೆ ಗ್ರಾಮಾಭಿವೃದ್ಧಿ ಸಾಧ್ಯವಾಗುತ್ತದೆ. ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಕೆಲಸಗಾರರನ್ನು ಗ್ರಾಮ ಪಂಚಾಯತಿಗೆ ಚುನಾಯಿಸಿ ಅವರಿಂದ ಅಭಿವೃದ್ಧಿ ನಿರೀಕ್ಷಿಸುವಂತೆ ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಸದಸ್ಯರು ಸತ್ಕರಿಸಿದರು. ನಂತರ ಸಾರ್ವಜನಿಕರ ಕುಂದು ಕೊರತೆಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಆಲಿಸಿದರು.
ಮುಖಂಡರಾದ ರಾಮಣ್ಣಾ ಕಾಪಸಿ, ಲಕ್ಷ್ಮಣ ಮಸಗುಪ್ಪಿ, ಬಾಳಪ್ಪ ಬಿ.ಗೌಡರ, ಯಲ್ಲಪ್ಪ ಬಿ.ಗೌಡರ, ಯಲ್ಲಪ್ಪ ಮುರ್ಕಿಭಾವಿ, ಅಶೋಕ ಹರಿಜನ, ಮಾರುತಿ ನಾಯಿಕ, ಧರೆಪ್ಪ ಬಿ.ಗೌಡರ, ಕರೆಪ್ಪ ಬಿ.ಗೌಡರ, ಅಜ್ಜಪ್ಪ ಬಿ.ಗೌಡರ, ಲಕ್ಕಪ್ಪ ಹುಲಕುಂದ, ಮಹಾದೇವಿ ಬಿ.ಗೌಡರ, ಅಜ್ಜಪ್ಪ ದಂಡಿನ, ಮಸ್ತಾನ ಜಮಾದಾರ, ಶಾಲೆಯ ಪ್ರಧಾನ ಗುರು ಜಿ.ಎಸ್. ಬಿಸಗುಪ್ಪಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಬಸವರಾಜ ಕಿವಟಿ ಸ್ವಾಗತಿಸಿದರು. ಶಿಕ್ಷಕ ಎಸ್.ಎ. ಮುತಾಲಿಕದೇಸಾಯಿ ವಂದಿಸಿದರು.
ಅಡಿಬಟ್ಟಿಗೆ ಭೇಟಿ :
ಇದಕ್ಕೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಡಿಬಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಕಷ್ಠ-ಕಾರ್ಪಣ್ಯಗಳನ್ನು ವಿಚಾರಿಸಿದರು.
ಗ್ರಾಮದ ಪ್ರಮುಖ ಓಣಿಗಳಲ್ಲಿ ಕಾಂಕ್ರೀಟ ರಸ್ತೆ ನಿರ್ಮಾಣಕ್ಕೆ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ೧೫ ಲಕ್ಷ ರೂ.ಗಳನ್ನು ನೀಡುವ ವಾಗ್ದಾನ ಮಾಡಿದ ಅವರು, ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಿಕೊಡುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಚಂದ್ರಪ್ಪ ಮೆಳವಂಕಿ, ಅಡಿವೆಪ್ಪ ಕಂಕಾಳಿ, ಆನಂದ ಮೇಟಿ, ಮಲ್ಲಿಕಾರ್ಜುನ ಶಿಂತ್ರಿ, ಅಡಿವೆಪ್ಪ ಭಂಗಿ, ಇಟ್ಟಪ್ಪ ಬಸಳಿಗುಂದಿ, ತಿಪ್ಪಣ್ಣಾ ಭಂಗಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಶಾಲೆಯ ಮುಖ್ಯೋಪಾಧ್ಯಾಯರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು. ಅಡಿಬಟ್ಟಿಯ ವಿಠ್ಠಲ-ರುಕ್ಮೀಣಿ ದೇವಸ್ಥಾನದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ