ದೇವಸ್ಥಾನಕ್ಕೆ ಮತ್ತು ಸ್ಮಶಾನದ ಜಾಗಕ್ಕೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದ ಸತೀಶ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ಮಶಾನವೂ ಕೂಡ ಒಳ್ಳೆಯ ಜಾಗ ಎಂದು ಜನರಿಗೆ ಸಂದೇಶ ನೀಡುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮವನ್ನು ರುದ್ರಭೂಮಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಸದಾಶಿವನಗರ ಬುದ್ದ, ಬಸವ, ಅಂಬೇಡ್ಕರ್ ರುದ್ರಭೂಮಿಯಲ್ಲಿ ರಾಜ್ಯದ ಹಲವು ಮಠಾಧೀಶರ ನೇತೃತ್ವದಲ್ಲಿ ಸೋಮವಾರ ನಡೆದ ನೂತನ ಕಾರು ಚಾಲನಾ ಸಮಾರಂಭದ ಬಳಿಕ ಮಾತನಾಡಿದರು.
ದೇವಸ್ಥಾನಕ್ಕೆ ಮತ್ತು ಸ್ಮಶಾನದ ಜಾಗಕ್ಕೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಎಲ್ಲವೂ ಒಳ್ಳೆಯ ಸ್ಥಳಗಳೇ ಆದ್ರೆ, ಸಾವಿರಾರು ವರ್ಷಗಳಿಂದ ಜನರಿಗೆ ಸ್ಮಶಾನದ ಬಗ್ಗೆ ಭಯ ತುಂಬಲಾಗಿದೆ. ಇದನ್ನು ಹೋಗಲಾಡಿಸಲು ಇದೊಂದು ಸಣ್ಣ ಪ್ರಯತ್ನ ಎಂದರು.
ಮೌಢ್ಯದ ವಿರುದ್ದ ಹೋರಾಟಕ್ಕೆ ನಮ್ಮ ಮನೆಯೇ ಪ್ರೇರಣೆ. ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿಯೂ ಜ್ಯೋತಿಷಿಯೊಬ್ಬರ ಮೊರೆ ಹೋಗುತ್ತಿದ್ದರು, ಕರೋಶಿ ದರ್ಗಾಗೂ ನನ್ನನ್ನು ಕರೆದುಕೊಂಡು ಹೋಗಿ ಬಿಸಿಲಲ್ಲಿ ಮಲಗಿಸಿದ್ರು, ಇವೆಲ್ಲ ಗಮನಿಸಿ ಅಂದಿನಿಂದಲೇ ಈ ಹೋರಾಟಕ್ಕೆ ಮುಂದಾದೆ, ಮೌಢ್ಯ ವಿರುದ್ದ ಹೋರಾಟ ಮಾಡಲು ನಮ್ಮ ಮನೆಯೇ ಪ್ರೇರಣೆ ನೀಡಿದೆ. ವ್ಯಕ್ತಿಗತ ಅನುಭವವೇ ಮೌಢ್ಯದ ವಿರುದ್ದ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ಸುಮಾರು ೩೦ ವರ್ಷಗಳಿಂದ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ಮಾನವ ಬಂಧುತ್ವ ವೇದಿಕೆ ಮುಖಾಂತರವೂ ಹಲವಾರು ಕಾರ್ಯಕ್ರಮ ಮಾಡಿದ್ದೇವೆ. ಬುದ್ದ, ಬಸವ ಅಂಬೇಡ್ಕರ್ ಅವರ ಮೇಲೆ ನಂಬಿಕೆ ಇದೆ. ಅವರ ವಿಚಾರಗಳಿಂದ ಆಕರ್ಷಿತರಾಗಿದ್ದೇವೆ. ಮಹಾನ್ ನಾಯಕರ ಆದರ್ಶದಿಂದಲೇ ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಸತೀಶ್ ಹೇಳಿದರು.
ನಮ್ಮ ಹೋರಾಟದ ಪ್ರತಿಫಲವಾಗಿ ಪ್ರತಿಯೊಬ್ಬರ ಮನೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಅವರ ಭಾವಚಿತ್ರ ನೋಡಲು ಸಿಗುತ್ತಿವೆ. ಅಂಬೇಡ್ಕರ್ ಅವರ ೭೦ ವರ್ಷದ ಹೋರಾಟ ಈಗ ಫಲ ನೀಡುತ್ತಿದೆ. ಅದೇ ರೀತಿ ನಮ್ಮ ಹೋರಾಟವೂ ಮುಂದೊಂದು ದಿನ ಫಲ ನೀಡುತ್ತವೆ. ಯಾರೇ ವಿರೋಧ ವ್ಯಕ್ತಪಡಿಸಿದರೂ ಕೂಡ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಇದೇ ವೇಳೆ ಸ್ಮಶಾನದಲ್ಲಿ ಕಾರು ಚಾಲನೆ ನೀಡಿದ್ದರ ಬಗ್ಗೆ ವಿವರಿಸಿದ ಅವರು, ದೇಶದ ಜನರಲ್ಲಿ ಸ್ಮಶಾನ ಎಂದ್ರೆ ಭಯವಿದೆ. ಅದನ್ನು ಮೊದಲು ತೊಲಗಿಸಬೇಕು. ಆ ನಿಟ್ಟಿನಲ್ಲಿ ಸ್ಮಶಾನದಿಂದ ಕಾರಿಗೆ ಚಾಲನೆ ನೀಡಲಾಗಿದೆ. ದೇವಸ್ಥಾನಗಳಲ್ಲಿ ಪೂಜೆ ಮಾಡಿದ ಗಾಡಿಗಳು ಅಪಘಾತಕ್ಕೀಡಾದ ಹಲವು ಘಟನೆಗಳು ನಮ್ಮ ಕಣ್ಮುಂದೆ ಇವೆ ಎಂತಲೂ ತಿಳಿಸಿದರು.
ಈ ಸಂದರ್ಭದಲ್ಲಿ ರಾಜನಹಳ್ಳಿ ವಾಲ್ಮೀಕಿಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಬೈಲಹೊಂಗಲ ನಿಜಗುಣ ಪ್ರಭು ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭು ಚನ್ನ ಬಸವ ಸ್ವಾಮೀಜಿ, ಬಸವ ಬೆಳವಿ ಶರಣ ಬಸವ ಸ್ವಾಮೀಜಿ, ವೈದ್ಯ ಬಸವರಾಜ ಪಂಡಿತ ಗುರುಗಳು, ಹಣಮಾಪೂರ ಅಮರೇಶ್ವರ ಸ್ವಾಮೀಜಿ, ಘಟಪ್ರಭಾ ಮಲ್ಲಿಕಾರ್ಜುನ ಮಹಾಸ್ವಾಮಿ, ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ವೀರಕುಮಾರ ಪಾಟೀಲ, ಜಿ.ಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಸಿದ್ಧು ಸುಣಗಾರ, ಮುನ್ನಾ ಭಾಗವಾನ್ ಮೊದಲಾದವರಿದ್ದರು.
ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕರ್ ಸ್ವಾಗತಿಸಿದರು. ರಾಮಕೃಷ್ಣ ಪಾನಬುಡೆ ನಿರೂಪಿಸಿ, ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ