Kannada NewsKarnataka News

ಗೋವಾಕ್ಕೆ ವಿದ್ಯುತ್ ಪೂರೈಸಲು ಪಶ್ಚಿಮಘಟ್ಟದ ಕಾಡು ನಾಶ: ವಿದ್ಯುತ್ ಮಾರ್ಗ ಪ್ರಸ್ತಾವನೆಯನ್ನು ಕೈಬಿಡಿ

3 ಜಿಲ್ಲೆಗಳ ಅರವತ್ತು ಸಾವಿರ ಮರಗಳ ಹನನ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗೋವಾ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಮೂಲಕ ಹಾದು ಹೋಗಲಿರುವ ವಿದ್ಯುತ್ ಮಾರ್ಗ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನೆರೆಯ ಗೋವಾ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸಲು ರಾಜ್ಯದ ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾ ರಾಜ್ಯಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಲು ಗೋವಾ ತಮ್ನಾರ್ ಟ್ರಾನ್ಸ್ ಮಿಷನ್ ಪ್ರಾಜೆಕ್ಟ್ ಲಿಮಿಟೆಡ್ ಎಂಬ ಬಳಕೆದಾರ ಸಂಸ್ಥೆ ಕರ್ನಾಟಕ ಹಾಗೂ ಗೋವಾ ರಾಜ್ಯದಲ್ಲಿ ಅರಣ್ಯ ಪರಿವರ್ತನೆಗೆ ಅರ್ಜಿ ಸಲ್ಲಿಸಿದೆ.

ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅಂದಾಜು 4.7 ಹೆಕ್ಟೇರ್, ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 101 ಹೆಕ್ಟೇರ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 70 ಹೆಕ್ಟೇರ್ ಸೇರಿದಂತೆ ಒಟ್ಟೂ 177 ಹೆಕ್ಟೇರ್ ಅರಣ್ಯ ಪ್ರದೇಶದ ಪರಿವರ್ತನೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು 177 ಹೆಕ್ಟೇರ್ ಪೈಕಿ ಬಹುಪಾಲು ಭಾಗ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಬರುತ್ತದೆ.

 

ದಾಂಡೇಲಿ ಅಭಯಾರಣ್ಯ ಹಾಗೂ ಖಾನಾಪುರ ಅರಣ್ಯ ಪ್ರದೇಶಗಳಿಗೆ ಕುತ್ತು 

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಉದ್ದೇಶಿತ ವಿದ್ಯುತ್ ಮಾರ್ಗ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ದಾಂಡೇಲಿ ಆನೆ ಧಾಮ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದ ಡೀಮ್ಡ್ ಪರಿಸರ ಸೂಕ್ಷ್ಮ ವಲಯ, ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಡೀಮ್ಡ್ ಪರಿಸರ ಸೂಕ್ಷ್ಮ ವಲಯ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಭಯಾರಣ್ಯದ ಮೂಲಕವೇ ಹಾದುಹೋಗಲಿದ್ದು ಈ ಪ್ರದೇಶಗಳು ಹುಲಿ, ಚಿರತೆ, ಆನೆ, ಕೆನ್ನಾಯಿ, ಕಾಳಿಂಗಸರ್ಪ, ಮಂಗಟ್ಟೆ (ಹಾರ್ನ್‌ಬಿಲ್) ಸೇರಿದಂತೆ ಇನ್ನೂ ಅನೇಕ ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿವೆ ಎಂದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ, 1980 ಜಾರಿಗೆ ಬಂದಾಗಿನಿಂದ 9600 ಹೆಕ್ಟೇರ್ ಗೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸಲು ಒಪ್ಪಿಗೆ ನೀಡಲಾಗಿದೆ. ಇನ್ನು 1980 ಕ್ಕೂ ಮೊದಲು ಕೂಡ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗಳಿಗೆ ಉಪಯೋಗಿಸಲಾಗಿದ್ದು ತನ್ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾದ ಉತ್ತರ ಕನ್ನಡದಲ್ಲಿ ಅರಣ್ಯ ಪ್ರದೇಶವು ಪ್ರತಿ ವರ್ಷ ತೀವ್ರಗತಿಯಲ್ಲಿ ಕಣ್ಮರೆಯಾಗುತ್ತಿದೆ. ಇನ್ನು ರಾಜ್ಯದ ಪಶ್ಚಿಮ ಘಟ್ಟಗಳ ಹೆಬ್ಬಾಗಿಲೆಂದೇ ಕರೆಯಲಾಗುವ ಹಾಗೂ ಹಲವಾರು ನದಿ, ಹಳ್ಳ-ಕೊಳ್ಳಗಳ ಮೂಲವಾಗಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅರಣ್ಯ ಪ್ರದೇಶಗಳು ರಾಷ್ಟ್ರೀಯ ಹೆದ್ದಾರಿ 4ಏ, ರೈಲ್ವೆ ಮಾರ್ಗ, ಅಳ್ನಾವರ್- ರಾಮನಗರ ರಾಜ್ಯ ಹೆದ್ದಾರಿ ಸೇರಿದಂತೆ ಹಲವಾರು ಯೋಜನೆಗಳಿಂದ ಈಗಾಗಲೇ ಸಾಕಷ್ಟು ಹಾನಿಗೊಳಗಾಗಿವೆ. ಒಂದು ವೇಳೆ ವಿದ್ಯುತ್ ಮಾರ್ಗಕ್ಕೆ ಅನುಮತಿ ನೀಡಿದಲ್ಲಿ ಅರಣ್ಯ ಪ್ರದೇಶಗಳ ಮೇಲೆ ಗಂಭೀರ ಪರಿಣಾಮವಾಗಲಿದ್ದು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳಿಗೆ ಸರಿಪಡಿಸಲಾಗದಂತಹ ಹಾನಿಯಾಗಲಿದೆ ಎಂದಿದ್ದಾರೆ.

 

ಪ್ರಸ್ತಾವನೆ ತಿರಸ್ಕಾರ ಅತ್ಯವಶ್ಯ:

ತಂತ್ರಜ್ಞಾನ ಪ್ರಗತಿಯನ್ನು ತೀವ್ರಗತಿಯಲ್ಲಿ ಹೊಂದುತ್ತಿರುವ ಭಾರತ ದೇಶದಲ್ಲಿ ಗಾಳಿ, ಉಬ್ಬರವಿಳಿತ, ಸೌರ ಮತ್ತು ಭೂಶಾಖದಂಥ ನವೀಕರಿಸಲಾಗುವ ಶಕ್ತಿಯ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಬೇಕೆ ವಿನಃ ಹಿಮಾಲಯ ಪರ್ವತಗಳಿಗಿಂತಲೂ ಹಳೆಯದಾದ ಹಾಗೂ ನೂರಾರು ನದಿಗಳಿಗೆ ಮೂಲವಾಗಿ, ಸಕಾಲದಲ್ಲಿ ಮಳೆ ಸುರಿಸಿ ತನ್ಮೂಲಕ ಕೋಟಿಗಟ್ಟಲೆ ಜನರ ಜೀವನಾಧಾರವಾಗಿರುವ ಪಶ್ಚಿಮ ಘಟ್ಟಗಳನ್ನು ನಾಶಪಡಿಸಿ ವಿದ್ಯುತ್ ಮಾರ್ಗವನ್ನು ನಿರ್ಮಿಸುವುದು ಸಮಂಜಸವಲ್ಲ. ಹಾಗೂ ಒಂದು ವೇಳೆ ನಿರ್ಮಿಸಿದ್ದೇ ಆದಲ್ಲಿ ಈಗಾಗಲೇ ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆ ಕುಡಿಯುವ ನೀರಿಗೂ ಕೂಡ ಪರಿತಪಿಸುವ ದಿನಗಳು ಬಂದರೆ ಆಶ್ಚರ್ಯ ಪಡಬೇಕಿಲ್ಲ. ಅಥವಾ ಇತ್ತೀಚೆಗೆ ಕೊಡಗಿನಲ್ಲುಂಟಾದ ಜಲಪ್ರಳಯದಂತಹ ಅನಾಹುತ ಈ ಭಾಗದಲ್ಲಿ ಸಂಭವಿಸಿದರೂ ಅಚ್ಚರಿ ಪಡಬೇಕಿಲ್ಲ. ಅಲ್ಲದೇ ಈಗಾಗಲೇ ತೀವ್ರ ರೀತಿಯಲ್ಲಿ ಹಾನಿಗೊಳಗಾಗಿರುವ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವನ್ಯಜೀವಿಗಳ ಆವಾಸಸ್ಥಾನಕ್ಕೆ ಮತ್ತಷ್ಟು ಧಕ್ಕೆಯಾಗಲಿದ್ದು ಮಾನವ- ವನ್ಯಜೀವಿ ಸಂಘರ್ಷದ ಹೆಚ್ಚಳಕ್ಕೆ ನಾಂದಿಯಾಗಲಿದೆ. ಅಲ್ಲದೇ ಸದರಿ ಯೋಜನೆ ಅನುಷ್ಠಾನಗೊಂಡರೆ ಮೂರು ಜಿಲ್ಲೆಗಳಲ್ಲಿ ಅಂದಾಜು ಅರವತ್ತು ಸಾವಿರ ಮರಗಳ ಹನನವಾಗಲಿದೆ.

 

ಎಲ್ಲಕ್ಕಿಂತ ಮುಖ್ಯವಾಗಿ ಸದರಿ ಯೋಜನೆ ಅನುಷ್ಠಾನಗೊಳಿಸಲು ಗೋವಾ ರಾಜ್ಯದಲ್ಲಿ ಅರಣ್ಯ ಪರಿವರ್ತನೆಗೆ ಅವಕಾಶ ನೀಡಬಾರದೆಂದು ಗೋವಾ ರಾಜ್ಯದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಈಗಾಗಲೇ ಯೋಜನೆ ರದ್ದುಗೊಳಿಸಲು ಕೋರಿ ಗೋವಾ ರಾಜ್ಯದ ಕೆಲವು ಸ್ಥಳೀಯರು ಬಾಂಬೆ ಉಚ್ಚ ನ್ಯಾಯಾಲಯ ಹಾಗೂ ಕೇಂದ್ರೀಯ ಉನ್ನತಾಧಿಕಾರ ಸಮಿತಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ

 

ಆದ್ದರಿಂದ ವಿದ್ಯುಚ್ಛಕ್ತಿ ಉತ್ಪಾದಿಸಲು ಹಲವಾರು ಪರ್ಯಾಯ ಆಯ್ಕೆಗಳಿರುವ ಗೋವಾದಂತಹ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸಲು ಪಶ್ಚಿಮ ಘಟ್ಟಗಳ ಅತ್ಯಮೂಲ್ಯ ಅರಣ್ಯ ಪ್ರದೇಶಗಳನ್ನು ಪರಿವರ್ತನೆ ಮಾಡಲು ಬಳಕೆದಾರ ಸಂಸ್ಥೆಗೆ ಅನುಮತಿ ನೀಡುವುದು ಸೂಕ್ತವಲ್ಲ.

ಆದ್ದರಿಂದ ಸದರಿ ವಿದ್ಯುತ್ ಮಾರ್ಗ ಪ್ರಸ್ತಾವನೆಯನ್ನು ಆರಂಭಿಕ ಹಂತದಲ್ಲಿಯೇ ತಿರಸ್ಕರಿಸುವುದು ಅತ್ಯವಶ್ಯವಾಗಿದ್ದು ತನ್ಮೂಲಕ ರಾಜ್ಯದ ಅರಣ್ಯ ಹಾಗೂ ವನ್ಯಜೀವಿಗಳ ಹಿತ ಕಾಪಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button