Karnataka NewsLatestPolitics

*ರಾಜ್ಯದ ಬರ ನಿರ್ವಹಣೆಗೆ ಸರ್ಕಾರ ಸಮರ್ಪಕ ಕ್ರಮವಹಿಸಿದೆ; ಸಚಿವ ಕಂದಾಯ ಸಚಿವ ಕೃಷ್ಣ ಭೈರೇಗೌಡ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾಗಿದ್ದು, ಈಗಾಗಲೇ 223 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಖಾತೆಗಳಲ್ಲಿ ಬರ ನಿರ್ವಹಣೆಗೆ ಒಟ್ಟು ರೂ.895 ಕೋಟಿ ಹಣ ಮೀಸಲಿರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

ಸೋಮವಾರ ಚಳಿಗಾಲದ ವಿಧಾನಸಭೆ ಕಲಾಪದಲ್ಲಿ ಬರ ನಿರ್ವಹಣೆ ಕುರಿತ ಚರ್ಚೆಯ ಮೇಲೆ ಉತ್ತರಿಸಿ ಮಾತನಾಡಿದರು. ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಜೂನ್‍ನಲ್ಲಿ ಶೇ.57, ಆಗಸ್ಟ್‍ನಲ್ಲಿ ಶೇ.73, ಸ್ಪೆಪ್ಟಂಬರ್‍ನಲ್ಲಿ ಶೇ.10 ರಷ್ಟು ಹಾಗೂ ಅಕ್ಟೋಬರ್‍ನಲ್ಲಿ ಶೇ.65 ರಷ್ಟು ಮಳೆಯ ಕೊರತೆಯಾಗಿದೆ. ಪ್ರಸಕ್ತ ವರ್ಷ 82.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೇ ಶೇ.74 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದಾಗಿ 46 ಲಕ್ಷ ಹೆಕ್ಟೇರ್ ಕೃಷಿ, 2 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿ 48 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಸಚಿವರ ಬರ ಅಧ್ಯಯನ: ರಾಜ್ಯದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ಜನರ ಸಂಕಷ್ಟಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತೊಂದರೆಯಾಗದಂತೆ ಕ್ರಮವಹಿಸಲು ರಾಜ್ಯ ಸರ್ಕಾರ ಅನೇಕ ರೀತಿಯ ಪರಿಹಾರಗಳನ್ನು ಕೈಗೊಂಡಿದೆ. ಮುಖ್ಯಮಂತ್ರಿಗಳು ಬರ ನಿರ್ವಹಣೆಗಾಗಿ ಮೂರು ಸಭೆಗಳನ್ನು ಜರುಗಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಸರ್ಕಾರವು ಬರ ನಿರ್ವಹಣೆಗಾಗಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಈಗಾಗಲೇ 8 ಸಭೆಗಳನ್ನು ಜರುಗಿಸಿ ಬರ ಪರಿಸ್ಥಿತಿ ಹಾಗೂ ಜಿಲ್ಲಾಡಳಿಗಳು ಕೈಗೊಂಡಿರುವ ಮುಂಜಾಗ್ರತೆ ಹಾಗೂ ಪರಿಹಾರ ಕ್ರಮಗಳನ್ನು ಪರಾಮರ್ಶಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದೆ. ರಾಜ್ಯದ 22 ಜಿಲ್ಲೆಗಳಿಗೆ ಸ್ವತಃ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಬರಗಾಲದ ಸ್ಥಿತಿಯನ್ನು ಅವಲೋಕಿಸಿದ್ದೇನೆ. ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ಆಯಾ ವಿಭಾಗದ ಜಿಲ್ಲಾಧಿಕಾರಿಗಳ ಹಾಗೂ ತಹಶೀಲ್ದಾರರ ಸಭೆ ಜರುಗಿಸಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ 133 ಸಭೆಗಳನ್ನು ಜರುಗಿಸಿದ್ದಾರೆ ಎಂದರು.

18,171 ಕೋಟಿ ನೆರವು ಕೋರಿ ಕೇಂದ್ರಕ್ಕೆ ಮನವಿ: ರಾಜ್ಯದ 223 ತಾಲೂಕುಗಳು ತೀವ್ರ ಬರ ಪೀಡಿತ ಪ್ರದೇಶಗಳಾಗಿರುವುದರಿಂದ ರಾಜ್ಯ ಸರ್ಕಾರವು ರಾಜ್ಯದ ಪರಿಸ್ಥಿತಿಯನ್ನು ಅಧ್ಯಯನ ನಡೆಸಿ, ಅವಲೋಕಿಸಿ, ರೂ. 18,171 ಕೋಟಿ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಅಂತರ ಮಂತ್ರಾಲಯ ತಾಂತ್ರಿಕ ಸಮಿತಿ (ಐ.ಎಮ್.ಟಿ.ಸಿ.) ರಾಜ್ಯದ 13 ಜಿಲ್ಲೆಗಳಲ್ಲಿ ಬರ ಅಧ್ಯಯನ ಪ್ರವಾಸ ಮಾಡಿದೆ. ಅಧ್ಯಯನದ ನಂತರ ರಾಜ್ಯ ಸರ್ಕಾರದ ಅಧಿಕಾರಿಗಳು, ಮುಖ್ಯಮಂತ್ರಿಗಳೊಂದಿಗೂ ಸಮಾಲೋಚಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಆದರೆ ಕೇಂದ್ರದಿಂದ ಇಲ್ಲಿಯವರೆಗೂ ಯಾವುದೇ ಪರಿಹಾರ ರಾಜ್ಯಕ್ಕೆ ಬಂದಿಲ್ಲ. ಆದಷ್ಟು ಬೇಗ ಕೇಂದ್ರ ನೆರವು ನೀಡಬೇಕೆಂದು ಕಂದಾಯ ಸಚಿವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ: ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಯಾವುದೇ ಗ್ರಾಮ ಹಾಗೂ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಂಡು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ 26 ಗ್ರಾಮಗಳಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಇದೆ. ಇವುಗಳಲ್ಲಿ 11 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು 9 ಗ್ರಾಮಗಳಿಗೆ ಖಾಸಗಿ ಬೋರವೇಲ್ ಬಾಡಿಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶದ ನಾಲ್ಕು ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಕೊರತೆಯಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಭವಿಷ್ಯದಲ್ಲಿ 6,237 ಗ್ರಾಮಗಳಲ್ಲಿ ಸಮಸ್ಯೆ ಸಾಧ್ಯತೆ: ರಾಜ್ಯ ಸರ್ಕಾರವು ಸಮರ್ಥವಾಗಿ ಬರ ನಿರ್ವಹಿಸಲು ಪ್ರೋ ಆ್ಯಕ್ಟಿವ್ ಆಗಿ ಕೆಲಸ ಮಾಡಿದೆ. ಕಳೆದ 10 ವರ್ಷಗಳ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಜನವರಿ-ಫೆಬ್ರವರಿ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಸುಮಾರು 6,237 ಸಮಸ್ಯಾತ್ಮಕ ಗ್ರಾಮಗಳನ್ನು ಮತ್ತು ನಗರ ಪ್ರದೇಶದ 914 ವಾರ್ಡ್‍ಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಪ್ರದೇಶಗಳೆಂದು ಗುರುತಿಸಿ ಮುಂಜಾಗ್ರತೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಈಗಾಗಲೇ 3,672 ಖಾಸಗಿ ಬೋರವೇಲ್‍ಗಳನ್ನು ಗುರುತಿಸಿ ಬಾಡಿಗೆಗೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಮತ್ತು ಉಳಿದಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಶಾಸಕರ ಅಧ್ಯಕ್ಷತೆಯ ಟಾಸ್ಕ್‍ಫೋರ್ಸ್ ಕ್ರಿಯಾಶೀಲ: ಪ್ರತಿ ತಾಲೂಕಿನಲ್ಲಿ ಬರ ನಿರ್ವಹಣೆಗಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳನ್ನು ರಚಿಸಿ, ಅಗತ್ಯ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಶಾಸಕರ ಅಧ್ಯಕ್ಷತೆಯ 183 ಟಾಸ್ಕ್‍ಫೋರ್ಸ್ ಸಮಿತಿ ಸಭೆಗಳು ಜರುಗಿವೆ. ಗ್ರಾಮ ಪಂಚಾಯತ್ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ರಚನೆ: ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಗುರುತಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತ್ ಮಟ್ಟದ ಟಾಸ್ಕ್‍ಪೋರ್ಸ್ ರಚಿಸಿದೆ. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ.), ಕುಡಿಯುವ ನೀರು ವಿಭಾಗದ ಅಸಿಸ್ಟಂಟ್ ಇಂಜನಿಯರ್ ಮತ್ತು ಗ್ರಾಮ ಆಡಳಿತ ಅಧಿಕಾರಿ ಇರುವ ಈ ಸಮಿತಿಯು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ಮೇವು ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಈ ಕುರಿತು ನಿರ್ಣಯ ಕೈಗೊಂಡು ತಹಶೀಲ್ದಾರರಿಗೆ ಸಲ್ಲಿಸಬೇಕು. ಈ ಸಮಿತಿ ಮನವಿಯನ್ನು ಪರಿಗಣಿಸಿ 24 ಗಂಟೆಯಲ್ಲಿ ನೀರು ಪೂರೈಸಲು ತಹಶೀಲ್ದಾರರು ತಕ್ಷಣ ಕ್ರಮವಹಿಸಬೇಕು. ವಿಶೇಷವಾಗಿ ಈ ಸಮಿತಿ ಕುಡಿಯುವ ನೀರಿನ ಕುರಿತು ಮತ್ತು ಮೇವು, ಟ್ಯಾಂಕರ್ ನೀರು ಸರಬರಾಜು, ಬಾಡಿಗೆ ಬೋರವೇಲ್, ನೀರು ಸರಬರಾಜು ಪೈಪ್‍ಲೈನ್ ದುರಸ್ತಿ ಕಾರ್ಯಗಳಿಗೆ ಗಮನಹರಿಸಲಿದೆ. ಇದಕ್ಕಾಗಿ ಅನುದಾನ ಕೊರತೆಯಾಗದಂತೆ ತಹಶೀಲ್ದಾರರ ಖಾತೆಗೆ ರೂ. 50 ಲಕ್ಷ ಬಿಡುಗಡೆ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸದನದಲ್ಲಿ ತಿಳಿಸಿದರು.

ಮೊದಲ ಕಂತು ರೂ. 2,000 ಗಳ ಬರ ಪರಿಹಾರ ಬಿಡುಗಡೆ: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಆದರೂ ರಾಜ್ಯ ಸರ್ಕಾರವು ಮೊದಲ ಕಂತಾಗಿ ರೂ. 2,000 ಗಳನ್ನು ಬರ ಪರಿಹಾರವಾಗಿ ನೀಡಲು ನಿರ್ಧರಿಸಿದೆ. ಈ ವಾರದಲ್ಲಿ ರಾಜ್ಯದ ರೈತರಿಗೆ ಪರಿಹಾರ ಹಣ ಜಮೆಯಾಗಲಿದೆ. ಪರಿಹಾರ ಹಣ ದುರುಪಯೋಗ ಆಗಿರುವ ಬಗ್ಗೆ ಹಿಂದಿನ ಪ್ರಕರಣಗಳ ಹಿನ್ನೆಲೆಯಲ್ಲಿ ಯಾವುದೆ ಹಸ್ತಕ್ಷೇಪ ಇಲ್ಲದೇ ನೇರವಾಗಿ ಆಯಾ ರೈತರ ಖಾತೆಗೆ ಆಟೋಮೆಟಿಕ್ ಮೋಡ್‍ನಲ್ಲಿ ಜಮೆಯಾಗುವಂತೆ ಕ್ರಮಕೈಗೊಳ್ಳಲಾಗಿದೆ. ಈ ವಾರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಪರಿಹಾರ ಜಮೆ ಮೊದಲ ಪೇಮೆಂಟ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವರು ಸದನದಲ್ಲಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button