ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಪ್ರಕರಣದ ಎ1 ಆರೋಪಿಯನ್ನು ಬಂಧಿಸಿಲ್ಲ ಏಕೆ? ಇದರ ಹಿಂದೆ ರಾಜ್ಯ ಸರ್ಕಾರದ ಪ್ರಭಾವವಿರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬ. ಅವರಿಗೆ ನಾನು ಶುಭಾಷಯ ತಿಳಿಸುತ್ತೇನೆ. ಆದರೆ ಇದೇ ಸಂದರ್ಭದಲ್ಲಿ ದೇಶದಲ್ಲಿನ ನಿರುದ್ಯೋಗಿಗಳು ಭ್ರಮನಿರಸನಗೊಂಡಿದ್ದಾರೆ. ಪ್ರಧಾನಿ ಮೋದಿ ಹುಟ್ಟುಹಬ್ಬದಂದೇ ನಿರುದ್ಯೋಗ ದಿನ ಆಚರಿಸುತ್ತಿದ್ದಾರೆ ಎಂದರು.
ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ರಾಜ್ಯ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಹಿಂದೆ ಬಿಜೆಪಿಯವರು ಯಾವುದೇ ಪ್ರಕರಣವನ್ನೂ ಸಿಬಿಐ, ಸಿಐಡಿಗೆ ವಹಿಸಿ ಎನ್ನುತ್ತಿದ್ದರು. ಈಗ ಈ ಬಗ್ಗೆ ಅವರಿಗೆ ಬಾಯಿ ಬರುತ್ತಿಲ್ಲ. ಇಡೀ ಡ್ರಗ್ಸ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ಹೇಳಿದರು.
ಇನ್ನು ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಕೊರೊನಾ ಪಾಸೀಟಿವ್ ಕೇಸ್ ನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಬ್ರೆಜಿಲ್, ಸ್ಪೇನ್, ಇಟಲಿಯನ್ನು ಭಾರತ ಹಿಂದಿಕ್ಕಿದೆ. ಕೆಲ ದಿನದಲ್ಲಿ ಭಾರತ ಕೊರೊನಾ ಸೋಂಕಿನಲ್ಲಿ ಪ್ರಥಮ ಸ್ಥಾನಕ್ಕೂ ಹೋಗಬಹುದು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ