ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ವಿರುದ್ಧ ಪ್ರತ್ಯೇಕ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ಪಂಥ್, ನಟಿ ರಾಗಿಣಿ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಸರ್ಚ್ ವಾರಂಟ್ ಪಡೆದು ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಏನೂ ಸಿಕ್ಕಿಲ್ಲ. ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಕಂಪೂಟರ್ ಗಳನ್ನು ಸೀಜ್ ಮಾಡಲಾಗಿದೆ ಎಂದರು.
ಸಿಸಿಬಿ ಮತ್ತು ಬೆಂಗಳೂರು ಸಿಟಿ ಪೊಲೀಸರು ಕಳೆದ 1 ತಿಂಗಳಿನಿಂದ ಡ್ರಗ್ಸ್ ಮಾಫಿಯಾ ವಿರುದ್ಧ ತನಿಖೆ ನಡೆಸುತ್ತಿದ್ದರು. ಗಾಂಜಾ ಪ್ರಕರಣವೊಂದರ ಆರೋಪಿಗಳ ಮೊಬೈಲ್ ನಿಂದಾಗಿ ಮಾಹಿತಿಗಳು ಸಿಕ್ಕಿದ್ದವು. ಇದರ ಆಧಾರದ ಮೇಲೆ ತನಿಖೆ ವೇಳೆ ಸರ್ಕಾರಿ ನೌಕರ ರವಿಶಂಕರ್ ಹಾಗೂ ಉದ್ಯಮಿ ರಾಹುಲ್ ಎಂಬುವವರು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು.
ಈ ವೇಳೆ ಪೊಲೀಸರು ಅವರನ್ನು ಹತ್ತಿರದಿಂದ ಹಿಂಬಾಲಿಸಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಅವರು ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವುದು ಖಚಿತವಾಗಿತ್ತು. ಪೊಲೀಸರು ಖುದ್ದು ಪರಿಶೀಲನೆ ನಡೆಸಿ ಖಚಿತ ಪಡಿಸಿಕೊಂಡ ಮೇಲೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳಿಬ್ಬರೂ ಹಲವರ ಹೆಸರನ್ನು ಹೇಳಿದ್ದಾರೆ. ರವಿಶಂಕರ್ ರಾಗಿಣಿ ಹೆಸರು ಹೇಳಿದ್ದು ಈಗಾಗಲೇ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇನ್ನು ಉದ್ಯಮಿ ರಾಹುಲ್ ವಿದೇಶಗಳಿಂದ ಡ್ರಗ್ಸ್ ತಂದು ಸಪ್ಲೈ ಮಾಡುತ್ತಿದ್ದ. ಇಬ್ಬರು ಆರೋಪಿಗಳಿಗೂ ನಟಿಯರ ಜತೆ ಸಂಪರ್ಕವಿದ್ದು, ಹೈಫೈ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಡ್ರಗ್ಸ್ ಮಾಫಿಯಾ ಸಂಬಂಧ ಹಲವರನ್ನು ತನಿಖೆಗೆ ಒಳಪಡಿಸಲಾಗಿದೆ. ಇನ್ನು ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ