ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಆನೆಗಳು ಶುಕ್ರವಾರ ರಾತ್ರಿ ದಿಢೀರ್ ಕಾದಾಟಕ್ಕೆ ಇಳಿದು ಅರಮನೆಯಿಂದ ಹೊರಬಂದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮಳೆಕಾರಣ ಆನೆಗೆಳಿಗೆ ಅರಮನೆ ಆವರಣದಲ್ಲೇ ತಾಲೀಮು ನಡೆಸಲಾಗಿತ್ತು. ನಂತರ ರಾತ್ರಿ 7.45ರ ಸಮಯದಲ್ಲಿ ಧನಂಜಯ್ ಹಾಗೂ ಕಂಜನ್ ಆನೆಗಳ ನಡುವೆ ಗುದ್ದಾಟ ಶುರುವಾಗಿತ್ತು. ರಾತ್ರಿ ಊಟ ಮಾಡುವ ವೇಳೆ ಈ ಗಲಾಟೆ ಆರಂಭವಾಗಿತ್ತು. ಪರಿಣಾಮ ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಏಕಾಏಕಿ ಕಂಜನ್ ಹಾಗೂ ಧನಂಜಯ ಆನೆಗಳು ಓಡಿಕೊಂಡು ಹೊರಬಂದಿವೆ. ಮಾವುತನಿಲ್ಲದೆ ಕಂಜನ್ ಆನೆಯನ್ನು ಅರಮನೆಯಿಂದ ಧನಂಜಯ್ ಆನೆ ಹೊರಗೆ ಓಡಿಸಿಕೊಂಡು ಬಂದಿತ್ತು. ಇದರಿಂದ ಕೆಲಕಾಲ ಜನ, ಮಾವುತರು, ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಯಿತು. ಆನೆಗಳು ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿಹೋದರು.
ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತಿತು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ