ಮಹಿಳೆಗೆ ಅತ್ಯುನ್ನತ ಸ್ಥಾನ ನೀಡಿದ ರಾಷ್ಟ್ರ ಭಾರತ: ಈಶ್ವರ ಖಂಡ್ರೆ
ಪ್ರಗತಿವಾಹಿನಿ ಸುದ್ದು, ಅಬ್ಬಿಗೇರಿ : ಕೆಡಕಿನ ಮೇಲೆ ಒಳಿತಿನ ಗೆಲುವು, ಅಸತ್ಯದ ಮೇಲೆ ಸತ್ಯದ ಗೆಲುವು, ಅಧರ್ಮದ ಮೇಲೆ ಧರ್ಮದ ಗೆಲುವಿನ ಸಂಭ್ರಮಾಚರಣೆಯೇ ದಸರಾ ಮಹೋತ್ಸವದ ತಿರುಳು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಬಾಳೆ ಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಮಹೋನ್ನತ ಸಂದೇಶದೊಂದಿಗೆ ನಡೆಯುತ್ತಿರುವ ಈ ದಸರಾ ಮಹೋತ್ಸವ ದೇಶಕ್ಕೇ ಮಾದರಿಯಾಗಿದೆ ಎಂದರು.
ಕಾಮ, ಕ್ರೋದ, ಲೋಭ, ಮೋಹವೇ ಮೊದಲಾದ ಅರಿಷಡ್ವರ್ಗಗಳನ್ನು ನಾವು ಗೆದ್ದರೆ ಆಗ ವಿಜಯದಶಮಿಯ ಆಚರಣೆಗೆ ಅರ್ಥ ಬರುತ್ತದೆ. ಭಾರತದ ಸಂಪ್ರದಾಯ, ಸಂಸ್ಕೃತಿ ಮಹೋನ್ನತವಾಗಿದ್ದು, ಮಹಿಳೆಯರಿಗೆ ಅತ್ಯುನ್ನತ ಸ್ಥಾನ ನೀಡಿದ ರಾಷ್ಟ್ರ ಭಾರತ. ಹೀಗಾಗಿಯೇ ಶಕ್ತಿ ಸ್ವರೂಪಿಣಿಯಾದ ನವದುರ್ಗೆಯರನ್ನು ನಾವು ಪೂಜಿಸುತ್ತೇವೆ ಎಂದರು.
ದೇವಿಯ ಆರಾಧನೆ ಮಾಡುವ ನಾವು ಮಹಿಳೆಯರಿಗೆ ಗೌರವ ನೀಡುವುದನ್ನು ಕಲಿಯಬೇಕು. ಮಹಿಳೆಯರ ಮಾನ ರಕ್ಷಣೆ ಮಾಡುವ ಹೊಣೆ ಹೊರಬೇಕು. ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಬೇಕು. ಈ ನಿಟ್ಟಿನಲ್ಲಿ ಬಾಳೆ ಹೊನ್ನೂರು ಮಠ ಮಾಡುತ್ತಿರುವ ಕಾರ್ಯ ಮಹತ್ವದ್ದು ಎಂದರು.
ಸರ್ವರಿಗೂ ಲೇಸನ್ನೇ ಬಯಸುವ ಏಕೈಕ ಧರ್ಮ ವೀರಶೈವ ಲಿಂಗಾಯಿತ ಧರ್ಮವಾಗಿದೆ. ನಾವು ಲಿಂಗಾಯತರು ಬೇರೆ ಅಲ್ಲ, ವೀರಶೈವರು ಬೇರೆ ಅಲ್ಲ. ನಾವೆಲ್ಲರೂ ಒಂದೇ ಎಂದು ಹೇಳಿದರು.
ಸಾವಿರ ಕೆರೆಗಳ ಸರದಾರ ಎಂದೇ ಖ್ಯಾತರಾಗಿ ಬರದ ನಾಡಿಗೆ ಭಗೀರಥರಾಗಿ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಿ ಮಲಪ್ರಭ ನದಿಯಿಂದ ನೀರು ತುಂಬಿಸಿ ರೈತರ ಜನರ ಬದುಕಿಗೆ ಆಸರೆಯಾಗಿರುವ ಅವರಿಗೆ ಇಂದು ವೀರಶೈವ ಸಿರಿ ಪ್ರಶಸ್ತಿ ನೀಡುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಹೇಳಿದರು.
ವಿಜಯದಶಮಿ ದಸರಾ ಮಹೋತ್ಸವದ ಕೊನೆಯ ದಿನವಾಗಿದ್ದು ಇದು ವಿಜಯದ ಸಂಕೇತವಾಗಿದೆ. ರಾಮಾಯಣದಲ್ಲಿ ಶ್ರೀರಾಮ ರಾವಣನ ವಿರುದ್ಧ ಜಯ ಸಾಧಿಸಿದ, ಮಹಾಭಾರತದಲ್ಲಿ ಪಾಂಡವರು ವಿಜಯೋತ್ಸವ ಆಚರಿಸಿದ ಸಂಕೇತವಾಗಿಯೂ ವಿಜಯದಶಮಿ ಆಚರಿಸಲಾಗುತ್ತದೆ, ಕರ್ನಾಟಕದಲ್ಲಿ ಮೈಸೂರು ದಸರಾ ವಿಶ್ವ ವಿಖ್ಯಾತಿ ಪಡೆದಿದೆ ಎಂದರು.
ಇಂದು ನೀರಿನಲ್ಲಿ ಮಾಲಿನ್ಯ, ಆಹಾರದಲ್ಲಿ ಮಾಲಿನ್ಯ, ಗಾಳಿಯಲ್ಲಿ ಮಾಲಿನ್ಯ ಇದೆ. ನಾವು ಹೆಚ್ಚು ಮರ ಗಿಡ ನೆಡುವ ಮೂಲಕ ಪರಿಸರ ರಕ್ಷಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿ.ಎಸ್. ಪಾಟೀಲರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ