Latest

ಬೆಳ್ಳಂಬೆಳಿಗ್ಗೆ ಹಾಲಿನ ಕೊರತೆ; ಜನ, ಹೋಟೆಲ್, ಟೀಸ್ಟಾಲ್ ಮಾಲೀಕರ ಪರದಾಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಬೆಳ್ಳಂಬೆಳಿಗ್ಗೆ ಜನ ಹಾಲಿನ ಕೊರತೆ ಎದುರಿಸುವಂತಾಗಿದೆ. ಕೆಎಂಎಫ್ ನ ಈ ಅನಿರೀಕ್ಷಿತ ಬೆಳವಣಿಗೆಗೆ ಜನ ದಿಗಿಲು ಬಿದ್ದಿದ್ದಾರೆ.

ದಿನನಿತ್ಯದಂತೆ ನಂದಿನಿ ಪಾರ್ಲರ್ ಗೆ ಹಾಲು ತರಲು ಹೋದವರಿಗೆ ಹಾಲಿಲ್ಲ ಎಂಬ ಜವಾಬು ಕೇಳಿ ದಿಕ್ಕು ತೋಚದಂತಾಗಿದೆ. ಅನೇಕ ಜನ ಕಂಡಕಂಡ ಖಾಸಗಿಯವರ ಹಾಲಿನ ಪ್ಯಾಕೆಟ್ ಗಳನ್ನು ಕೊಂಡು ಹೋಗುವ ಅನಿವಾರ್ಯತೆಗೆ ಸಿಲುಕಿದ್ದರೆ, ಮತ್ತಷ್ಟು ಜನ ಮುಂಜಾನೆಯೆದ್ದು ಚಹಾ, ಕಾಫಿ ಹೀರಲಾಗದೆ ಚಡಪಡಿಸಿದ್ದಾರೆ. ಹೋಟೆಲ್ ಗಳು, ಬೀದಿಬದಿ ಅಂಗಡಿಯವರು ಸಹ ಬಂದ ಗ್ರಾಹಕರಿಗೆ ಚಹಾ, ಕಾಫಿ ಮಾಡಿಕೊಡಲಾಗದೆ ತೊಂದರೆ ಅನುಭವಿಸಿದ್ದಾರೆ. ಹಲವರು ಹಾಲಿನ ಪೌಡರ್ ಗೆ ಮುಗಿಬಿದ್ದಿದ್ದಾರೆ.

ಒಟ್ಟಾರೆಯಾಗಿ ಬೆಂಗಳೂರಿಗೆ 2 ಲಕ್ಷ ಲೀಟರ್ ಹಾಲಿನ ಕೊರತೆ ಉಂಟಾಗಿದೆ. ಅಂದರೆ ಶೇ. 50ರಷ್ಟು ಹಾಲಿನ ಕೊರತೆಯಾಗಿದ್ದು ನಂದಿನಿ ಪಾರ್ಲರ್ ನವರು ಕೇಳಿದ್ದರ ಅರ್ಧದಷ್ಟನ್ನು ಮಾತ್ರ ಪೂರೈಸಲಾಗುತ್ತಿದೆ. ಇದು ಪೂರೈಕೆದಾರರು, ಮಾರಾಟಗಾರರು ಹಾಗೂ ಗ್ರಾಹಕರ ಮಧ್ಯೆ ಕಲಹಕ್ಕೂ ಕಾರಣವಾಗಿದೆ.

ಸದ್ಯ ಬೆಂಗಳೂರಿಗೆ 15 ಲಕ್ಷ ಲೀಟರ್ ಹಾಲಿನ ಅಗತ್ಯವಿದ್ದು 13 ಲಕ್ಷ ಲೀಟರ್ ಮಾತ್ರ ಪೂರೈಕೆಯಾಗುತ್ತಿದೆ ಎಂದು ಬಮುಲ್ ಹೇಳಿದೆ. ಶೇ.10ರಷ್ಟು ಹೈನೋದ್ಯಮಿಗಳು ಪೂರೈಕೆ ನಿಲ್ಲಿಸಿದ್ದು ಖಾಸಗಿಯವರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದ್ದು, ಮೇವು, ಹಿಂಡಿ ದರ ಕೂಡ ಹೆಚ್ಚಿರುವುದರಿಂದ ಉತ್ಪಾದಕರು ಅಧಿಕ ದರ ನೀಡುವವರತ್ತ ಆಕರ್ಷಿತರಾಗುತ್ತಿದ್ದಾರೆ ಎಂಬುದು ಬಮುಲ್ ಸ್ಪಷ್ಟನೆ.

ಇದೇ ವೇಳೆ ಪಕ್ಕದ ರಾಜ್ಯಗಳಿಗೆ ಹಾಲು ಪೂರೈಕೆ ನಿರಾತಂಕವಾಗಿದ್ದು ಒಪ್ಪಂದದ ಹಿನ್ನೆಲೆಯಲ್ಲಿ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಬಮುಲ್ ಹೇಳಿದೆ.

https://pragati.taskdun.com/t-sunandamma-award-for-literature-bhuvaneshwari-hegade/
https://pragati.taskdun.com/actor-director-satish-kaushik-passes-away/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button