ಪ್ರಗತಿವಾಹಿನಿ ಸುದ್ದಿ, ವಿಜಯಪುರ: ವಿಷಪೂರಿತ ಆಹಾರ ಸೇನೆ ಮಾಡಿದ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಂತಿ ಬೇಧಿಯಿಂದ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ನಡೆದಿದೆ.
ಇವರೆಲ್ಲರೂ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರು. ಅಸ್ವಸ್ಥಗೊಂಡ ಎಲ್ಲ ವಿದ್ಯಾರ್ಥಿನಿಯರಿಗೂ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಊಟ ಸೇವಿಸಿದ ಕೆಲವೇ ನಿಮಿಷಗಳಲ್ಲಿ ವಿದ್ಯಾರ್ಥಿನಿಯರು ವಾಂತಿ ಭೇದಿಯಿಂದ ಬಳಲತೊಡಗಿದರು.
ಅಡುಗೆಯಲ್ಲಿ ಹಲ್ಲಿ ಬಿದ್ದಿತ್ತು ಎಂಬ ದಟ್ಟ ವದಂತಿಗಳು ಹರಡಿದ್ದರೂ ಅಸ್ವಸ್ಥತೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯ ಮಾಹಿತಿ ಪಡೆದ ಮುದ್ದೇಬಿಹಾಳ ಶಾಸಕ ಸಿಎಸ್ ನಾಡಗೌಡ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಸದ್ಯ ವಿದ್ಯಾರ್ಥಿನಿಯರೆಲ್ಲ ಚೇತರಿಸಿಕೊಳ್ಳುತ್ತಿದ್ದು ಯಾವುದೇ ರೀತಿಯ ಭಯ ಪಡಬೇಕಿಲ್ಲ ಎಂದು ಅವರು ಹೇಳಿದ್ದಾರೆ.
ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ಸಹ ಭೇಟಿ ನೀಡಿದ್ದು ನಿಖರ ಕಾರಣಗಳನ್ನು ತಿಳಿಯುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ