*ವಿದ್ಯಾವಂತರು ರಾಜಕಾರಣಕ್ಕೆ ಬರಬೇಕು* *ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಯಶಸ್ವಿ*
ಬೆಳಗಾವಿ ಬೆಲ್ಲದ ಕಾನೂನು ಮಹಾವಿದ್ಯಾಲಯ : ಬೆಳಗಾವಿ ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿ ಬೆಳೆಯಲು ವಿದ್ಯಾರ್ಥಿಗಳು ಈಗಿನಿಂದಲೇ ಆದರ್ಶ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಕೆ. ದ್ವಾರಕನಾಥ ಬಾಬು ಸಲಹೆ ನೀಡಿದರು.
ನಗರದ ಲಿಂಗರಾಜ ಕಾಲೇಜಿನ ಕೇಂದ್ರ ಸಭಾಗೃಹದಲ್ಲಿ ಸೋಮವಾರ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಾಗೂ ಬೆಳಗಾವಿಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯಗಳು ಏರ್ಪಡಿಸಿದ್ದ ಬೆಳಗಾವಿ ವಲಯ ಮಟ್ಟದ ಮಾದರಿ ವಿಧಾನಸಭಾ ಸ್ಪರ್ಧೆ -2023-24 ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಬಲಯುತವಾಗಿದೆ. ಆದರೆ ಅದನ್ನು ಇನ್ನಷ್ಟು ಪ್ರಬಲವಾಗಿ ಬೆಳೆಸುವಲ್ಲಿ ಮಾದರಿ ಅಧಿವೇಶನ ಸ್ಪರ್ಧೆ ಅತ್ಯಂತ ಪೂರಕವಾಗಿದೆ. ಯುವ ಜನಾಂಗ ಈ ದೇಶದ ಭವಿಷ್ಯವಾಗಿದ್ದಾರೆ. ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ವಿಚಾರಗಳನ್ನು ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿಯಲ್ಲಿ ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಕಾನೂನು ಮಹಾವಿದ್ಯಾಲಯಗಳ 44 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇಲ್ಲಿ ಆಯ್ಕೆಯಾದ 10 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಮಾರ್ಚ್ ನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಅಗಲಿದ್ದಾರೆ. ವಿದ್ಯಾರ್ಥಿಗಳು ಕಾನೂನು, ಸಂಸದೀಯ ವ್ಯವಸ್ಥೆಯ ಕೌಶಲ ಬೆಳೆಸಿಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಅವರು ತಿಳಿಸಿದರು.
2005 ರಿಂದ ನಮ್ಮ ಸಂಸ್ಥೆ ಸಂಶೋಧನೆ, ಮಾದರಿ ಸಂಸತ್ತು, ಮಾದರಿ ವಿಧಾನ ಸಭಾ ಅಧಿವೇಶನ ಸ್ಪರ್ಧೆ, ಅಂತಾರಾಜ್ಯ ಜಲ ವಿವಾದ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳಿಂದ ಹೆಚ್ಚಿನ ಅನುಕೂಲತೆ ಸಿಗಲಿದೆ ಎಂದು ಅವರು ಹೇಳಿದರು.
ನಮ್ಮ ನೆರೆಯ ಕೆಲ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಅಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದು ಹಲವು ದಿನಗಳು ಕಳೆದರೂ ಅವ್ಯವಸ್ಥೆ, ಗೊಂದಲಗಳು ಇನ್ನೂ ಮುಂದುವರಿದಿದೆ. ನಾಮಕಾವಸ್ತೆಗೆ ಸರಕಾರ ಎನ್ನುವಂತಾಗಿದೆ, ಅಲ್ಲಿ ಪ್ರಜಾಪ್ರಭುತ್ವ ಯಾವ ರೀತಿಯಲ್ಲಿ ಇದೆ ಎನ್ನುವುದನ್ನು ನಾವು ಗಮನಿಸಬಹುದು. ಮಿಲಿಟರಿ ವ್ಯವಸ್ಥೆಯೇ ಆಡಳಿತ ನಡೆಸುತ್ತಿದೆ.
ಹಲವು ಬಾರಿ ಸಂವಿಧಾನವೇ ಬದಲಾಗಿವೆ. ಆದರೆ, ನಮ್ಮ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆದರೂ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಯಶಸ್ವಿ ಸರಕಾರಗಳನ್ನು ನಡೆಸುತ್ತಿದ್ದು, ಭಾರತದ ಸಂವಿಧಾನ ಅತ್ಯಂತ ಯಶಸ್ವಿ ಸಂವಿಧಾನ ಎಂದು ವಿಶ್ವದಲ್ಲೇ ಜನಪ್ರಿಯತೆ ಗಳಿಸಿದೆ.
ಭಾರತದಲ್ಲಿ ಅಧಿಕಾರ ಹಸ್ತಾಂತರ ಅತ್ಯಂತ ಸುಗಮವಾಗಿ ನಡೆಯುತ್ತಿದೆ. ಜನಪ್ರಿಯ ಹಾಗೂ ಅತ್ಯಂತ ಸ್ಥಿರ ಸರಕಾರದ ವ್ಯವಸ್ಥೆ ಇಲ್ಲಿದೆ. ಆದರೂ ನಮ್ಮ ದೇಶದ ಜನರ ಪ್ರಜೆಗಳ ಭವಿಷ್ಯ ವಿಶ್ವದಲ್ಲೇ ಇನ್ನೂ ಉತ್ತಮವಾಗಬೇಕು ಎಂಬ ಉದ್ದೇಶದಿಂದ ಮಾದರಿ ವಿಧಾನ ಸಭಾ ಅಧಿವೇಶನ ಮುಂತಾದ ಕಾರ್ಯಕ್ರಮ ನಡೆಸಲಾಗುತ್ತಿದೆ.
ದೇಶದ ಭವಿಷ್ಯದ ರಾಜಕಾರಣಿಗಳಾಗಿ ರೂಪುಗೊಳ್ಳುವವರಿಗೆ ಈ ಕಾರ್ಯಕ್ರಮ ಅತ್ಯಂತ ಪೂರಕ. ನೀವೆಲ್ಲ ಇಂಥ ಸ್ಪರ್ಧೆಗಳಲ್ಲಿ ಅತ್ಯಂತ ಉತ್ಸುಕರಾಗಿ ಭಾಗವಹಿಸಬೇಕು.
ವಿದ್ಯಾರ್ಥಿಗಳೇ ದೇಶದ ಭಾವಿ ಭವಿಷ್ಯವಾಗಿದ್ದು ಅದರಲ್ಲೂ ಕಾನೂನು ವಿದ್ಯಾರ್ಥಿಗಳು ಸಂಸದೀಯ ವ್ಯವಸ್ಥೆಯ ತಿರುಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ.ಬೆಲ್ಲದ ಮಾತನಾಡಿ, ಬೆಳಗಾವಿಯ ಬೆಲ್ಲದ ಕಾನೂನು ಮಹಾವಿದ್ಯಾಲಯ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಬೆಳಗಾವಿ ವಲಯದ ಕಾನೂನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಸಂಸದೀಯ ಪಟುಗಳಾಗಿ ಹೊರಹೊಮ್ಮಬೇಕು. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು. ಈ ಮೂಲಕ ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯುತ್ತಮ ಕೊಡುಗೆ ಸಲ್ಲಿಸಬೇಕು ಎಂದು ಹೇಳಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸಂಸ್ಥೆಯ ಸಂಶೋಧನಾ ನಿರ್ದೇಶಕ ಡಾ.ಸಿ.ಎಸ್.ಪಾಟೀಲ, ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್, ಕಾರ್ಯಕ್ರಮದ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕರಾದ ಸವಿತಾ ಪಟ್ಟಣಶೆಟ್ಟಿ ಹಾಗೂ ಡಾ.ಶ್ರೀನಿವಾಸ ಪಾಲಕೊಂಡ ಉಪಸ್ಥಿತರಿದ್ದರು.
ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭೃಷ್ಟಾಚಾರ ಪ್ರತಿಬಂಧಕ ಕ್ರಮಗಳು) ವಿಧೇಯಕ-2023 ಮಂಡಿಸಲಾಯಿತು.
ಬಿಎಎಲ್ ಎಲ್ ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ಸುನಂದಾ ಪಾಟೀಲ ನಾಡಗೀತೆ ಹಾಡಿದರು. ಪ್ರಾಚಾರ್ಯ ಡಾ.ಬಿ.ಜಯಸಿಂಹ ಸ್ವಾಗತಿಸಿದರು. ರೇಖಾ ಪಾಟೀಲ ಹಾಗೂ ಬಸವರಾಜ ಶಿಂತ್ರಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಮಂಜುನಾಥ ಅಲ್ಲಪ್ಪನವರ ವಂದಿಸಿದರು.
ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕನ್ನಡ ಶಾಲೆಗಳು, ರೈತರ ಸಮಸ್ಯೆ, ಮೀಸಲಾತಿ ಮುಂತಾದ ಸಮಸ್ಯೆಗಳು ಅನಾವರಣಗೊಂಡವು. ಹಲವಾರು ವಿಷಯಗಳ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆದ ತೀವ್ರ ವಾಕ್ಸಮರ ನೈಜ ಜನಪ್ರತಿನಿಧಿಗಳ ಚರ್ಚೆಯನ್ನು ಮೀರಿಸುವಂತಿತ್ತು. ಒಟ್ಟಾರೆ, ಆರೋಗ್ಯಕರ ಚರ್ಚೆಗಳು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಜನಪ್ರತಿನಿಧಿಗಳಾಗಬಹುದು ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ