Education

*ಶಾಲಾ ಶಿಕ್ಷಣ ಇಲಾಖೆಯ ಕನ್ನಡ ವಿರೋಧಿ ಧೋರಣೆ ಖಂಡನೀಯ: ಡಾ.ಪುರುಷೋತ್ತಮ ಬಿಳಿಮಲೆ*

ಹಿಂದಿ ಹೇರಿಕೆ ಕುರಿತಂತೆ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಿ

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರದ ಪಾಲಿನೊಂದಿಗೆ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಪ್ರಧಾನಮಂತ್ರಿ ಪೋಷಣ ಕಾರ್ಯಕ್ರಮದ ಕುರಿತಂತೆ ಪಿಎಂ ಪೋಷಣ್ ಯೋಜನೆಯ ನಿರ್ದೇಶಕರು ಹೊರಡಿಸಿರುವ ದಿನಾಂಕ ರಹಿತ ಸುತ್ತೋಲೆಯಲ್ಲಿ ಪ್ರತಿಬಿಂಬಿತವಾಗಿರುವ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕನ್ನಡ ಭಾಷೆಯ ಕುರಿತಾದ ಅಗೌರವದ ಮನಸ್ಥಿತಿ ಖಂಡನೀಯವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಪತ್ರ ಬರೆದಿರುವ ಡಾ. ಬಿಳಿಮಲೆ, ನಿರ್ದೇಶಕರು ಪಿಎಂ ಪೋಷಣ ಅಭಿಯಾನ ಇವರು ಹೊರಡಿಸಿರುವ ಸುತ್ತೋಲೆಯಲ್ಲಿ ಅನೇಕ ವ್ಯಾಕರಣ ದೋಷಗಳಿದ್ದು ಇದು ಸುತ್ತೋಲೆಯ ಗಾಂಭೀರ್ಯವನ್ನು ಮತ್ತು ಅದರ ಸಾಮರ್ಥ್ಯವನ್ನು ತೆಳುವಾಗಿಸಿದೆ. ಪೋಷಣ್ ಭಿ, ಪಢಾಯಿ ಭಿ; ಷೋಷಣ್ ಮಾಹ್; ರಾಷ್ಟ್ರೀಯ ಪೋಷಣ್ ಕಾರ್ಯಕ್ರಮ; ಹೀಗೆ ಹಲವಾರು ಹಿಂದಿಯ ಪದಗಳನ್ನು ಕನ್ನಡಕ್ಕೆ ತರ್ಜುಮೆಯೇ ಇಲ್ಲದೇ ಹಾಗೆಯೇ ಬಳಸಿಕೊಂಡಿರುವ ಔಚಿತ್ಯವೂ ಪ್ರಶ್ನಾರ್ಹವಾಗಿದೆ. ಪರಿಕಲ್ಪನೆಯನ್ನು ಕನ್ನಡದಲ್ಲಿ ಮೂಡಿಸಿ ಜೊತೆಯಲ್ಲಿ ಈ ಪದಗಳನ್ನು ಬಳಸಿಕೊಂಡಿದ್ದಲ್ಲಿ ಹೆಚ್ಚು ಅರ್ಥಪೂರ್ಣವಾಗುವ, ಇಲಾಖೆಯ ಭಾಷಾ ಬದ್ಧತೆಯ ಪ್ರತೀಕವಾಗುವ ಅವಕಾಶವಿತ್ತು. ಆದರೆ ಕೇಂದ್ರ ಸರ್ಕಾರದ ಧನ ಸಹಾಯದ ನೆಪದಲ್ಲಿ ಈ ರೀತಿಯ ಹಿಂದಿ ಹೇರಿಕೆ ಅಪೇಕ್ಷಣೀಯವಲ್ಲ. ಇದು ಇಡೀ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಕ್ರಮ ಎಂದಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಇಲಾಖೆಗಳ ಆಡಳಿತದಲ್ಲಿ, ವಿಶೇಷವಾಗಿ ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಇಂತಹ ಅಪಸವ್ಯಗಳಿಗೆ ಅವಕಾಶ ಇರಬಾರದು. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಕನ್ನಡ ವಿರೋಧಿಗಳಾದರೆ ಕನ್ನಡವು ಕರ್ನಾಟಕದಲ್ಲಿ ಉಳಿಯುವ ಪ್ರಾಥಮಿಕ ಅವಕಾಶಗಳನ್ನೇ ಕಳೆದುಕೊಳ್ಳುತ್ತದೆ. ಆಡಳಿತದಲ್ಲಿ ಕನ್ನಡ ಬಳಕೆಯ ಕುರಿತಂತೆ ಅಂತಹ ಅಧಿಕಾರಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇದೆಯೆಂದು ಬಯಸಿದಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅದಕ್ಕೆ ಸದಾ ಸಿದ್ಧವಿದೆಯೆಂಬ ಸಲಹೆಯನ್ನು ಸಹ ಅವರು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button