ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ಇತಿಹಾಸ ಅರಿತವನು ಇತಿಹಾಸ ನಿರ್ಮಿಸಬಲ್ಲ, ನಮ್ಮ ಇಂದಿನ ಸುರಳಿತ ಬದುಕಿಗೆ ಪೂರ್ವಜರ ಪರಿಶ್ರಮ ಅಪಾರವಿದೆ. ಅಂತಹ ಯುಗಪ್ರವರ್ತಕರಲ್ಲಿ ಕೆ.ಎಲ್.ಇ ಸಂಸ್ಥೆ ಸ್ಥಾಪಿಸಿದ ಸಪ್ತರ್ಷಿಗಳು ನಮ್ಮ ಯುವಜನಾಂಗಕ್ಕೆ ಮಾದರಿಯಾಗಬೇಕೆಂದರೆ ಅವರ ಜೀವನಾದರ್ಶಗಳನ್ನು ವಿದ್ಯಾರ್ಥಿಗಳಿಗೆ ನಾವಿಂದು ವಿವರಿಸುವ ಅಗತ್ಯವಿದೆ ಎಂದು ಧಾರವಾಡದ ನಿವೃತ್ತ ಪ್ರಾಧ್ಯಾಪಕ, ಜನಪ್ರಿಯ ಸಾಹಿತಿ ಡಾ.ಡಿ.ಎಂ.ಹಿರೇಮಠ ಅಭಿಪ್ರಾಯಪಟ್ಟರು.
ಅವರು ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ಆಶೀರ್ವಾದ ಸಾಂಸ್ಕೃತಿಕ ಭವನದಲ್ಲಿ ಸ್ಥಳೀಯ ಅಂಗಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ಕೆಎಲ್‌ಇ ಸಂಸ್ಥೆಯ ೧೦೪ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ತಮ್ಮ ಐಹಿಕ ಜೀವನದ ಆಸೆಗಳನ್ನು ತ್ಯಜಿಸಿ ಸಮಾಜದ ಅರಿವನ್ನು ಹೆಚ್ಚಿಸಲು ಅಕ್ಷರವೊಂದೇ ಮಾರ್ಗ ಎಂದು ಅರಿತು ಸಂಸ್ಥೆ ಕಟ್ಟಲು ಟೊಂಕಕಟ್ಟಿ ನಿಂತ ಲಿಂಗೈಕ್ಯ ಪಂಡಿತಪ್ಪ ಚಿಕ್ಕೋಡಿ, ಎಂ.ಆರ್.ಸಾಖರೆ, ಶಿ.ಶಿ.ಬಸವನಾಳ, ಎಚ್.ಎಫ್.ಕಟ್ಟಿಮನಿ, ಬಿ.ಬಿ.ಮಮದಾಪುರ, ಬಿ.ಎಸ್.ಹಂಚಿನಾಳ, ಸರದಾರ ವೀರನಗೌಡ ಪಾಟೀಲ ಈ ಸಪ್ತರ್ಷಿಗಳ ತ್ಯಾಗವನ್ನು ಸ್ಮರಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಈ ತೆರನಾದ ಆಚರಣೆಗಳು ಸಹಕಾರಿ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಹುಲಿಯಾಳದ(ಜಮಖಂಡಿ) ಶ್ರೀ ಮಲ್ಲಿಕಾರ್ಜುನ ದೇವಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ ಮಾತನಾಡಿ, ’ವರ್ಣಮಾತ್ರಂ ಕಲಿಸಿದಾತಂ ಗುರು’ ಕಾರಣ ನಮ್ಮನ್ನು ಮನುಷ್ಯರನ್ನಾಗಿ ಮಾಡಿ ಜೀವನಕ್ಕೆ ನಿರ್ದಿಷ್ಟ ಗುರಿ, ಮಾರ್ಗವನ್ನು ತೋರುವ ಗುರುಗಳಲ್ಲಿ ಶ್ರದ್ಧೆ ಇರಲಿ. ತುತ್ತು ನೀಡಿದ ತಾಯಿ, ಕೈ ಹಿಡಿದು ನಡೆಸಿದ ತಂದೆ ಬಗ್ಗೆ ಸದಾ ಹೃದಯದಲ್ಲಿ ಗೌರವವಿರಲಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದಲ್ಲದೇ ತಾವೂ ಕೂಡ ಇದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದೆವು ಎಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.
ಸಪ್ತರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಡಾ.ಎಸ್.ವಿ.ವೀರಗೆ ಅವರ ನೇತೃತ್ವದಲ್ಲಿ ಡಾ.ಬಸವರಾಜ, ಡಾ.ಧೈರ್ಯಶೀಲರನ್ನೊಳಗೊಂಡ ತಂಡದ ಸಹಯೋಗದಲ್ಲಿ ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಔಷಧ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ೬೩ ಯುನಿಟ್‌ಗಳಷ್ಟು ರಕ್ತ ಸಂಗ್ರಹಣೆ ನಡೆಯಿತು.
ಶಿವಶಕ್ತಿ ಸಾಂಸ್ಕೃತಿಕ ಟ್ರಸ್ಟಿನ ಅಧ್ಯಕ್ಷ ಅಮರ ಬಾಗೇವಾಡಿ, ಸ್ಥಳೀಯ ಆಡಳಿತ ಮಂಡಳಿಯ ಡಾ. ಬಸವರಾಜ ಕೋಠಿವಾಲೆ, ರವಿ ಶೆಟ್ಟಿ, ಪಿಯು ಪ್ರಾಚಾರ್ಯ ಡಾ.ಎಸ್.ಬಿ.ಸೊಲಬನ್ನವರ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಾಚಾರ್ಯ ಪಿ.ಆಯ್.ಪಾಟೀಲ, ಬಿಸಿಎ ಮಹಾವಿದ್ಯಾಲಯದ ಪ್ರಾಚಾರ್ಯ ಜೆ.ಸಿ.ಕಿನ್ನಿಂಗೆ, ಬಿಬಿಎ ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಎ.ಹನಮಂತಗಡ, ಸ್ವತಂತ್ರ ಪಪೂ ಪ್ರಾಚಾರ್ಯ ರಮೇಶ ಜೆ, ಸಿಬಿಎಸ್‌ಸಿ ಪ್ರಾಚಾರ್ಯೆ ಶರ್ಮಿಷ್ಟಾ ರಾಯ್, ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಲ್.ಆರ್.ಮಾಳಿ ಸೇರಿದಂತೆ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಸ್ವಯಂ ಸೇವಕ ಬಳಗ, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಮತ್ತು ಪ್ರಾರ್ಥನಾ ಗೀತೆ ಹಾಡಿದರು. ಈ.ಆಯ್.ಬಾಗೇವಾಡಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಿ.ವಿ.ಕೊಪ್ಪದ ಸ್ವಾಗತಿಸಿದರು. ಬಿಎಡ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ವಿ.ಬಡಿಗೇರ ಮತ್ತು ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೆ.ಕೆ. ಸಾಬೋಜಿ ಪರಿಚಯಿಸಿದರು. ಪ್ರೊ. ಕುಮಾರ ತಳವಾರ ಮತ್ತು ಪ್ರೊ.ಸುರೇಶ ಶಿಂಗಟೆ ನಿರೂಪಿಸಿದರು. ಕನ್ನಡ ಮಾಧ್ಯಮ ಶಾಲೆಯ ಪ್ರಾಚಾರ್ಯ ಬಿ.ಎಚ್.ಪರಮನಟ್ಟಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ