ಮಹಿಳೆಯರ ಸಬಲೀಕರಣಕ್ಕಾಗಿ ಎಲ್ಲರಿಗೂ ಉದ್ಯೋಗಾವಕಾಶಕ್ಕೆ ಪ್ರಯತ್ನ – ಶಾಸಕಿ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಸ್ಥಳೀಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಾಗ ಕ್ಷೇತ್ರದ ಪ್ರತಿಯೊಬ್ಬ ಯುವಕ -ಯುವತಿಯರಿಗೆ, ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಶ್ರಮಿಸಲಾಗಿದೆ. ಸರ್ಕಾರದ ಯೋಜನೆಗಳ ಮೂಲಕ ಕೈಗಾರಿಕೆಗಳನ್ನು ಸ್ಥಾಪಿಸಿ ಬಹಳಷ್ಟು ಜನರು ನಿರ್ಗತಿಕರಿಗೆ ಉದ್ಯೋಗ ನೀಡುವಂತೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಜೊಲ್ಲೆ ಗ್ರುಪ್‌ದಿಂದ ಇಲ್ಲಿನ ಮರಾಠಾ ಮಂಡಳ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಮಹಿಳೆಯರಿಗಾಗಿ ಆಯೋಜಿಸಿದ ಲಘುಉದ್ಯೋಗದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೊಲ್ಲೆ ಗ್ರುಪ್‌ದಿಂದ ಸಹ ಉದ್ಯೋಗವಕಾಶ ಕಲ್ಪಿಸಿ ಮಹಿಳೆಯರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದ್ದು ಮಹಿಳೆಯರಿಗೆ, ಯುವತಿಯರಿಗೆ ಪ್ರೋತ್ಸಾಹಿಸುವ ಮೂಲಕ ತರಬೇತಿ ನೀಡಲಾಗುತ್ತಿದೆ. ಒಂದು ಕುಟುಂಬದ ಮಹಿಳೆ ಸ್ವಾವಲಂಬಿಯಾದಲ್ಲಿ ಕುಟುಂಬಕ್ಕೆ ಆರ್ಥಿಕ ಆಧಾರ ಸಿಗುತ್ತದೆ. ಮಹಿಳೆಯು ಸಮೃದ್ಧವಾದಲ್ಲಿ ಸಮಾಜ ಸಮೃದ್ಧವಾಗುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಸಹಯೋಗದೊಂದಿಗೆ ರೈತ ಮಹಿಳೆಯರು ಲಘುಉದ್ಯೋಗಗಳನ್ನು ಸ್ಥಾಪಿಸಿದ್ದು ಅವರ ಕುಟುಂಬಕ್ಕೆ ಆರ್ಥಿಕವಾಗಿ ಸಹಕಾರವಾಗುತ್ತಿದೆ. ಅಲ್ಲದೆ ಅವರ ಉತ್ಪಾದನೆಗಳ ಮಾರಾಟಕ್ಕಾಗಿ ಒಂದು ಸಂಚಾರಿ ವಾಹನ ಜೊಲ್ಲೆ ಗ್ರುಪ್‌ದಿಂದ ಕಲ್ಪಿಸಲಾಗಿದೆ. ಅಲ್ಲದೆ ನಗರದಲ್ಲಿ ಜ್ಯೋತಿ ಬಝಾರ್ ಆರಂಭಿಸಿ ಅಲ್ಲಿ ಮಹಿಳೆಯರು ಉತ್ಪಾದಿಸುತ್ತಿರುವ ಉತ್ಪಾದನೆಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಲ್ಲದೆ ವಿದೇಶಕ್ಕೂ ಉತ್ಪಾದನೆಗಳು ರಫ್ತಾಗುವಂತೆ ವ್ಯವಸ್ಥೆ ಮಾಡಿಕೊಡಲಾಗಿದೆ.
ಜೊಲ್ಲೆ ಗ್ರುಪ್ ಶರ್ಮಾ ಇಂಡಸ್ಟ್ರೀಜ್ ಸಹಯೋಗದಲ್ಲಿ ಆಯೋಜಿಸಿದ ಈ ಶಿಬಿರದಲ್ಲಿ ೧೬೪೪ ಮಹಿಳೆಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ವಿಭಾವರಿ ಖಾಂಡಕೆ, ನಗರಸಭೆ ಸದಸ್ಯ ರಾಜೇಂದ್ರ ಗುಂದೇಶಾ, ಶರ್ಮಾ ಇಂಡಸ್ಟ್ರೀಜ್‌ನ ಕೃಷ್ಣಾ ಶರ್ಮಾ, ಶೇಖರ, ಮೊದಲಾದವರು ಉಪಸ್ಥಿತರಿದ್ದರು. ವಿಜಯ ರಾವುತ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ