ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗೋಕಾಕ ವಿಧಾನಸಭೆ ಕ್ಷೇತ್ರದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಡಿರುವ ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ , ಭಾನುವಾರ ನಿರಂತರ 10 ಗಂಟೆಗಳ ಕಾಲ ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ನಡೆಸಿದರು.
ಮತಗಟ್ಟೆಯ ಕಾರ್ಯಕರ್ತರು ನಾಳೆಯಿಂದಲೇ ಪ್ರತಿ ಮನೆ-ಮನೆಗೆ ತೆರಳಿ ರಮೇಶ ಜಾರಕಿಹೊಳಿ ಅವರ ಗುರುತಿನ ಕಮಲ ಚಿನ್ಹೆಗೆ ಮತ ಹಾಕಿಸುವ ಕುರಿತು ಮಾಹಿತಿ ನೀಡಬೇಕು. ತನ್ಮೂಲಕ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಮತ್ತೊಮ್ಮೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು ಎದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ಬಾರಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕ್ಷೇತ್ರವು ಹೆಚ್ಚಿನ ಅಭಿವೃದ್ದಿ ಕಾಣುತ್ತದೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ ಜಾರಕಿಹೊಳಿ ಅವರು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಸ್ವತ: ಮುಖ್ಯಮಂತ್ರಿಗಳು ನಿನ್ನೆ ನಗರದಲ್ಲಿ ನಡೆದ ಬಿಜೆಪಿ ಬೃಹತ್ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ರಮೇಶ ಅವರು ಸಚಿವರಾಗುವುದರಿಂದ ಕ್ಷೇತ್ರ ಹಾಗೂ ಜಿಲ್ಲೆಯು ಸಮಗ್ರ ಅಭಿವೃದ್ದಿ ಪಥದತ್ತ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಒಂದಾಗಿ ಒಗ್ಗಟ್ಟಾಗಿ ರಮೇಶ ಜಾರಕಿಹೊಳಿ ಪರ ಬಿರುಸಿನ ಪ್ರಚಾರ ಕೈಗೊಳ್ಳುವಂತೆ ಕೋರಿದರು.
ಸ್ವತ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿರುವುದು ರಮೇಶ ಜಾರಕಿಹೊಳಿ ಅವರ ಕೃಪೆಯಿಂದಾಗಿ ಎಂದು ಹೇಳಿರುವುದು ನಮಗೆ ಸಂತಸವನ್ನುಂಟು ಮಾಡಿದೆ. ಯಡಿಯೂರಪ್ಪನವರು ಗೋಕಾಕಕ್ಕೆ ಆಗಮಿಸಿ ಕಾರ್ಯಕರ್ತರನ್ನು ಹುರದುಂಭಿಸಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಅರಳಲು ಕಾರ್ಯಕರ್ತರು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಬೇಕೆಂದು ಹೇಳಿದರು.
ರಮೇಶ ಜಾರಕಿಹೊಳಿ ಅವರ ಶಕ್ತಿ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಇಂದು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವುದು ಇವರಿಂದಾಗಿಯೇ. ರಾಜ್ಯದಲ್ಲಿ ಬಿಜೆಪಿ ಉದಯಿಸಲು ಮೂಲ ಕಾರಣಿಕರ್ತರಾದ ರಮೇಶ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಾರು ಏನೇ ಹೇಳಿದರೂ ಈ ಬಾರಿ ಬಿಜೆಪಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಕೋರಿದರು.
ಸತತ ೧೦ ಗಂಟೆಗಳ ಕಾಲ ಸಭೆ
ಇಂದು ಮುಂಜಾನೆಯಿಂದಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಗೃಹ ಕಚೇರಿಯ ಆವರಣದಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳ ಬೂತಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸಿದರು. ಸುಮಾರು ೬ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಗೆಲುವಿನ ಕಾರ್ಯತಂತ್ರವನ್ನು ಸಭೆಯಲ್ಲಿ ಹೆಣೆಯಲಾಯಿತು.
ಶಾಸಕರಾಗಿ ಹಾಗೂ ಮುಂದೆ ಸಚಿವರಾಗಲಿರುವ ರಮೇಶ ಜಾರಕಿಹೊಳಿ ಅವರಿಂದ ಗೋಕಾಕ ಕ್ಷೇತ್ರಕ್ಕೆ ಹೆಚ್ಚಿನ ವರದಾನವಾಗಲಿದೆ. ಕ್ಷೇತ್ರದ ಅಭಿವೃದ್ದಿಗಾಗಿ ಸರ್ಕಾರದಿಂದ ಹೆಚ್ಚಿನ ನೆರವು ಪಡೆದು ಗೋಕಾಕ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಸಂಕಲ್ಪ ಅವರದ್ದಾಗಿದೆ. ೨೦ ವರ್ಷಗಳ ಕಾಲ ಶಾಸಕರಾಗಿ ಗೋಕಾಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಪರ ಕೆಲಸ ಮಾಡಿದ್ದಾರೆ.
ಅವರ ಸಾಧನೆಗಳನ್ನು ಹಾಗೂ ಬಿಜೆಪಿ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ವಿವರಿಸಿ ಗೆಲುವಿಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ