Belagavi NewsBelgaum NewsElection News

*ಅಕ್ರಮಗಳ ದೂರು: ತಕ್ಷಣವೇ ಸ್ಪಂದಿಸಲು ನಿರ್ದೇಶನ*

ಲೋಕಸಭಾ ಚುನಾವಣೆ: ವಿಶೇಷ ವೆಚ್ಚ ವೀಕ್ಷಕರ ಭೇಟಿ

ಪ್ರಗತಿವಾಹಿನಿ ಸುದ್ದಿ: ಚುನಾವಣಾ ಅಕ್ರಮಗಳ ಕುರಿತು ಸಿವಿಜಿಲ್ ಮೂಲಕ ಬರುವ ಅಥವಾ ಸಾರ್ವಜನಿಕರು ನೀಡುವ ಯಾವುದೇ ದೂರುಗಳನ್ನು ನಿರ್ಲಕ್ಷ್ಯ ಮಾಡದೇ ತಕ್ಷಣವೇ ಪರಿಶೀಲನೆ ಕೈಗೊಳ್ಳಬೇಕು ಎಂದು ವಿಶೇಷ ವೆಚ್ಚ ವೀಕ್ಷಕರಾದ ಬಿ.ಮುರುಳಿಕುಮಾರ್ ಅವರು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ(ಏ.29) ನಡೆದ ಚುನಾವಣಾಧಿಕಾರಿಗಳು‌, ವೆಚ್ಚ ವೀಕ್ಷಕರು ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು‌ ಮಾತನಾಡಿದರು.

ಮತದಾನ ದಿನಾಂಕ ಸಮೀಪಿಸುತ್ತಿರುವುದರಿಂದ ಅಕ್ರಮಗಳ ತಡೆಗೆ ತೀವ್ರ ನಿಗಾ ವಹಿಸಬೇಕು. ಯಾವುದೇ‌ ದೂರು ಅಥವಾ ಮಾಹಿತಿ ಬಂದಾಗ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಬೇಕು.

ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುವ ತಂಡಗಳು ಸದಾ ಜಾಗೃತರಾಗಿರಬೇಕು. ಎಫ್‌ಎಸ್ ಟಿ ತಂಡಗಳು ತಮ್ಮ ವ್ಯಾಪ್ತಿಯಲ್ಲಿ ನಿತಂತರವಾಗಿ ಗಸ್ತು ಕೈಗೊಳ್ಳಬೇಕು ಎಂದು ತಿಳಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ತಮ್ಮ ದೈನಂದಿನ ತಪಾಸಣೆಯನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಅಕ್ರಮಗಳನ್ನು ಪತ್ತೆ ಮಾಡಬೇಕು ಎಂದು ಹೇಳಿದರು.

ಸಂದೇಹಾಸ್ಪದ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಬೇಕು. ಇದಲ್ಲದೇ ಆದಾಯ ತೆರಿಗೆ, ಅಬಕಾರಿ, ಪೊಲೀಸ್ ಮತ್ತಿತರ ತಂಡಗಳು ಕೂಡ ಚುನಾವಣಾ ಅಕ್ರಮಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ವಿಶೇಷ ವೆಚ್ಚ ವೀಕ್ಷಕರಾದ ಬಿ.ಮುರುಳಿಕುಮಾರ್ ಹೇಳಿದರು.

02-ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ತಡೆ ಹಾಗೂ ಚೆಕ್ ಪೋಸ್ಟ್ ಕಾರ್ಯನಿರ್ವಹಣೆ ಕುರಿತು ವಿವರಿಸಿದ ಜಿಲ್ಲಾ ಚುನಾವಣಾಧಿಕಾತರಿಯೂ ಆಗಿರುವ ನಿತೇಶ್ ಪಾಟೀಲ ಅವರು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

01- ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಖರ್ಚು-ವೆಚ್ಚಗಳ ಮೇಲೆ ನಿಗಾ ವಹಿಸಲಾಗಿದ್ದು, ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ತಂಡಗಳು ಕಾರ್ಯಪ್ರವೃತ್ತಗೊಂಡಿವೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ‌ ರಾಹುಲ್‌ ಶಿಂಧೆ ಅವರು ಸಭೆಯಲ್ಲಿ ತಿಳಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಬೆಳಗಾವಿ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಹರಕ್ರಿಪಾಲ್ ಖಟಾನಾ, ನರಸಿಂಗ್ ರಾವ್ ಬಿ., ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಎನ್.ಮೋಹನ‌ ಕೃಷ್ಣಾ, ಅಂಕಿತ್ ತಿವಾರಿ, ಐ.ಎ.ಎಸ್.ಪ್ರೊಬೇಷನರಿ ಅಧಿಕಾರಿ ಶುಭಂ ಶುಕ್ಲಾ ಉಪಸ್ಥಿತರಿದ್ದರು.

ಮಾದರಿ ನೀತಿಸಂಹಿತೆ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ವೆಚ್ಚ ಸೇರಿದಂತೆ ವಿವಿಧ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Related Articles

Back to top button