Kannada NewsKarnataka News

ವಿದ್ಯುತ್ ಬಿಲ್: ಬೆಳಗಾವಿ ವಾಣಿಜ್ಯೋದ್ಯಮಿಗಳ ಜೊತೆ ಚರ್ಚಿಸಿದ ಹೆಸ್ಕಾಂ MD

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿದ್ಯುತ್ ದರದ ಹೆಚ್ಚಳ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸರಕಾರ ಇದಕ್ಕೆ ಪರಿಹಾರ ಸೂಚಿಸಿದರೆ ಅದನ್ನು ಅನುಷ್ಠಾನ ಮಾಡಲಾಗುವುದು ಎಂದು ಹೆಸ್ಕಾಂ ಎಂ.ಡಿ. ಮಹ್ಮದ್ ರೋಷನ್ ಹೇಳಿದರು.

ಮಂಗಳವಾರ ಚೆಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಉದ್ಯಮಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ, ಸಣ್ಣ ಕೈಗಾರಿಕೆಗಳ ಸಂಘದ ಎಲ್ಲ ಪ್ರತಿನಿಧಿಗಳ ಮುಖಂಡರ ಜೊತೆ ಸಭೆ ನಡೆಸಿದ್ದೇನೆ. ಈ ತಿಂಗಳ ವಿದ್ಯುತ್ ದರ ಏರಿಕೆ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ನಮ್ಮ ಎಲ್ಲ ಅಧಿಕಾರಿಗಳ ತಂಡ ಬಂದು ಎರಡು ಗಂಟೆ ಚರ್ಚೆ ಮಾಡಿದ್ದೇವೆ ಎಂದರು‌.

ಮೂರು ಮುಖ್ಯ ವಿಚಾರ ಪ್ರಸ್ತಾಪಕ್ಕೆ ಬಂದಿವೆ. ಮೊದಲನೇಯದಾಗಿ ವಿದ್ಯುತ್ ದರ ಏರಿಕೆ ಬಗ್ಗೆ ಚರ್ಚೆ ಆಯಿತು. ಕೆಇಆರ್‌ಸಿಯಿಂದ ಬರುವ ನಿರ್ದೇಶನ, ಯಾವ ರೂಲ್ಸ್ ಪ್ರಕಾರ  ಬಿಲ್‌ನಲ್ಲಿ ದರ ಹಾಕಲಾಗಿದೆ ಎನ್ನುವ ಬಗ್ಗೆ ಸ್ಪಷ್ಟೀಕರಣ ನೀಡಿದ್ದೇನೆ. ಫ್ಯೂಯಲ್ ಕಾಸ್ಟ್ ಅಡ್ಜಸ್ಟ್‌ಮೆಂಟ್ ಹೇಗೆ ಕ್ಯಾಲ್ಕುಲೇಟ್ ಮಾಡುತ್ತೇವೆ ಎಂದು ಕೇಳಿದರು ಎಂದರು‌.

ಫ್ಯೂಯಲ್‌ ಕಾಸ್ಟ್ ಅಡ್ಜಸ್ಟ್‌ಮೆಂಟ್ ಈ ತಿಂಗಳು, ಮುಂದಿನ ತಿಂಗಳು ಮಾತ್ರ ಇರುತ್ತದೆ. ಅದಾದ ಬಳಿಕ ದರ ಕಡಿಮೆ ಆಗುತ್ತಾ ಹೋಗುತ್ತದೆ. ಈ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ ಎಂದರು.

Home add -Advt

ಬಿಲ್ ಪಾವತಿ ಬಗ್ಗೆ ಕೈಗಾರಿಕೋದ್ಯಮ ಮುಖಂಡರು ಚರ್ಚೆ ಮಾಡಿದ್ದರು‌. ಇದಕ್ಕೆ ಸೂಕ್ತ ಪರಿಹಾರ ಹುಡುಕಿದ್ದು ಆ ಪ್ರಕಾರ ಬಿಲ್ ಪಾವತಿಗೆ ಅವಕಾಶ ಕೊಡಲಾಗುವುದು. ಯಾವ ರೀತಿ ಪರಿಹಾರ ಕೊಡಬಹುದು ಎಂದು ಮತ್ತೆ ಸಭೆ ಮಾಡುತ್ತೇನೆ ಎಂದರು.

ಪ್ರತಿ ಗಂಟೆಗೊಮ್ಮೆ ಇಂಧನ ಸಚಿರು, ಉನ್ನತ ಅಧಿಕಾರಿಗಳು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸಮಸ್ಯೆ ಪರಿಹಾರದ ಬಗ್ಗೆ ಮೇಲ್ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಾಳೆ, ನಾಡಿದ್ದು ಸುದೀರ್ಘ ಚರ್ಚೆ ಆಗಿ ನಮಗೆ‌ ನಿರ್ದೇಶನ ಬರಬಹುದು. ಫ್ಯೂಯಲ್ ಕಾಸ್ಟ್ ಅಡ್ಜಸ್ಟ್‌ಮೆಂಟ್ ಅಂತಾರಾಷ್ಟ್ರೀಯ ಟ್ರೆಂಡ್ಸ್ ಮೇಲೆ ಆಧಾರಿತವಾಗಿರುತ್ತೆ. ದರ ಕಡಿಮೆ ಆಗುವ ಸಾಧ್ಯತೆ ಕಂಡು ಬರುತ್ತಿದೆ ಎಂದರು.

ಪೆಟ್ರೋಲ್ ದರದ ತರಹ ಒಂದು ತಿಂಗಳು ಹೆಚ್ಚಾಗಬಹುದು ಒಂದು ತಿಂಗಳು ಕಡಿಮೆ ಆಗಬಹುದು. ಸರ್ಕಾರ, ಹೆಸ್ಕಾಂ ವತಿಯಿಂದ ನಾವು ಮನವಿ ಮಾಡುತ್ತೇವೆ. ಪರಿಹಾರ ಕಂಡುಕೊಳ್ಳಲು ಮೇಲ್ಮಟ್ಟದಲ್ಲಿ ಚರ್ಚೆಗಳು ಆಗುತ್ತಿದೆ. ಅವರು ಕೊಟ್ಟ ಪರಿಹಾರದಂತೆ ಜಾರಿ ಮಾಡಲು ಸಿದ್ಧರಿದ್ದೇವೆ ಎಂದರು.

ಕೆಇಆರ್‌ಸಿಯಿಂದ ವಿದ್ಯುತ್ ದರ ಏರಿಕೆ ಆಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರತಿವರ್ಷ ವಿದ್ಯುತ್ ದರ ನಿಗದಿ ಮಾಡಲಾಗುತ್ತದೆ. ವಿದ್ಯುತ್ ಬಿಲ್ ಆನ್‌ಲೈನ್ ಪೇಮೆಂಟ್  ಸಾಫ್ಟ್‌ವೇರ್ ಬದಲಾವಣೆ ಮಾಡುತ್ತಿರುವುದರಿಂದ ಆನ್‌ಲೈನ್ ಪೇಮೆಂಟ್ ಆಗುತ್ತಿಲ್ಲ. ಆದರೆ ಹೆಸ್ಕಾಂ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ ಪೇಮೆಂಟ್ ನ್ನು ನಗರ, ಗ್ರಾಮೀಣ ಪ್ರದೇಶದವರು ಬಿಲ್ ಪಾವತಿ ಮಾಡಬಹುದು‌ ಎಂದರು.

ಮಹಾರಾಷ್ಟ್ರದಲ್ಲಿ ವಿದ್ಯುತ್ ದರ ಕಡಿಮೆ ಇದೆ ಎಂಬ ಕೈಗಾರಿಕೋದ್ಯಮಿಗಳ ವಾದ ವಿಚಾರಕ್ಕೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಇರುವ ಫಿಕ್ಸಡ್ ಚಾರ್ಜಸ್, ಎನರ್ಜಿ ಚಾರ್ಜಸ್ ದಕ್ಷಿಣ ಭಾರತದಲ್ಲೇ ಕಡಿಮೆ ಇದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button