
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಬಿಜೆಪಿ ಮುಖಂಡ ಸೇರಿ ಇಬ್ಬರು ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈಗ ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೊಪ್ಪು ತರಲು ಮನೆಯ ಹಿಂಭಾಗಕ್ಕೆ ಹೋಗಿದ್ದಾಗ ಕಾಡಾನೆ ದಾಳಿ ನಡೆಸಿದೆ.
ಬಿಜೆಪಿ ಮುಖಂಡ ಹರೀಶ್ (47) ಹಾಗೂ ಉಮೇಶ್ (44) ಮೃತ ದುರ್ದೈವಿಗಳು. ಕಾಡಾನೆ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ಮೃತ ದೇಹವನ್ನು ಸಾಗಿಸಲೂ ಸಾಧ್ಯವಾಗದೇ ಜನರು ಆತಂಕಕ್ಕೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
 
					 
				 
					 
					 
					 
					
 
					 
					 
					

