ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕಾಡಾನೆ ದಾಳಿಗೆ ಗ್ರಾಮಸ್ಥರು ಸಾವನ್ನಪ್ಪುತ್ತಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು ಮೃತ ವ್ಯಕ್ತಿಯ ಶವದೊಂದಿಗೆ ಅರಣ್ಯ ಇಲಾಖೆಗೆ ನುಗ್ಗಿ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆ ದಾಳಿಯಿಂದ ಗ್ರಾಮಸ್ಥರು ಸಾವನ್ನಪ್ಪುತ್ತಿದ್ದು, ಒಂದು ತಿಂಗಳಲ್ಲಿ ಇದೀಗ ಇಬ್ಬರು ವ್ಯಕ್ತಿಗಳು ಆನೆ ದಾಳಿಗೆ ಬಲಿಯಾಗಿದ್ದಾರೆ. ಕಾಡಾನೆ ದಾಳಿಗೆ ಕಡಿವಾಣ ಹಾಕಿ ಜನರಿಗೆ ರಕ್ಷಣೆ ನೀಡುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಜಾಣ ಕಿವುಡು ಮೆರೆದಿರುವ ಫಾರೆಸ್ಟ್ ಅಧಿಕಾರಿಗಳ ವಿರುದ್ಧ ಇದೀಗ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.
ಇಂದು ಕಾಡಾನೆ ದಾಳಿಗೆ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹದೊಂದಿಗೆ ಮೂಡಿಗೆರೆ ತಾಲೂಕಿನ ಊರುಬಗೆ ಅರಣ್ಯ ಇಲಾಖೆ ಕಚೇರಿ ಆವರಣಕ್ಕೆ ಬಂದ ಗ್ರಾಮಸ್ಥರು ಕಚೇರಿ ಆವರಣದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಸ್ಥರ ಪ್ರತಿಭಟನೆಗೂ ಕಿವಿಗೊಡದೇ ಕಚೇರಿ ಒಳಗೆ ಕುಳಿತಿದ್ದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಅರಣ್ಯ ಇಲಾಖೆ ಗೇಟ್ ತೆಗೆದು ಒಳನುಗ್ಗಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರು ತಡೆಯಲು ಮುಂದಾಗಿದ್ದು, ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ವಾಗ್ವಾದ ಗಲಾಟೆ ನಡೆದಿದೆ.
ಪರಿಸ್ಥಿತಿ ನಿಯಂತ್ರಿಸಲೆಂದು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಪೊಲೀಸರ ಲಾಠಿ ಏಟಿಗೂ ಕ್ಯಾರೇ ಎನ್ನದ ಗ್ರಾಮಸ್ಥರು ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದು, ಗಲಾಟೆ ಮಾಡಿದ್ದಾರೆ. ಪೊಲೀಸರು ಹಾಗೂ ಗ್ರಾಮಶರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ವಿಶಿಷ್ಟ ಸಹಿಯಿಂದಲೇ ಖ್ಯಾತರಾಗಿದ್ದ ಅಧಿಕಾರಿ ನಿಧನ
https://pragati.taskdun.com/latest/signature-shanthayyapassed-away/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ