ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಶಾಲೆಗಳ ಆರಂಭ ಕುರಿತಂತೆ ಗೊಂದಲ, ಆತಂಕದಲ್ಲಿರುವ ರಾಜ್ಯದ ಶಿಕ್ಷಕರ ಬೆನ್ನಿಗೆ ಇದೀಗ ಕರ್ನಾಟಕ ರಾಜ್ಯ ನೌಕರರ ಸಂಘ ನಿಂತಿದೆ.
ಶಿಕ್ಷಕರು ಆತಂಕಪಡಬೇಕಿಲ್ಲ, ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅಭಯ ನೀಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಶಿಕ್ಷಕರನ್ನು ಜೂನ್ 15ರಿಂದ ಶಾಲೆಗೆ ಬರುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿರುವುದು ಸರಿಯಲ್ಲ. ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿ ಮಾಡಿದ್ದರೂ ಬಸ್ ಸೌಕರ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಶಿಕ್ಷಕರು ಶಾಲೆಗೆ ತೆರಳಲು ಸಾಧ್ಯವೇ ಇಲ್ಲ. ಇನ್ನು ಬಹುತೇಕ ಶಿಕ್ಷಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇಂತಹ ಶಿಕ್ಷಕರು ಬಸ್ ಸೌಕರ್ಯವಿಲ್ಲದೇ ವಾಪಸ್ ಬರಲು ಸಾಧ್ಯವಿಲ್ಲ. ಸಮಸ್ಯೆಯ ಅರಿವಿದ್ದರೂ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಬಸ್ ಆರಂಭವಾಗುವವರೆಗೆ ವರ್ಕ್ ಫ್ರಂ ಹೋಮ್ ಗೆ ಆದೇಶ ಹೊರಡಿಸಬೇಕು. ಈ ಕುರಿತು ನಾಳೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಶಿಕ್ಷಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.
ಶಿಕ್ಷಕರ ಸಮಸ್ಯೆಯ ಕುರಿತು ಸಚಿವ ಸುರೇಶ್ ಕುಮಾರ್ ಅವರ ಜೊತೆಗೆ ಚರ್ಚಿಸಿದ್ದು, ಆಯುಕ್ತರ ಜೊತೆಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಆಯುಕ್ತರು ಆತುರಾತುರವಾಗಿ ಶಿಕ್ಷಕರು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದಾರೆ. ಸಂಕಷ್ಟದಲ್ಲಿರುವ ಶಿಕ್ಷಕರು ಆತಂಕಕ್ಕೆ ಒಳಗಾಗುವುದು ಬೇಡ. ನಾಳೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶಿಕ್ಷಕರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇವೆ. ಸಿಎಂ ಯಡಿಯೂರಪ್ಪ ಅವರು ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡುವ ವಿಶ್ವಾಸವಿದೆ ಎಂದಿದ್ದಾರೆ.
ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆಸಲು ಮುಖ್ಯಶಿಕ್ಷಕರು ಮಾತ್ರವೇ ಸಾಕು. ಹೀಗಾಗಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ಮನೆಯಿಂದಲೇ ಆನ್ ಲೈನ್ ಶಿಕ್ಷಣವನ್ನು ಬೋಧನೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿಯೇ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು. ಶಿಕ್ಷಕರ ಸಮಸ್ಯೆಯ ಪರಿಹಾರದ ಕುರಿತು ಹೋರಾಟ ನಡೆಸುತ್ತಿದ್ದೇನೆ. ಶಿಕ್ಷಕರ ಸಮಸ್ಯೆಯ ಬಗ್ಗೆ ಸಚಿವರಿಗೂ ಅರಿವಿದೆ. ಸಿಎಂ ಯಡಿಯೂರಪ್ಪ ಅವರು ಪರಿಹಾರ ಮಾಡುತ್ತಾರೆನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಅಧಿಕಾರಿಗಳ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ