ಆರ್ ಟಿಪಿಸಿಆರ್ ರಿಪೋರ್ಟ್ ಇಲ್ಲದೆ ಬೆಳಗಾವಿ ಗಡಿಯೊಳಗೆ ಪ್ರವೇಶ: ನಾಲ್ವರನ್ನು ಬಂಧಿಸಿದ ನಿಪ್ಪಾಣಿ ಪೊಲೀಸರು
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಜ್ಯ ಪ್ರಯಾಣದ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ತಪ್ಪಿಸಿ ಜನರನ್ನು ಸಾಗಾಣಿಕೆ ಮಾಡುತ್ತಿದ್ದ ಮ್ಯಾಕ್ಸಿ ಕ್ಯಾಬ್ ವಶಕ್ಕೆ ಪಡೆದಿರುವ ನಿಪ್ಪಣಿ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶಿಸುವವರಿಗೆ ಆರ್ ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಪ್ರಯಾಣಿಕರಿಗೆ ಸುಳ್ಳು ಹೇಳಿ, ತಾವೇ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸುವುದಾಗಿ ಹಣ ಪಡೆದು ಅವರನ್ನು ಕಳ್ಳ ಮಾರ್ಗದಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕದೊಳಗೆ ಬಿಡಲಾಗುತ್ತಿತ್ತು.
ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಅಮರನಾಥ ರಡ್ಡಿ ಮತ್ತು ನಿಪ್ಪಾಣಿ ಡಿವೈ ಎಸ್ಪಿ ಮಾರ್ಗದರ್ಶನದಲ್ಲಿ, ಸಿಪಿಐ ಸಂಗಮೇಶ್ ನೇತೃತ್ವದ ತಂಡ ನಿರಂತರವಾಗಿ ಗಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಮಂಗಳವಾರ ಸಂಜೆ ಶ್ರೇಯಸ್ ಟ್ರಾವೆಲ್ಸ್ ಎನ್ನುವ ಮ್ಯಾಕ್ಸಿ ಕ್ಯಾಬ್ ವಶಕ್ಕೆ ಪಡೆಯಲಾಗಿದ್ದು, ಅದರ ಚಾಲಕ, ನಿರ್ವಾಹಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸೂಕ್ತ ದಾಖಲೆಗಳಿಲ್ಲದೆ ಯಾರೂ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಗಡಿಯಲ್ಲಿ ಮತ್ತೆ ಪ್ರವಾಹ ಭೀತಿ; ಹಲವು ಸೇತುವೆಗಳು ಮುಳುಗಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ