ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯ ಹಿರಿಯ ನಾಯಕರೇ ಸಿಡಿದೆದ್ದಿದ್ದಾರೆ. ಶಿಷ್ಟಾಚಾರ ಮರೆತು ಘಟ್ಟಿ ಬಸವಣ್ಣ ಡ್ಯಾಂ ಗೆ ರಮೇಶ್ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಿದ ವಿಚಾರವಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತೆ ಕಿಡಿಕಾರಿದ್ದಾರೆ.
1ಸಾವಿರ ಕೋಟಿ ಯೋಜನೆಗೆ ರಮೇಶ್ ಜಾರಕಿಹೊಳಿ ಶಿಷ್ಟಾಚಾರ ಮರೆತು ಭೂಮಿ ಪೂಜೆ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈರಣ್ಣ ಕಡಾಡಿ, ಶಿಷ್ಟಾಚಾರ ಮರೆತು ಘಟ್ಟಿ ಬಸವಣ್ಣ ಡ್ಯಾಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಶಿಷ್ಟಾಚಾರ ಇಲ್ಲದೇ ಮುಂದುವರೆದಿದ್ದು ಪಕ್ಷಕ್ಕೆ ಹಿನ್ನಡೆಯಾಗಲಿದೆ. ಈ ಬಗ್ಗೆ ಪಕ್ಷದ ವರಿಷ್ಟರ ಗಮನಕ್ಕೆ ತಂದಿದ್ದೇನೆ. ರಮೇಶ್ ಜಾರಕಿಹೊಳಿ ಯೋಜನೆ, ಯೋಚನೆ ಏನಿದೆಯೋ ಗೊತ್ತಿಲ್ಲ ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕವಾಗಿ ಇರುವವರು ಸೀತೆಯಷ್ಟೇ ಪವಿತ್ರವಾಗಿರಬೇಕಾಗುತ್ತದೆ. ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪವಿತ್ರ ಇರಬೇಕು ಎಂದು. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಮಾತನಾಡಿದ್ದ ರಮೇಶ್ ಜಾರಕಿಹೊಳಿಗೆ ಕಡಾಡಿ ಟಾಂಗ್ ನೀಡಿದರು.
ಪಕ್ಷದ ಹಿತದೃಷ್ಟಿಯಿಂದ ನಾನು ಈ ಸತ್ಯವನ್ನು ಹೇಳುತ್ತಿದ್ದೇನೆ. ಸರಿಯಾಗಿ ಅರ್ಥಮಾಡಿಕೊಂಡು ಒಟ್ಟಾಗಿ ಹೋದರೆ ಒಳ್ಳೆಯದಾಗುತ್ತದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಸರಿ ಮಾಡ್ತೀನಿ ಎಂದಿದ್ದಾರೆ. ಪಾಪ ಅವರಿಗೆ ಏನು ಒತ್ತಡ ಇದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಗೆ ಬರುವ ಮುಖ್ಯಮಂತ್ರಿಗಳಿಗೆ ಗೋಕಾಕಕ್ಕೆ ಬರಲು ಆಗೋದಿಲ್ವಾ? ಗೋಕಾಕ ಕೇಂದ್ರಾಡಳಿತ ಪ್ರದೇಶವಾ ಎಂದು ಕಡಾಡಿ ಖಾರವಾಗಿ ಪ್ರಶ್ನಿಸಿದ್ದಾರೆ.
ರಾಜ್ಯಸಭಾ ಸದಸ್ಯರಿಗೆ ಬುದ್ದಿ ಇಲ್ಲದಿದ್ರೆ ನಾನೇನೂ ಮಾಡಲಾಗುವುದಿಲ್ಲ ಎಂದಿದ್ದ ರಮೇಶ ಜಾರಕಿಹೊಳಿಗೆ ಕಡಾಡಿ ಮತ್ತೊಂದು ಟ್ವೀಟ್ ಮೂಲಕ ಮಾರುತ್ತರ ನೀಡಿದ್ದಾರೆ.
969 ಕೋಟಿ ರೂಪಾಯಿಗಳ ಸರ್ಕಾರಿ ಯೋಜನೆಯೊಂದನ್ನು ಪತ್ರಿಕೆಗಳಿಗೆ ಲಕ್ಷಾಂತರ ರೂಪಾಯಿಗಳ ಜಾಹಿರಾತು ನೀಡಿ ಶಾಸಕರೊಬ್ಬರು ಖಾಸಗಿ ಪೂಜೆ ಮಾಡಬಹುದೆಂಬ ಸತ್ಯ ಅತೀ ಬುದ್ದಿವಂತರಿಂದ ನನಗೆ ಇಂದೇ ತಿಳಿಯಿತು. ಬುದ್ದಿ ಇಲ್ಲದವರೆಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಜಟ್ಟಿ ಜಾರಿ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ