*ಅರಣ್ಯ ಭೂಮಿ ಗಡಿ ಗುರುತಿಸಿಲು ಜಂಟಿ ಸರ್ವೆ; ಸಚಿವ ಈಶ್ವರ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅರಣ್ಯ ಭೂಮಿ ಗಡಿ ಗುರುತಿಸಿ ನಿಖರ ನಕ್ಷೆ ಮಾಡುವ ಸಲುವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸರ್ವೆ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಶ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗುರುವಾರ ವಿಧಾನ ಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಕರ್ನಾಟಕ ಅರಣ್ಯ ನಿಯಮದ ಪ್ರಕಾರ ಜಿಲ್ಲಾ ಅರಣ್ಯ ಅಥವಾ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡತೆ ಹಾಗೂ 100 ಮೀಟರ್ ವ್ಯಾಪ್ತಿಯಲ್ಲಿನ ಭೂಮಿ ಮಂಜೂರಾತಿ ಪೂರ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಮ್ಮತಿ ಪಡೆಯುವುದು ಕಡ್ಡಾಯವಾಗಿದೆ. ರೈತರು ಕಂದಾಯ ಇಲಾಖೆ ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ನಿರಾಪೇಕ್ಷಣ ಪತ್ರ ಕೋರಿದಾಗ ಅರಣ್ಯ ಇಲಾಖೆಯ ದಾಖಲೆ, ಅಧಿಸೂಚನೆ ಹಾಗೂ ನಕಾಶೆಗಳೊಂದಿಗೆ ಪರಿಶೀಲಿಸಿ ಜಾಗವು ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುತ್ತದೆ ಅಥವಾ ಇಲ್ಲವೇ ಎಂದು ಹಿಂಬರಹ ನೀಡಲಾಗುತ್ತದೆ. ಅಧಿಸೂಚಿತ ಹಾಗೂ ಡೀಮ್ಡ್ ಅರಣ್ಯ ಅರಣ್ಯ ಪ್ರದೇಶಗಳಿಗೆ ಸರ್ವೆ ನಂಬರ್‍ವಾರು ವಿವರವಾದ ಮಾಹಿತಿ ಇಲ್ಲದಂತಹ ಸಂದರ್ಭದಲ್ಲಿ ನಿರಾಕ್ಷೇಪಣ ಪತ್ರ ನೀಡಲು ಕಂದಾಯ ಇಲಾಖೆಯೊಂದಿಗೆ ಜಂಟಿ ಮೋಜಣಿ ಮಾಡಲಾಗುವುದು ಎಂದರು.
ಬೆಳ್ತಂಗಡಿ ಪ್ರದೇಶದ ರಿ.ಸಂ.69ರಲ್ಲಿ ಅರಣ್ಯ ಭೂಮಿ ಬಗ್ಗೆ ಜಂಟಿ ಸರ್ವೆ ಕೈಗೊಂಡಾಗ 500 ಎಕರೆ ಅಧಿಕ ಭೂಮಿ ಅರಣ್ಯ ಇಲಾಖೆ ಭೂಮಿಯೊಂದಿಗೆ ಇರುವುದು ಕಂಡುಬಂದಿದೆ. ಸರ್ಕಾರ ಅರಣ್ಯ ಅರಣ್ಯ ಭೂಮಿ ಗಡಿ ಗುರುತಿಸಿಲು ಜಂಟಿ ಸರ್ವೆ ನಡೆಸಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆ ಮೊಜಣಿಗೆ ಕಾಲಮಿತಿ ನಿಗದಿ ಪಡಿಸುವಂತೆ ಶಾಸಕ ಹರೀಶ್ ಪೂಂಜಾ ಸಚಿವರಲ್ಲಿ ಕೋರಿದರು.
ಆನೆಗಳ ನಿಯಂತ್ರಣಕ್ಕೆ ರೈಲ್ವೇ ಬ್ಯಾರಿಕೇಡ್: ರಾಜ್ಯದಲ್ಲಿ 6995 ಆನೆಗಳು ಇವೆ. ಒಟ್ಟು 7 ಆನೆ ಕಾರ್ಯಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಓಳಪಡುವ ಆಲ್ಡಾರಾ ಶಾಖೆಯ ಅರಣ್ಯ ಗಡಿ ಪ್ರದೇಶದಲ್ಲಿ ರೈಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ 2022-23ನೇ ಸಾಲಿನಲ್ಲಿ ರೂ.1.73 ಕೋಟಿ, 2023-24ರಲ್ಲಿ ರೂ.3.59 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಒಟ್ಟು 7.152 ಕಿ.ಮೀ ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಮಾಡಬೇಕಿದೆ. ಇದರಲ್ಲಿ 1.215 ಕಿ.ಮೀ ಪೂರ್ಣಗೊಂಡಿದೆ. 2.337 ಕಿ.ಮೀ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 3.60 ಕಿ.ಮೀ ನಿರ್ಮಾಣ ಕಾಮಾಗರಿ ಬಾಕಿ ಉಳಿದಿದೆ. ಡಿಸೆಂಬರ್ 2024ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸವುದಾಗಿ ಸಚಿವ ಈಶ್ವರ ಬಿ ಖಂಡ್ರೆ, ಶಾಸಕ ರಾಜೇಗೌಡ.ಟಿ.ಡಿ ಅವರ ಪ್ರಶ್ನೆಗೆ ಉತ್ತರಿಸಿದರು.
ಮೈಸೂರು ಜಿಲ್ಲೆ ಹೆಗ್ಗದೇವನಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ 8 ಮಾನವ ಹಾಗೂ ವನ್ಯಪ್ರಾಣಿ ಸಂಘರ್ಷಗಳು ದಾಖಲಾಗಿವೆ. ಈ ಭಾಗದಲ್ಲಿ ಅರಣ್ಯ ಗಡಿ ಪ್ರದೇಶ ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. ಸಂಘರ್ಷ ತಡೆಯಲು ಜಂಟಿ ಸರ್ವೇ ಕಾರ್ಯವನ್ನು ಸಹ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಒಟ್ಟು ರೂ.200 ಕೋಟಿ ವೆಚ್ಚದಲ್ಲಿ ಆನೆಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಡೆಯಲು 640 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 312 ಕಿ.ಮೀ. ಬ್ಯಾರಿಕೇಡ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಮನೆ ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ, ಆನೆ ತಡೆ ಕಂದಕ ನಿರ್ಮಾಣ ಮಾಡಿ ನಿರ್ವಹಿಸಲಾಗುತ್ತಿದೆ ಎಂದು ಸಚಿವ ಈಶ್ವರ ಬಿ ಖಂಡ್ರೆ ಶಾಸಕ ಅನಿಲ್ ಚಿಕ್ಕಮಾದು ಪ್ರಶ್ನೆ ಉತ್ತರಿಸುವ ವೇಳೆ ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ