Karnataka NewsLatest

ಬುಧವಾರದಿಂದ ಬೆಳಗಾವಿಯಲ್ಲೇ ಮಾದರಿಗಳ ಪರೀಕ್ಷೆ; ಮೊದಲ ಸೋಂಕಿತ ಗುಣಮುಖ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  -: ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಯಾವುದೇ ಕಾರಣಕ್ಕೂ ಅದು ಸಮುದಾಯಕ್ಕೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಹೆಚ್ಚು ಮಾದರಿಗಳ ಪರಿಶೀಲನೆಗೆ ಅಗತ್ಯವಿರುವ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಬೆಳಗಾವಿ ಜಿಲ್ಲೆಗೂ ಒದಗಿಸಲು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.

ಕೋವಿಡ್ -೧೯ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಶನಿವಾರ (ಏ.೧೮) ಅಧಿಕಾರಿಗಳ ಜತೆ ಅವರು ಚರ್ಚೆ ನಡೆಸಿದರು.

ಕ್ವಾರಂಟೈನ್ ಕೇಂದ್ರಗಳಲ್ಲಿ ರಾತ್ರಿ ವೇಳೆ ಕೂಡ ನಿಗಾ ವಹಿಸುವ ಮೂಲಕ ಸೋಂಕಿತರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಧ್ಯವಾದರೆ ಪ್ರತ್ಯೇಕವಾಗಿ ಇರಿಸಲು ಪ್ರಯತ್ನಿಸಬೇಕು ಎಂದರು.
ಸೋಂಕಿತರ ಚಿಕಿತ್ಸೆ ವೇಳೆ ವೈದ್ಯರಿಗೆ ಅಗತ್ಯವಿರುವ ಪಿಪಿಇ ಕಿಟ್ ಗಳನ್ನು ನೇರವಾಗಿ ಖರೀದಿಸಲು ಅವಕಾಶವಿದ್ದರೆ ಪಡೆದುಕೊಳ್ಳಬಹುದು.
ಕೆಲವೊಮ್ಮೆ ದಾನಿಗಳಿಂದ ಕೂಡ ಪ್ರಮಾಣೀಕೃತ ಕಿಟ್ ಗಳನ್ನು ಪಡೆದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಬಹುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸೋಂಕಿತರ ಪ್ರಮಾಣ ಹೆಚ್ಚಾದಂತೆ ಸರ್ಕಾರ ಮಾರ್ಗಸೂಚಿಗಳಲ್ಲಿ ಮಾರ್ಪಾಡು ಮಾಡಲಾಗಿದ್ದು, ಆ ಪ್ರಕಾರ ಕ್ವಾರಂಟೈನ್ ಗೆ ಕ್ರಮಕೈಗೊಳ್ಳಬೇಕು.
ಪೊಲೀಸ್ ಬಂದೋಬಸ್ತ್, ಕ್ವಾರಂಟೈನ್ ಕೇಂದ್ರಗಳ ಮೇಲೆ ನಿಗಾ ವಹಿಸಲು ಹೆಚ್ಚುವರಿ ಪೊಲೀಸ್ ಪಡೆ ಬೇಕಾದರೆ ಕರೆಯಿಸಿಕೊಳ್ಳಬೇಕು ಎಂದು ಸಚಿವ ಶೆಟ್ಟರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕುಡಚಿ ಮತ್ತು ಹಿರೇಬಾಗೇವಾಡಿಯಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಕೈಗಾರಿಕೆಗಳನ್ನು ಆರಂಭಿಸುವ ಕುರಿತು ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುವುದು.
ಸೂಕ್ತ ಮುನ್ನೆಚ್ಚರಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲಿಸಿ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹೆಚ್ಚುವರಿ ವೆಂಟಿಲೇಟರ್ ಪಡೆಯಲು ನಿರ್ದೇಶನ:

ಈ ಸಂದರ್ಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು,
ಜಿಲ್ಲೆಯಲ್ಲಿ ಲಭ್ಯವಿರುವ ವೆಂಟಿಲೇಟರ್ ಜತೆಗೆ ಇನ್ನೂ ಹೆಚ್ಚಿನ ವೆಂಟಿಲೇಟರ್ ಪಡೆದುಕೊಳ್ಳಬೇಕು. ಕ್ವಾರಂಟೈನ್ ನಲ್ಲಿ ಇರುವವರು ರಾತ್ರಿ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಮದ್ಯ ಮಾರಾಟ ಬೇಡವೇ ಬೇಡ:

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸದ್ಯಕ್ಕೆ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿರುವುದರಿಂದ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಆದ್ದರಿಂದ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವರೆಗೆ ಮಾರಾಟ ಆರಂಭಿಸಬಾರದು ಎಂದರು.

ಯಾವುದೇ ಒತ್ತಡಕ್ಕೂ ಮಣಿಯದೇ ಸೂಕ್ತ ವ್ಯವಸ್ಥೆ ಇರುವ ಹೋಟೆಲ್ ಗಳನ್ನು ಮಾತ್ರ ಕ್ವಾರಂಟೈನ್ ಗೆ ಪಡೆದುಕೊಳ್ಳಬೇಕು ಎಂದರು.

ಸಹಕಾರಿ ಬ್ಯಾಂಕುಗಳು ತೆರೆದು ಗ್ರಾಹಕರಿಗೆ ಸೇವೆ ಒದಗಿಸುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪಿಪಿಇ ಕಿಟ್ ಗಳನ್ನು ಕೂಡ ಹೆಚ್ಚುವರಿಯಾಗಿ ಪಡೆದುಕೊಳ್ಳಲು ಸಚಿವರು ಕ್ರಮವಹಿಸಬೇಕು ಎಂದು ಮನವಿ ಮಾಡಿಕೊಂಡರು.

ಚೈನಾದಿಂದ ಒಟ್ಟಾರೆ ರಾಜ್ಯಕ್ಕೆ ಒಂದು ಲಕ್ಷ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಗೂ ಆದೇಶ ನೀಡಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರ ಒದಗಿಸಿರುವ ಕಿಟ್ ಗಳನ್ನು ಜಿಲ್ಲೆಗೆ ಪೂರೈಸಲು ಕೋರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದರು.

ಕ್ವಾರಂಟೈನ್ ನಲ್ಲಿ ಇರುವವರಲ್ಲಿ ಸೋಂಕು ದೃಢಪಟ್ಟಿದ್ದು, ಇದು ಸಮುದಾಯದಲ್ಲಿ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.
ಪ್ರಾಥಮಿಕ ಸಂಪರ್ಕ ಕ್ಕೆ ಬಂದವರನ್ನು ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ಜಿಲ್ಲೆಯಲ್ಲಿ 43 ಹೋಟೆಲ್ ಗಳನ್ನು ಪಡೆದುಕೊಂಡು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ.
ದ್ವಿತೀಯ ಹಂತದ ಸಂಪರ್ಕಕ್ಕೆ ಬಂದವರನ್ನು ಅವರವರ ಮನೆಗಳಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೋವಿಡ್-೧೯ ನಿಯಂತ್ರಣಾ ಕ್ರಮಗಳ ಉಸ್ತುವಾರಿಯಾಗಿರುವ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪೊಲಿಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.

ಮೊದಲ ವ್ಯಕ್ತಿ ಗುಣಮುಖ 

ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣದ ವ್ಯಕ್ತಿ ಗುಣಮುಖರಾಗಿದ್ದು, ಇದೀಗ ಮರು ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣ ಪಿ-೧೨೬ ಈಗ ಗುಣಮುಖರಾಗಿದ್ದು, ಮರು ಪರೀಕ್ಷೆ ಬಳಿಕವೂ ವರದಿ ನೆಗೆಟಿವ್ ಬಂದಿರುತ್ತದೆ. ಹಿರೇಬಾಗೇವಾಡಿ ಹಾಗೂ ಕುಡಚಿಯಲ್ಲಿ ತಲಾ 16 ಪ್ರಕರಣಗಳು ವರದಿಯಾಗಿವೆ ಎಂದರು.

ಜಿಲ್ಲಾಡಳಿತ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆರಂಭದಲ್ಲಿ ಅಸಹಕಾರ ನೀಡಿದ ಜನರು ಇದೀಗ ಪರೀಕ್ಷೆಗೆ ಸಹಕಾರ ನೀಡುತ್ತಿದ್ದಾರೆ. ಇದರಿಂದ ನಿಯಂತ್ರಣ ಸಾಧ್ಯ. ನಿಷೇಧಿತ ಪ್ರದೇಶಗಳಲ್ಲಿ ದಿನಸಿ, ತರಕಾರಿಗಳನ್ನು ಮನೆ ಮನೆಗೆ ಒದಗಿಸಲಾಗುತ್ತಿದೆ. ಸಣ್ಣಪುಟ್ಟ ತೊಂದರೆಗಳಾದರೂ ಸಹಕರಿಸಬೇಕು ಎಂದು ಶೆಟ್ಟರ್ ವಿನಂತಿಸಿದರು.

ಪ್ರಯೋಗಾಲಯಕ್ಕೆ ಅನುಮತಿ ದೊರೆತಿದೆ. ಬೆಳಿಗ್ಗೆ ಪ್ರಯೋಗಾಲಯ  ಪರಿಶೀಲನೆ ನಡೆಸಲಾಗಿದೆ.
ಬುಧವಾರದಿಂದ ಮಾದರಿಗಳ ಪರೀಕ್ಷೆ ಆರಂಭಗೊಳ್ಳಲಿದೆ.  ರ್ಯಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಜಿಲ್ಲೆಗೆ ಒದಗಿಸಲು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುವುದು.  ಗ್ರಾಮೀಣ ಪ್ರದೇಶದಲ್ಲಿ ಇರುವ ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸಿ ರಾಜ್ಯದಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಕೋವಿಡ್-೧೯ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿದರೆ ಕೈಗಾರಿಕೆ ಆರಂಭಿಸಲು ಅನುಮತಿ ನೀಡಲಾಗುವುದು.  ಎಲ್ಲ ಧರ್ಮದವರು ಸಾಮೂಹಿಕ ಪ್ರಾರ್ಥನೆಗಳನ್ನು ಕೈಬಿಡುವ ಮೂಲಕ ಕೋವಿಡ್-೧೯ ನಿಯಂತ್ರಣಕ್ಕೆ ಸಹಕರಿಸಬೇಕು.  ಬೆಳಗಾವಿಗೆ ೩೦೦೦ ರ್ಯಾಪಿಡ್ ಟೆಸ್ಟಿಂಗ್ ಕಿಟ್ ತಕ್ಷಣ ಒದಗಿಸುವಂತೆ ಕೋರಲಾಗಿದೆ.  ವೈದ್ಯರು ಕ್ಲಿನಿಕ್ ಆರಂಭಿಸಲು ಮುಂದಾಗಬೇಕು ಎಂದು ವಿನಂತಿಸಿದರು.

ಮಾಧ್ಯಮ ಮತ್ತು ಪೊಲಿಸ್ ಸೇವೆಯನ್ನು ಕೂಡ ಕರೊನಾ ವಾರಿಯರ್ಸ್‌ ಅಂತ ಪರಿಗಣಿಸುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಲಾಕ್ ಡೌನ್ ಅವಧಿಯಲ್ಲಿ ಮದ್ಯ ಮಾರಾಟ ಆರಂಭಿಸುವುದು ಸೂಕ್ತವಲ್ಲ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದರು.

ಅಪಘಾತದಲ್ಲಿ ಮೃತಪಟ್ಟ ಪಿ.ಎಸ್. ಐ. ಗಣಾಚಾರಿ ಅವರ ಮಕ್ಕಳಿಗೆ ಅನುಕಂಪ ಆಧಾರದ ಮೇಲೆ ನೌಕರಿ ಮತ್ತಿತರ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ನೂತನ ಪ್ರಯೋಗಾಲಯ ಆವರಣಕ್ಕೆ ಭೇಟಿ 

ಜಿಲ್ಲೆಗೆ ಹೊಸದಾಗಿ ಮಂಜೂರಾಗಿರುವ ಕೋವಿಡ್-೧೯ ಗೆ ಸಂಬಂಧಿಸಿದಂತೆ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯ ಆವರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಶನಿವಾರ (ಏ.೧೮) ಭೇಟಿ ನೀಡಿ ಪರಿಶೀಲಿಸಿದರು.

ಇಲ್ಲಿನ ನೆಹರೂ ನಗರದ ಕೆ.ಎಲ್.ಇ. ಆಸ್ಪತ್ರೆ ಎದುರಿಗೆ ಇರುವ ಭಾರತ ಸರ್ಕಾರದ ಆರೋಗ್ಯ ಸಂಶೋಧನಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ”ಯ ಆವರಣದಲ್ಲಿ ಕೋವಿಡ್-೧೯ ಪರೀಕ್ಷಾ ಪ್ರಯೋಗಾಲಯ ಆರಂಭಕ್ಕೆ ಈಗಾಗಲೇ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆ ಕುರಿತು ಸಂಸ್ಥೆಯ ನಿರ್ದೇಶಕರ ಜತೆ ಸಚಿವರು ಚರ್ಚೆ ನಡೆಸಿದರು.

ಪ್ರಯೋಗಾಲಯ ಮಂಜೂರಾಗಿರುವುದರಿಂದ ಅಗತ್ಯ ಸಾಮಗ್ರಿ ಮತ್ತು ಕಿಟ್ ತರಿಸಿಕೊಂಡು ತಕ್ಷಣವೇ ಪ್ರಯೋಗಾಲಯ ಆರಂಭಿಸುವಂತೆ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಪ್ರಯೋಗಾಲಯ ಆರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಎಲ್ಲ ನೆರವು ನೀಡಲಾಗಿದೆ. ಯಾವುದೇ ರೀತಿಯ ಹೆಚ್ಚಿನ ನೆರವು ಅಗತ್ಯವಿದ್ದರೆ ಕೂಡಲೇ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪ್ರಯೋಗಾಲಯಕ್ಕೆ ಅಗತ್ಯ ಸಾಮಗ್ರಿಗಳನ್ನು ಪಡೆಯಲು ಅನುದಾನ, ವಾಹನಗಳು ಮತ್ತಿತರ ನೆರವು ಜಿಲ್ಲಾಡಳಿತ ನೀಡಲಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಹೆಚ್ಚು ಮಾದರಿಗಳನ್ನು ಕಡಿಮೆ ಅವಧಿಯಲ್ಲಿ ಪರೀಕ್ಷೆಗೆ ಅನುಕೂಲವಾಗುವಂತೆ ಸ್ವಯಂಚಾಲಿತ ಯಂತ್ರ ಪೂರೈಕೆಗೆ ಆದೇಶ ನೀಡಲಾಗಿದೆ ಎಂದು ವಿವರಿಸಿದರು.

ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ದೇವಪ್ರಸಾದ ಚಟ್ಟೋಪಾಧ್ಯಾಯ, ಗಂಟಲುದ್ರವ ಮಾದರಿ ಪರೀಕ್ಷೆಯ ಕಿಟ್, ಮತ್ತಿತರ ಅಗತ್ಯ ಸಾಮಗ್ರಿಗಳು ಸೋಮವಾರ ಬರಲಿದ್ದು, ಅದು ಬಂದ ಬಳಿಕ ತಕ್ಷಣವೇ ಪರೀಕ್ಷೆ ಆರಂಭಿಸಬಹುದು ಎಂದು ತಿಳಿಸಿದರು.

ಇಡೀ ಭಾರತದಲ್ಲಿರುವ ಏಕೈಕ ಪಾರಂಪರಿಕ ಚಿಕಿತ್ಸಾ ವಿಧಾನ ಸಂಸ್ಥೆ ಇದಾಗಿದೆ. ನೂತನ ಪ್ರಯೋಗಾಲಯ ಆರಂಭಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೋವಿಡ್-೧೯ ನಿಯಂತ್ರಣಾ ಕ್ರಮಗಳ ಉಸ್ತುವಾರಿಯಾಗಿರುವ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪೊಲಿಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.

 ಅಂತಿಮ ನಮನ

  ಕೊರೋನಾ ಸೊಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯ ಪಿ‌ಎಸ್ಐ ಮನೋಹರ ಗಣಾಚಾರಿ ಅವರ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ಇಲ್ಲಿನ ಪೊಲೀಸ್ ಹುತಾತ್ಮ ಮೈದಾನದಲ್ಲಿ ಇರಿಸಲಾಗಿದ್ದ ಪಾರ್ಥಿವ ದರ್ಶನ ಪಡೆದ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಕೂಡ ಶ್ರದ್ಧಾಂಜಲಿ ಸಲ್ಲಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲಿಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಡಿಸಿಪಿ ಸೀಮಾ ಲಾಟ್ಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಪೊಲೀಸ್ ಗೌರವವನ್ನು ಕೂಡ ಸಲ್ಲಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button