ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಇಂದಿನ ಪುಸ್ತಕ ಓದುಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹುಕ್ಕೇರಿ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಆಹಾರ ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ಹೇಳಿದರು.
ಇಂದು ಸಾಯಂಕಾಲ ಸಮೀಪದ ನಿಡಸೋಸಿ ಗ್ರಾಮದ ಸಾರ್ವಜನಿಕ ಡಿಜಿಟಲ್ ಹಾಗೂ ವಿಕಲಸ್ನೇಹಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ಯೋಜನೆಗಳು, ದೇಶ-ವಿದೇಶದ ಬೆಳವಣಿಗೆ, ಕೃಷಿ ಪರಿಕಲ್ಪನೆ, ವಿಜ್ಞಾನದ ಬೆಳವಣಿಗೆ, ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಸುದ್ದಿ ಮಾದ್ಯಮದ ವರದಿಗಳು, ಉದ್ಯೋಗದ ವಾರ್ತೆಯಂತಹ ಪುಸ್ತಕ-ಪತ್ರಿಕೆಗಳನ್ನು ಒಂದೇ ಸೂರಿನಡಿ ಡಿಜಿಟಲ್ ಗ್ರಂಥಾಲಯದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಬರುವ ದಿನಮಾನಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾದರೆ ಗ್ರಂಥಾಲಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
ಡಿಜಿಟಲ್‌ನಿಂದ ಅನುಕೂಲ:
ಡಿಜಿಟಲ್ ಲೈಬ್ರರಿ ಎಂಬುದು ಇಂಟರನೆಟ್ ಮೂಲಕ ದೇಶದ ಪ್ರಚಲಿತ ವಿದ್ಯಮಾನಗಳ ಜೊತೆ ಜೊತೆಗೆ ಇತಿಹಾಸಕಾರರ ಬದುಕಿನ ಲೇಖನಗಳು ಇಂದು ಕಂಪ್ಯೂಟರ್ ಮೂಲಕ ದೊರೆಯುತ್ತಿದ್ದು, ಗ್ರಾಮದ ಯುವಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸಾನಿಧ್ಯವಹಿಸಿದ್ದ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಇತಿಹಾಸ ಅರಿತವರು ಮಾತ್ರ ಮತ್ತೊಂದು ಇತಿಹಾಸ ಸೃಷ್ಟಿಸಲು ಸಾಧ್ಯವಾಗುತ್ತದೆ. ಇತಿಹಾಸ ಅರಿಯಲು ಪುಸ್ತಕ, ಗ್ರಂಥ, ಪತ್ರಿಕೆಗಳ ಅಧ್ಯಯನ ಅವಶ್ಯಕತೆಯಿದ್ದು, ಗ್ರಂಥಾಲಯಗಳು ಸಹ ದೇವಸ್ಥಾನದಷ್ಟೇ ಪಾವಿತ್ರ್ಯತೆ ಪಡೆದಿವೆ. ಪುಸ್ತಕವೆನ್ನುವುದು ಮಸ್ತಕದ ಜ್ಞಾನ ಹೆಚ್ಚಿಸುತ್ತದೆ. ಇಂದಿನ ಯುವಕರು ಧಾರ್ಮಿಕ ಪರಂಪರೆಗಳ ಪಾಲ್ಗೊಳ್ಳುವ ಜೊತೆಗೆ ಇತಿಹಾಸ ಅಧ್ಯಯನಕಾರರ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು ಎಂದರು. ಗ್ರಾಮದಲ್ಲಿ ಗ್ರಂಥಾಲಯಕ್ಕೆ ನಿಡಸೋಸಿ ಮಠದಿಂದ ೧೦೦ ಗ್ರಂಥಗಳನ್ನು ದೇಣಿಗೆಯಾಗಿ ನೀಡಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಪಂ ಸದಸ್ಯ ದುಂಡಪ್ಪಾ ಹೆದ್ದೂರಿ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪಾರ್ವತಿ ಮಠದ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಜಯ ಪಾಟೀಲ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಸುಭಾಷ ಪಾಟೀಲ, ಪವನ ಪಾಟೀಲ, ಪರಗೌಡ ಪಾಟೀಲ, ಶಿವಾನಂದ ಕರೋಶಿ, ರಾಜು ಗಡಕರಿ, ಚಂದ್ರಕಾಂತ ಭೋಸಲೆ, ಮಹಾಂತೇಶ ಮಠದ, ರವಿ ಪದ್ಮಣ್ಣವರ, ಬಸವರಾಜ ಕೆಂಗಾರ, ತಾಪಂ ಇಒ ಎಸ್.ಬಿ.ಸಿದ್ನಾಳ, ಪಿಡಿಒ ಸಾವಿತ್ರಿ ಪಗಡಿಹಳ್ಳಿ, ಸೆಕ್ರೆಟರಿ ರವೀಂದ್ರ ಕಂಕಣವಾಡಿ, ಶಿವಾನಂದ ಮಜಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇಂದಿನ ಜನರಲ್ಲಿ ತಿಳಿವಳಿಕೆ ವೃದ್ಧಿಯಾಗಲು ಜನರು ಪುಸ್ತಕ, ಗ್ರಂಥ, ಪತ್ರಿಕೆಗಳನ್ನು ಅಧ್ಯಯನ ಮಾಡಬೇಕಾಗಿದ್ದು, ನಿತ್ಯ ದೇವಸ್ಥಾನಗಳಿಗೆ ಬರುವ ಜನರು ಗ್ರಂಥಾಲಯಗಳಲ್ಲಿ ಸ್ವಲ್ಪ ಸಮಯ ಕಳೆದು ತಮಗೆ ಅಭಿರುಚಿಯಿರುವ ಪುಸ್ತಕ ಪತ್ರಿಕೆಗಳ ಅಧ್ಯಯನ ಮಾಡಬೇಕು. ಪುಸ್ತಕದಿಂದ ಮನದ ಕತ್ತಲು ಕಳೆಯುತ್ತದೆ. ಹಿಂದಿನ ಹಿರಿಯರು ದೇವಸ್ಥಾನಗಳಷ್ಟೇ ಪಾವಿತ್ಯತೆಯನ್ನು ಗ್ರಂಥಾಲಯಗಳಿಗೆ ನೀಡಿದ್ದಾರೆ. ಸರಕಾರ ಪ್ರತಿ ಗ್ರಾಮಗಳಲ್ಲಿ ಗ್ರಂಥಾಲಯಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಬೇಕಾಗಿದೆ.
-ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ನಿಡಸೋಸಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ