Kannada NewsKarnataka NewsLatestPolitics

*ಅಮೇರಿಕನ್ನರು ಭವಿಷ್ಯದಲ್ಲಿ ಭಾರತದ ವೀಸಾಗಾಗಿ ಕಾಯುವ ಕಾಲ ಬರಲಿದೆ: ಮಾಜಿ ಸಿಎಂ ಬೊಮ್ಮಾಯಿ*

ಉತ್ಪಾದನಾ ಕ್ಷೇತ್ರದಲ್ಲಿ ಭವಿಷ್ಯ ಭಾರತದ್ದಾಗಲಿದೆ : ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ: ಪ್ರಸ್ತುತ ಅಮೇರಿಕಾ ವೀಸಾ ಪಡೆಯುವುದು ಕಷ್ಟವಾಗಿದ್ದು, ಭವಿಷ್ಯದಲ್ಲಿ ಭಾರತದ ವೀಸಾಗಾಗಿ ಅಮೇರಿಕನ್ನರು ಕಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಬೆಂಗಳೂರಿನಲ್ಲಿ ಎಥಿರಿಯಲ್ ಮಷಿನ್ಸ್ ಕಾರ್ಖಾನೆಯ ನೂತನ ಘಕಟವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ನಮ್ಮ ಯುವಕರ ಸಾಧನೆ ಹೆಮ್ಮೆ ಪಡುವಂತೆ ಮಾಡಿದೆ ಎಂದು ಹೇಳಿದರು.


ಕಾಲ ಬದಲಾಗುತ್ತದೆ ಅಂತ ಹೇಳುತ್ತಾರೆ‌. ಕಾಲ ಬದಲಾಗುವುದನ್ನು ಅನುಭವಿಸಲು ಬಹಳ ಕಡಿಮೆ ಅವಕಾಶ ಸಿಗುತ್ತದೆ. ಪ್ರತಿಯೊಬ್ಬರಿಗೂ ಯುಎಸ್ ಗೆ ಹೋಗಬೇಕೆಂಬ ಬಯಕೆ ಇರುತ್ತದೆ. ಯುಎಸ್ ವಿಸಾ ಸಿಗುವುದು ಸುಲಭದ ವಿಷಯವಲ್ಲ. ಆದರೆ, ಭವಿಷ್ಯದಲ್ಲಿ ಯುಸ್ ಜನರು ಭಾರತೀಯ ವೀಸಾಗಾಗಿ ಕಾಯುವ ಕಾಲ ಬರುತ್ತದೆ. ಎಥಿರಿಯಲ್ ಮಿಷಿನ್ಸ್ ಆ ರೀತಿಯ ಸಾಧನೆ ಮಾಡಿದೆ‌. ಎಥಿರಿಯಲ್ ಕಂಪನಿ ಭಾರತದಲ್ಲಿಯೇ ಉತ್ಪಾದನೆ ಆರಂಭಿಸಿರುವುದರಿಂದ ಅಮೇರಿಕದವರು ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ‌. ಇದೇ ಅಮೃತ ಕಾಲ ಭಾರತ, ಭವಿಷ್ಯದ ಭಾರತ ಎಂದು ಹೇಳಿದರು.


ಬಹಳ ಜನರು ಸಾಕಷ್ಟು ಕನಸು, ಕಲ್ಪನೆಗಳನ್ನು ಹೊಂದಿರುತ್ತಾರೆ ಆದರೆ, ಎಲ್ಲರೂ ಅದನ್ನು ಸಾಧಿಸಲು ಆಗುವುದಿಲ್ಲ. ಈ ಯುವಕರು ಸಾಧನೆ ಮಾಡಿ ತೋರಿಸಿದ್ದಾರೆ. ನಾನು ಟಾಟಾ ಮೋಟರ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೆ, ಅವರು ಮರ್ಸಡೀಸ್ ಬೆಂಜ್ ಕಾರ್ ಜೊತೆಗಿನ ಒಪ್ಪಂದ ಮುಗಿದ ತಕ್ಷಣ ತಮ್ಮದೇ ಸ್ವಂತ ಬಿಡಿ ಭಾಗಗಳನ್ನು ಬಳಸಿ ಕಾರು ಉತ್ಪಾದನೆ ಮಾಡಲು ಆರಂಭಿಸಿದರು. ಎಥಿರಿಯಲ್ ಸಂಸ್ಥೆ ಕೂಡ ಟಾಟಾ ಮೋಟರ್ಸ್ ರೀತಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ನಾವು ಕಾಯಕವೇ ಕೈಲಾಸ್ ಎಂದು ಹೇಳುತ್ತೇವೆ. ಆದರೆ, ನಾವು ಅದನ್ನು ಪಾಲಿಸುವುದಿಲ್ಲ. ವಿದೇಶಿಗರು ವಾಸ್ತವಿಕತೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಾರೆ. ನಾವು ಲಕ್ ನಂಬುತ್ತೇವೆ. ಆದರೆ, ಲಕ್ ಎನ್ನುವುದು ನಮ್ಮ ಕಠಿಣ ಶ್ರಮದ ಮುಂಚೆ ದೊರೆಯುವ ಬೊನಸ್ ಎಂದರು.
ಯುವಕರೇ ನಮ್ಮ ದೇಶದ ಭವಿಷ್ಯ. ದೇಶದ ಭವಿಷ್ಯ ಶಾಲೆ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳು, ದುಡಿಯುವ ಯುವಕರಲ್ಲಿದೆ. ಜಗತ್ತಿನಲ್ಲಿ ಅಭಿವೃದ್ಧಿ ಪರ್ವ ತುತ್ತ ತುದಿಯಲ್ಲಿದ್ದು, ಭಾರತದಲ್ಲಿ ಈಗ ಅಭಿವೃದ್ಧಿ ಪಥ ಆರಂಭವಾಗಿದೆ. ಭಾರತದಲ್ಲಿ ಸಂಶೋಧನಾ ವಲಯದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತಿವೆ. ಭವಿಷ್ಯ ಭಾರತದ್ದಾಗಲಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಎಥಿರಿಯಲ್ ಮಷಿನ್ಸ್ ಕಾರ್ಖಾನೆ ಮುಖ್ಯಸ್ಥ ಕೌಶಿಕ್ ಮುದ್ದಾ ಹಾಜರಿದ್ದರು.

Related Articles

Back to top button