ಗಿರೀಶ್ ಬಿ.
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿರುವುದರಿಂದ ಲಕ್ಷಾಂತರ ಕರಸೇವಕರ ಬಲಿದಾನಕ್ಕೆ ಕೊನೆಗೂ ನ್ಯಾಯ ದೊರಕಿದಂತಾಗಿದೆ.
ಅಂತೂ ಇಂತೂ ೧೯೪೦ ರ ದಶಕದದಿಂದಲೂ ಪರಿಹಾರ ಕಾಣದ ರಾಮ ಮಂದಿರ ವಿವಾದ ಸುಖಾಂತ್ಯ ಕಂಡಿದೆ. ಇಷ್ಟು ದಿನ ಭಾರತ ಜಗತ್ತಿನಲ್ಲಿ ತಾಜ್‌ಮಹಲ್ ಮೂಲಕ ಗಮನ ಸೆಳೆಯುತ್ತಿತ್ತು. ಭಾರತ ಇನ್ನು ಮುಂದೆ ಶ್ರೀ ರಾಮಮಂದಿರದ ಮೂಲಕ ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾದರೂ ಅಚ್ಚರಿ ಪಡಬೇಕಿಲ್ಲ. ಭಾರತದಂತಹ ದೇಶದಲ್ಲಿ ನಮ್ಮ ಶ್ರೀರಾಮ ಹುಟ್ಟಿದ ಸ್ಥಳದಲ್ಲಿ ಮಂದಿರ ಕಟ್ಟಲು ಎಷ್ಟೊಂದು ಸಂಘರ್ಷ ಮಾಡಬೇಕಾಯಿತು ಅಲ್ಲವೇ? ಶ್ರೀರಾಮನ ಅಸ್ತಿತ್ವವೇ ಇಲ್ಲ ಎಂದು ವಾದಿಸಿಕೊಂಡು ಶ್ರೀರಾಮ ಮಂದಿರದ ವಿವಾದವನ್ನು ಇನ್ನಷ್ಟು ಕಠಿಣವಾಗಿಸುತ್ತ ಬಂದ ಒಂದು ರಾಜಕೀಯ ಪಕ್ಷ. ಆ ಪಕ್ಷವು ಕಳೆದ ೭ ದಶಕಗಳಿಂದ ದೇಶವನ್ನಾಳುತ್ತಿದ್ದರೂ ಅದಕ್ಕೆ ಏಕೋ ಹಿಂದೂಗಳು, ಹಿಂದೂಗಳ ನಂಬಿಕೆ ಎಂದರೆ ಅಷ್ಟಕ್ಕಷ್ಟೆ? ಆ ಪಕ್ಷಕ್ಕೇಕೋ ರಾಮ ಮಂದಿರ ವಿವಾದ ಬಗೆಹರಿಯುವುದು ಬೇಕಿರಲಿಲ್ಲ.
ರಾಮಮಂದಿರ ವಿವಾದದ ಕಿಡಿ ೧೯೪೦ ರಿಂದಲೂ ಜೀವಂತವಾಗಿತ್ತು. ಅದರಲ್ಲೂ ಕಳೆದ ೩೦ ವರ್ಷಗಳಿಂದ ಈಚೆಗಂತೂ ತೀವ್ರ ವಿವಾದದಿಂದಲೇ ಕೂಡಿತ್ತು. ರಾಮ ಮಂದಿರ ಗಲಾಟೆಯು ಪರಸ್ಪರ ಹಿಂದು-ಮುಸ್ಲಿಂ ವಿವಾದವೆಂದು ಪರಿಗಣಿಸಲ್ಪಟ್ಟರೂ ಬೇಳೆ ಬೇಯಿಸಿಕೊಂಡಿದ್ದು ಮಾತ್ರ ರಾಜಕೀಯ ಪಕ್ಷಗಳೇ ಆಗಿದ್ದವು. ಕೆಲವು ವರ್ಗಕ್ಕಂತೂ ಈ ರಾಮ ಮಂದಿರ ವಿವಾದ ಇಂದಿಗೂ ಇತ್ಯರ್ಥವಾಗಿರುವುದು ಸಮಾಧಾನ ತಂದಿಲ್ಲ. ಅಯೋಧ್ಯೆಯಲ್ಲಿ ದೀರ್ಘಕಾಲದಿಂದಲೂ ಭಗವಾನ್ ರಾಮನ ಜನನದ ಸ್ಥಳದಲ್ಲಿ, ಮೊಘಲ್ ರಾಜ ಬಾಬರ್ ೧೫೨೮ ರಲ್ಲಿ ಬಾಬರಿ ಮಸೀದಿ ನಿರ್ಮಿಸುವ ಸಲುವಾಗಿ ರಾಮ ಮಂದಿರವನ್ನು ನೆಲಸಮ ಮಾಡಿದ್ದ ಎಂದು ಹೇಳಲಾಗಿದೆ. ಆದ್ದರಿಂದ ಹಿಂದೂಗಳು ಮೊದಲು ಅಲ್ಲಿ ದೇವಾಲಯವಿತ್ತು ಎಂದು ವಾದಿಸುತ್ತ ಬಂದಿದ್ದರು. ಬಾಬರಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದನ್ನು ಮುಂದುವರೆಸಿದ ಮುಸ್ಲಿಮರು ಹಿಂದೂಗಳ ಹಕ್ಕನ್ನು ನಿರಾಕರಿಸಿದ್ದರು.
ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ೧೯೯೨ ರ ಡಿಸೆಂಬರ್ ೬ ರಂದು ನಾಶಗೊಳಿಸಲಾಯಿತು. ತದನಂತರ ಭೂ ಶೀರ್ಷಿಕೆ ಪ್ರಕರಣವನ್ನು ಅಲಹಾಬಾದ್ ನ್ಯಾಯಾಲಯಕ್ಕೆ ದಾಖಲಿಸಲಾಯಿತು. ತೀರ್ಪು ೩೦-೦೯-೨೦೧೦ ರಂದು ಹೊರಬಿತ್ತು. ಅಲಹಾಬಾದ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಅಯೋಧ್ಯೆಯ ೨.೭೭ ಎಕರೆ (೧.೧೨ ಹೆಕ್ಟೇರ್) ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಬೇಕೆಂದು ತೀರ್ಪು ನೀಡಿದರು. ಮೂರನೇ ಒಂದು ಭಾಗವು ಹಿಂದೂ ಮಹಾಸಭೆಯಿಂದ ಪ್ರತಿನಿಧಿಸಲ್ಪಟ್ಟ ರಾಮ್ ಲಲ್ಲಾ ಅಥವಾ ಶಿಶು ರಾಮಾಗೆ ಹೋಗುತ್ತದೆ. ಮೂರನೇ ಒಂದು ಭಾಗ ಸುನ್ನಿ ವಕ್ಫ್ ಮಂಡಳಿ, ಮತ್ತು ಉಳಿದ ಮೂರನೇ ಒಂದು ಭಾಗ ಹಿಂದೂ ಧಾರ್ಮಿಕ ಪಂಗಡವಾದ ನಿರ್ಮೋಹಿ ಅಖಾರಾಗೆ ಹೋಗುತ್ತದೆ ಎಂದು ಘೋಷಿಸಿತು. ದೇವಾಲಯವನ್ನು ನೆಲಸಮಗೊಳಿಸಿದ ನಂತರ ವಿವಾದಿತ ರಚನೆಯನ್ನು ನಿರ್ಮಿಸಲಾಗಿದೆ ಎಂದು ಮೂವರು ನ್ಯಾಯಾಧೀಶರ ನ್ಯಾಯಪೀಠ ಸರ್ವಾನುಮತದಿಂದ ಹೇಳದಿದ್ದರೂ, ಅದೇ ಸ್ಥಳದಲ್ಲಿ ಮಸೀದಿಗೆ ಮುಂಚೆ ದೇವಾಲಯ ಇತ್ತೆಂತು ಒಪ್ಪಿಕೊಂಡಿತು.
ಐದು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠವು ೨೦೧೯ ರ ಆಗಸ್ಟ್ ನಿಂದ ಅಕ್ಟೋಬರ್ ರವರೆಗೆ ಪ್ರಕರಣದ ವಾದವನ್ನು ಆಲಿಸಿತು. ೨೦೧೯ ರ ನವೆಂಬರ್ ೯ ರಂದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ತಮ್ಮ ತೀರ್ಪನ್ನು ಪ್ರಕಟಿಸಿತು. ಆ ತೀರ್ಪಿನಲ್ಲಿ ತೆರಿಗೆ ದಾಖಲೆಗಳ ಆಧಾರದ ಮೇಲೆ ಭೂಮಿ ಸರ್ಕಾರಕ್ಕೆ ಸೇರಿದ್ದು ಎನ್ನಲಾಗಿತ್ತು. ಹಿಂದೂ ದೇವಾಲಯ ನಿರ್ಮಿಸಲು ಭೂಮಿಯನ್ನು ಟ್ರಸ್ಟ್‌ಗೆ ಹಸ್ತಾಂತರಿಸುವಂತೆ ಅದು ಆದೇಶಿಸಿತು. ಮಸೀದಿ ನಿರ್ಮಿಸಲು ಪರ್ಯಾಯವಾಗಿ ಐದು ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತು.
ವಿವಾದ ಸಾಗಿ ಬಂದ ದಾರಿ:
೧) ೧೫೨೮ ರಲ್ಲಿ ಮೊಘಲ್ ದೊರೆ ಬಾಬರ್‌ನಿಂದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣ
೨) ೧೮೮೫ ರಲ್ಲಿ ವಿವಾದಗ್ರಸ್ತ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಅವಕಾಶ ಕೋರಿ ಮಹಾಂತ ರಘುಬೀರ್ ದಾಸ್‌ರಿಂದ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ, ನಂತರ ಅದು ತಿರಸ್ಕೃತ
೩) ೧೯೪೯ ರಲ್ಲಿ ವಿವಾದಗ್ರಸ್ತ ಮಸೀದಿಯ ಕೇಂದ್ರ ಗುಮ್ಮಟದೊಳಗೆ ರಾಮಲಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ.
೪) ೧೯೫೦ ರಲ್ಲಿ ಈ ವಿಗ್ರಹಗಳ ಪೂಜೆಗೆ ಅನುಮತಿ ಕೋರಿ ಗೋಪಾಲ್ ಶೀಮ್ಲಾ, ರಾಮಚಂದ್ರ ದಾಸ್‌ರಿಂದ ಫೈಜಾಬಾದ್ ಕೋರ್ಟ್‌ಗೆ ಅರ್ಜಿ.
೫) ೧೯೫೯ ರಲ್ಲಿ ಸ್ಥಳದ ಸ್ವಾಧೀನ ಕೋರಿ ನಿರ್ಮೋಹಿ ಅಖಾರದಿಂದ ಅರ್ಜಿ
೬) ೧೯೮೧ ರಲ್ಲಿ ಸುನ್ನಿ ವಕ್ಫ್ ಮಂಡಳಿಯಿಂದಲೂ ಜಾಗದ ಒಡೆತನಕ್ಕಾಗಿ ಮನವಿ
೭) ೧೯೮೬ ರಲ್ಲಿ ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಕೋರ್ಟ್ ಆದೇಶ
೮) ೧೯೮೯ ರಲ್ಲಿ ವಿವಾದಗ್ರಸ್ಥ ಜಾಗದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಅಲಹಬಾದ್ ನ್ಯಾಯಾಲಯದಿಂದ ಆದೇಶ
೯) ೧೯೯೦ ರಲ್ಲಿ ಎಲ್‌ಕೆ ಅಡ್ವಾಣಿ ಅವರಿಂದ ದೇಶಾದ್ಯಂತ ಅಯೋಧ್ಯೆ ವಿಷಯದ ರಥ ಯಾತ್ರೆ
೧೦) ೧೯೯೨ ರ ಡಿಸೆಂಬರ್ ೬ ರಂದು ಬಾಬ್ರಿ ಮಸೀದಿ ಧ್ವಂಸ
೧೧) ೨೦೦೨ ರಲ್ಲಿ ಜಾಗದ ಒಡೆತನ ಯಾರಿಗೆ ಸೇರಿದ್ದು ಎನ್ನುವ ವ್ಯಾಜ್ಯ ಕುರಿತು ಅಲಹಬಾದ್ ಹೈಕೋರ್ಟ್ ವಿಚಾರಣೆ
೧೨) ೨೦೧೦ ರಲ್ಲಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾ ಮೂರು ವಾರಸುದಾರರಿಗೆ ವಿವಾದಿತ ಜಾಗದ ಸಮಾನ ಹಂಚಿಕೆ ಮಾಡಿ ತೀರ್ಪು
೧೩) ೨೦೧೧ ರಲ್ಲಿ ಅಯೋಧ್ಯೆ ಭೂ ವಿವಾದ ಕುರಿತ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ
೧೪) ೨೦೧೭ ರಲ್ಲಿ ಪರಸ್ಪರ ಸಂಧಾನ ಸಮ್ಮತಿ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ಸಿಜೆಐ ಜೆ.ಎಸ್ ಖೇಹರ್ ಸಲಹೆ
೧೫) ೨೦೧೭ ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ೧೯೯೪ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್‌ನಿಂದ ತ್ರಿಸದಸ್ಯ ಪೀಠ ರಚನೆ
೧೬) ೨೦೧೯ ರ ನವೆಂಬರ್ ೧೯ರಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದಿಂದ ೧೯೯೩ ರಲ್ಲಿ ಬಾಬರಿ ಮಸೀದಿಯ ವಿವಾದಿತ ಜಾಗದ ಅಕ್ಕಪಕ್ಕ ಇರುವ ೬೭ ಎಕರೆ ಭೂಮಿ ರಾಮ ಜನ್ಮ ಭೂಮಿ ವ್ಯಾಸ್ ಸಮಿತಿಗೆ ಸೇರಿದ್ದು ಎಂದು ತೀರ್ಪು ಪ್ರಕಟ
೧೭) ೨೦೨೦ರ ಫೆ. ೫ರಂದು ಕೇಂದ್ರ ಸರ್ಕಾರದಿಂದ ’ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ’ ರಚನೆ
೧೮) ಚಂಪತ್‌ರಾಯ್ ಅವರನ್ನು ಟ್ರಸ್ಟ್ ಪ್ರಧಾನ ಕಾರ‍್ಯದರ್ಶಿ, ಸ್ವಾಮಿ ಗೋವಿಂದ ದೇವ್ ಗಿರಿಯವರನ್ನು ಖಜಾಂಚಿಯಾಗಿ ನೇಮಕ
೧೯) ರಾಮಮಂದಿರ ಟ್ರಸ್ಟ್‌ನಿಂದ ರಾಮಮಂದಿರ ನಿರ್ಮಾಣದ ಗುತ್ತಿಗೆ ಎಲ್ ಆಂಡ್ ಟಿ ಕಂಪನಿಗೆ
೨೦) ೨೦೨೦ ರ ಆಗಸ್ಟ್ ೫ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ.
ರಾಮಮಂದಿರದ ವಿಶೇಷತೆಗಳು:
ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಹಲವು ಪುಣ್ಯಕ್ಷೇತ್ರದಿಂದ ತೀರ್ಥ ಮತ್ತು ಮಣ್ಣು ಸಹ ಕಳುಹಿಸಕೊಡಲಾಗಿದೆ.
೧) ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ದೇವಾಲಯವು ೧೬೧ ಅಡಿ ಎತ್ತರ ಇರಲಿದೆ.
೨) ೧೯೮೮ರಲ್ಲಿ ಸಿದ್ಧಪಡಿಸಿದ ಮೂಲ ವಿನ್ಯಾಸದಲ್ಲಿ ರಾಮ ಮಂದಿರದ ಎತ್ತರ ೧೪೧ ಅಡಿ ಎಂದು ಉಲ್ಲೇಖಿಸಲಾಗಿತ್ತು.
೩) ರಾಮ ಮಂದಿರ ವಿನ್ಯಾಸ ೩೦ ವರ್ಷದ ಹಿಂದೆಯೇ ಅಂದರೆ ೧೯೮೮ರಲ್ಲಿ ಸಿದ್ದಪಡಿಸಲಾಗಿತ್ತು.
೪) ಪರಿಷ್ಕೃತ ವಿನ್ಯಾಸದ ಪ್ರಕಾರ ದೇವಾಲಯದ ಎತ್ತರವನ್ನು ೧೪೧ ಅಡಿಗಳಿಂದ ೧೬೧ ಅಡಿಗಳಿಗೆ ಹೆಚ್ಚಿಸಲಾಗುವುದು.
೫) ಹಿಂದಿನ ವಿನ್ಯಾಸದ ಆಧಾರದ ಮೇಲೆ ಕೆತ್ತಿದ ಎಲ್ಲಾ ಕಂಬಗಳು ಮತ್ತು ಕಲ್ಲುಗಳನ್ನು ಸಹ ಬಳಸಲಾಗುವುದು.
೬) ರಾಮ ಮಂದಿರದ ಸ್ತಂಭಗಳ ಸಂಖ್ಯೆ ೨೧೨ ರಿಂದ ೩೬೦ಕ್ಕೆ ಏರಿಸಲಾಗಿದೆ
೭) ದೇವಾಲಯವು ಒಟ್ಟು ೩ ಮಹಡಿಗಳನ್ನು ಹೊಂದಿರುತ್ತದೆ.
೮) ಮೆಟ್ಟಿಲುಗಳ ಅಗಲ ೧೬ ಅಡಿ ಇರಲಿದೆ.
೯) ೪ ಸಣ್ಣ ದೇವಾಲಯಗಳು ಮಂದಿರದೊಂದಿಗೆ ಸುತ್ತುವರೆಯಲಿದೆ.
೧೦) ಕಳೆದ ೩೦ ವರ್ಷಗಳಿಂದ ಸಂಗ್ರಹಿಸಿದ ೨ ಲಕ್ಷಕ್ಕೂ ಹೆಚ್ಚು ಇಟ್ಟಿಗೆಗಳಿಂದ ದೇವಾಲಯದ ಅಡಿಪಾಯ ಹಾಕಲಾಗುವುದು.
೧೧) ಮಂದಿರದ ನಿಮಾರ್ಣದಲ್ಲಿ ರಾಜಸ್ಥಾನದ ಬನ್ಷಿ ಪರ್ವತಗಳ ಕಲ್ಲುಗಳನ್ನು ಬಳಸಲಾಗುತ್ತದೆ.
೧೨) ದೇವಾಲಯದ ನಿರ್ಮಾಣಕ್ಕೆ ಮೂರುವರೆ ವರ್ಷಗಳ ಸಮಯ ಬೇಕು.
೧೩) ಮಂದಿರ ನಿರ್ಮಾಣದ ಅಂದಾಜು ವೆಚ್ಚ ೩೦೦ ಕೋಟಿ ರೂ.
೧೪) ದೇವಾಲಯದ ಸುತ್ತಮುತ್ತಲಿನ ೨೦ ಎಕರೆ ಪ್ರದೇಶದ ಅಭಿವೃದ್ಧಿಗೆ ೧,೦೦೦ ಕೋಟಿ ರೂ ವೆಚ್ಚ.
ಅಯೋಧ್ಯೆಯಲ್ಲಿ ೬೦೦೦ ದೇವ ಮಂದಿರಗಳಿವೆ. ಅಲ್ಲಿ ಒಂದೊಂದು ಮನೆಯೂ ದೇವಸ್ಥಾನವೇ. ಪ್ರತಿ ಮನೆಯೂ ಶ್ರದ್ಧೆ ಭಕ್ತಿಗಳಿಂದ ಭಗವಾನನಿಗೆ ನಿತ್ಯಪೂಜೆ ಸಲ್ಲಿಸುತ್ತದೆ. ರಾಮ ಮಂದಿರ ನಿರ್ಮಾಣವಾದರೆ ಅಯೋಧ್ಯೆಯ ಅಭಿವೃದ್ಧಿಯೂ ಆಗಲಿದೆ. ಒಟ್ಟಿನಲ್ಲಿ ಹಿಂದೂಗಳು ಹಲವು ವರ್ಷಗಳ ಈ ವ್ಯಾಜ್ಯ ಬಗೆಹರಿದಿದ್ದಕ್ಕೆ ನಿಟ್ಟುಸಿರು ಬಿಟ್ಟಂತಾಗಿದೆ. ಅಲ್ಲದೆ ದೇಶದಲ್ಲಿ ನ್ಯಾಯಾಲಯಗಳಿಂದ ತುಸು ವಿಳಂಬವಾದರೂ ಎಂತಹ ವ್ಯಾಜ್ಯವಾದರೂ ಬರೆಹರಿಯಲು ಸಾಧ್ಯ ಎನ್ನುವುದು ಶ್ರೀರಾಮ ಮಂದಿರ ವಿಷಯದಲ್ಲಿ ಸಾಬೀತಾದಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ