*ಶಾಂತಿ, ಸೌಹಾರ್ದತೆಯ ಹಬ್ಬ ಆಚರಣೆಗೆ ಎಲ್ಲರೂ ಸಹಕರಿಸಬೇಕು: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶ ಹಬ್ಬ ಅದ್ದೂರಿ ಆಚರಣೆಯಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ. ಪ್ರತಿ ವರ್ಷದಂತೆ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸೋಣ. ಈ ನಿಟ್ಟಿನಲ್ಲಿ ಶಾಂತಿ, ಸೌಹಾರ್ದತೆಯ ಗಣೇಶ ಹಬ್ಬ ಆಚರಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸೋಮವಾರ (ಆ.16) ನಡೆದ ಗಣೇಶ ಉತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶ ಹಬ್ಬದ ಆಚರಣೆಯ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಸರ ಹಾಳಾಗದಂತೆ ಮಣ್ಣಿನ ಮೂರ್ತಿಯ ಗಣಪತಿಗಳನ್ನು ಸ್ಥಾಪಿಸುವುದು ಅವಶ್ಯ, ಮೂರ್ತಿ ಸ್ಥಾಪನೆಯ ಮುನ್ನ ಅನುಮತಿ ಪಡೆಯುವದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ಗಣೇಶ ವಿಷರ್ಜನೆ ಸಂದರ್ಭದಲ್ಲಿ ಅನಾನೂಕೂಲವಾಗದಂತೆ ವಿಸರ್ಜನಾ ಮಾರ್ಗದಲ್ಲಿನ ಅಪಾಯಕಾರಿ ಗಿಡ ಮರಗಳನ್ನು, ವಿದ್ಯುತ್ ತಂತಿ, ಕೇಬಲ್‌ಗಳ ತೆರವಿಗೆ ಸಂಬಂಧಿಸಿದಂತೆ ಇಲಾಖೆಗಳು ಮಹಾನಗರ ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಿ ತೆರವಿಗೆ ಕ್ರಮ ವಹಿಸಬೇಕು. ಅಗ್ನಿಶಾಮಕ ಇಲಾಖೆ ಗಣೇಶ ಹಬ್ಬದ ಸಂದರ್ಭದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯು ಕಾರ್ಯಪ್ರವೃತ್ತರಾಗುವಂತೆ ಸನ್ನಧವಾಗಿರಲು ಸೂಚಿಸಿದ ಅವರು ಹೆಸ್ಕಾಂ ವತಿಯಿಂದ ನಗರದ ಎಲ್ಲ ಗಣೇಶ ಮಂಟಪಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲು ತಿಳಿಸಿದರು.
ಗಣೇಶ ವಿಸರ್ಜನೆ ಸಮಯದಲ್ಲಿ ಸಿಡಿಮದ್ದುಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬ್ಯಾನರ್, ಬಂಟಿಂಗ್ ಅಳವಡಿಕೆಗೆ ಅನುಮತಿಯು ಕಡ್ಡಾಯವಾಗಿರುತ್ತದೆ. ಗಣೇಶ ವಿಸರ್ಜನಾ ಸ್ಥಳಗಳಲ್ಲಿ ನುರಿತ ಈಜುಗಾರರನ್ನು ನೇಮಿಸಬೇಕು. ಜೊತೆಗೆ ಗಣೇಶೋತ್ಸವಕ್ಕಾಗಿ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಅವರು ಗಣೇಶ ಉತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಸಂಬಂಧಿಸಿದಂತೆ ಇಲಾಖೆಗಳು ವಹಿಸಿಕೊಳ್ಳಬೇಕು. ಎಲ್ಲ ಇಲಾಖೆಯ ಅಧಿಕಾರಿಗಳ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಮಹಾಮಂಡಳಿಗಳ ಸಮನ್ವಯದೊಂದಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದರು.
ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಭೋರಸೆ ಅವರು ಮಾತನಾಡಿ, ಶಾಂತಿ ಹಾಗೂ ಸಂಭ್ರಮದ ಗಣೇಶೋತ್ಸವ ಆಚರಣೆಗೆ ಎಲ್ಲ ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿಗಳ ಜೊತೆ ಸಭೆ ಕರೆದು ಅಗತ್ಯ ಬಂದೋಬಸ್ತ ಕಲ್ಪಿಸಲು ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ನಗರದ ದೂರುಗಳನ್ನು 48 ಗಂಟೆಗಳಲ್ಲಿ ಕೂಡಲೇ ಪೊಲೀಸ್ ಇಲಾಖೆಯಿಂದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.
ಡಿ.ಜೆ ಅಳವಡಿಕೆಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವರ ಮೇಲೆ ಕ್ರಮ ಜರುಗಿಸಲಾಗುವದು. ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿರುತ್ತದೆ. ಗಣೇಶ ವಿಸರ್ಜನೆಗೆ ಸಂಬAಧಿಸಿದAತೆ ಮೂರ್ತಿಗಳು ಸಂಚರಿಸುವ ರಸ್ತೆಗಳಲ್ಲಿ 64 ಕ್ಕಿಂತ ಹೆಚ್ಚು ಸಣ್ಣ ಮತ್ತು ದೊಡ್ಡ ಆಸ್ಪತ್ರೆಗಳಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಕಾಲಮಿತಿಯೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದಲ್ಲಿ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಗಣೇಶ ಮೂರ್ತಿಗಳು ಹೆಚ್ಚು ಎತ್ತರವಾಗಿರದಂತೆ ನೋಡಿಕೊಳ್ಳಬೇಕು. ಇದರಿಂದ ಸಂಭವನೀಯ ಅನಾಹುತಗಳನ್ನು ತಡೆಗಟ್ಟಬಹುದಾಗಿದೆ. ಅನುಮತಿಸಲಾದ ಕಾರ್ಯಕ್ರಮಗಳನ್ನು ನಿಗದಿತ ಸಮಯದೊಳಗಾಗಿ ಪೂರ್ಣಗೊಳಿಸಬೇಕು. ಗಣೇಶ ಮಹಾಮಂಡಳಿಗಳು ಸ್ವಯಂ ಸೇವಕರನ್ನು ನೇಮಿಸುವುದರ ಜೊತೆಗೆ ಗಣೇಶ ವಿಸರ್ಜನೆ ಪ್ರಾರಂಭದಿಂದ ಕೊನೆಯವರೆಗೆ ಕಡ್ಡಾಯವಾಗಿ ಹಾಜರಿರಬೇಕು ಇದರ ಜೊತೆಗೆ ಮಂಡಳಿಗಳ ಮುಖ್ಯಸ್ಥರು ಪೋಲಿಸ್ ಸಿಬ್ಬಂದಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಗಣೇಶ ಉತ್ಸವದ ಸಂದರ್ಭದಲ್ಲಿ ಯಾವುದೇ ಗಲಭೆ ಅಥವಾ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವವರು ಕಂಡು ಬಂದಲ್ಲಿ ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವದು ಎಂದರು.
ಈ ವೇಳೆ ಮಾತನಾಡಿದ ವಿವಿಧ ಗಣೇಶ ಉತ್ಸವ ಮಹಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ನಗರದಲ್ಲಿ ಈಗಾಗಲೇ ಸುಮಾರು ವರ್ಷಗಳಿಂದ ಗಣೇಶ ಉತ್ಸವ ಪಾರಂಪರಿಕವಾಗಿ ಅದ್ದೂರಿಯಾಗಿ ಆಚರಿಸುತ್ತಾ ಬಂದಿದೆ. ದೇಶದಲ್ಲೇ ಎರಡನೇ ಅತಿ ದೊಡ್ಡ ಗಣೇಶ ಉತ್ಸವ ಆಚರಣೆ ನಮ್ಮ ಜಿಲ್ಲೆಯಲ್ಲಿ ನಡೆಯುತ್ತದೆ. ಗಣೇಶ ಮೂರ್ತಿ ವಿಸರ್ಜನೆಯ ಸುಮಾರು 8 ಹೊಂಡಗಳಿವೆ ಎಲ್ಲವನ್ನೂ ಸ್ವಚ್ಛಗೊಳಿಸಬೇಕು. ಗಣೇಶ ಮಂಟಪಗಳಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಗಣೇಶ ಮೂರ್ತಿ ವೀಕ್ಷಿಸಲು ಬರುವ ಸಾರ್ವಜನಿಕರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಹಾಗಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ನಗರದ ಗಣೇಶ ಉತ್ಸವ ವೀಕ್ಷಣೆಗೆ ಪರ ಊರುಗಳಿಂದ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ತಡರಾತ್ರಿಯ ವರೆಗೆ ಹೊಟೇಲುಗಳನ್ನು ತೆರೆದಿಡಲು ಹಾಗೂ ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಬಿ ಬಸರಗಿ, ಡಿಸಿಪಿ ಭರಮನಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಮಹಾನಗರ ಪಾಲಿಕೆ ನಗರ ಸೇವಕರು, ವಿವಿಧ ಗಣೇಶ ಮಹಾಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.