ಪ್ರತಿಯೊಬ್ಬರೂ ಶ್ರೇಷ್ಠ ಗುರುವಿನ ಮಾರ್ಗದರ್ಶನ ಪಡೆದುಕೊಂಡು ಸಾಧನೆ ಮಾಡಬೇಕು: ಉಲ್ಲಾಸ ಬಾಳೆಕುಂದ್ರಿ ಕರೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರತಿಯೊಬ್ಬರೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠ ಗುರುವಿನ ಮಾರ್ಗದರ್ಶನ ಹಾಗೂ ಉಪದೇಶ ಪಡೆದುಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ನಿವೃತ್ತ ನ್ಯಾಯಾಧೀಶ ಉಲ್ಲಾಸ ಬಾಳೆಕುಂದ್ರಿ ಕರೆ ನೀಡಿದರು.
ಬೆಳಗಾವಿ ಕೆಎಲ್ಇ ಸಂಸ್ಥೆಯ ಮಾತೃ ಸಂಸ್ಥೆ ಜಿಎ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಜಿಎ ಪ್ರೌಢಶಾಲಾ ವಿಭಾಗದ ಪ್ರಸಕ್ತ ಸಾಲಿನ ವಿವಿಧ ಶೈಕ್ಷಣಿಕ ವರ್ಷದ ಶಾಲಾ ಒಕ್ಕೂಟ ಮತ್ತು ವಿವಿಧ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಮಾಜ ವೇದ- ಉಪನಿಷತ್ತುಗಳಿಂದ ಕೂಡಿದೆ. ಭಾರತವು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವಿಚಾರವನ್ನು ಹೊಂದಿದ ದೇಶವಾಗಿದೆ. ಅನೇಕ ದಾರ್ಶನಿಕರು ಆಗಿ ಹೋಗಿದ್ದಾರೆ. ಜಗಜ್ಯೋತಿ ಬಸವೇಶ್ವರರು, ಸಂತ ತುಕಾರಾಮರು, ಜ್ಞಾನೇಶ್ವರ ಮಹಾರಾಜರು ನಮಗೆ ಶ್ರೇಷ್ಠ ಆಧ್ಯಾತ್ಮಿಕ ವಿಚಾರಧಾರೆಯನ್ನು ನೀಡಿ ಹೋಗಿದ್ದಾರೆ. ಅವುಗಳನ್ನು ನಾವು ಜೀವನದಲ್ಲಿ ಪರಿಪಾಲಿಸಬೇಕು ಎಂದು ಅವರು ಕರೆ ನೀಡಿದರು. ದೀಪವನ್ನು ಹಚ್ಚಿದಾಗ ಕತ್ತಲೆ ಹೋಗಿ ಬೆಳಕು ಆವರಿಸಿದಂತೆ ನಮ್ಮ ಜೀವನದಲ್ಲೂ ಹೊಸ ವಿಚಾರಗಳು ಸದಾ ಹರಿದು ಬರಬೇಕು ಎಂದು ತಿಳಿಸಿದ ಅವರು, ಮಾನವನು ಈ ಜಗತ್ತಿನ ಜೀವಜಾತಿಗಳಲ್ಲಿ ಅತ್ಯಂತ ಶ್ರೇಷ್ಠನಾಗಿ ಜನ್ಮ ಪಡೆದಿದ್ದಾನೆ. ಹೀಗಾಗಿ ನಾವು ನಮ್ಮ ಜೀವನವನ್ನು ಸುಮಧುರವಾಗಿಸಿಕೊಳ್ಳಬೇಕು. ಶ್ರೇಷ್ಠ ಗುರುವಿನ ಮಾರ್ಗದರ್ಶನ ಪಡೆದುಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಅವರು ಸಲಹೆ ನೀಡಿದರು.
ವಿದ್ಯಾರ್ಥಿಗಳು ಬಾಲ್ಯದಲ್ಲೇ ಹಲವು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಅವರು ಭವಿಷ್ಯದ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಲ್ಲಿ ಸ್ನೇಹಪರತೆ, ಪ್ರಾಮಾಣಿಕತೆ, ಶಿಸ್ತಿನ ಜೀವನ, ಯೋಗ, ನಿಷ್ಠೆ ಮುಂತಾದ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಂತರಂಗವನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ಜೀವನದಲ್ಲಿ ದೊಡ್ಡ ದೊಡ್ಡ ಕನಸು ಕಾಣುವುದರೊಂದಿಗೆ ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ಪಣತೊಡಬೇಕು. ಇದರಿಂದ ನಮ್ಮ ಹೆತ್ತವರ ಕನಸನ್ನು ನನಸಾಗಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪ್ರಭಾರಿ ಉಪ ಪ್ರಾಚಾರ್ಯ ಸಿ.ಪಿ. ದೇವರ್ಷಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿಯಲ್ಲಿ ಜಿಎ ಪ್ರೌಢಶಾಲೆ ಶತಮಾನದ ಇತಿಹಾಸ ಹೊಂದಿದ್ದು, ಶೈಕ್ಷಣಿಕ ಇತಿಹಾಸದಲ್ಲಿ ತನ್ನದೇ ಆದ ಸಾಧನೆ ಹೊಂದಿದೆ. ನಮ್ಮ ಶಾಲೆ ಪ್ರತಿಭಾವಂತ ಹಾಗೂ ಶ್ರೇಷ್ಠ ವಿದ್ಯಾರ್ಥಿಗಳನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿ ಗುರುತಿಸಿಕೊಂಡಿದೆ. ಶಾಲೆಯ ವಿದ್ಯಾರ್ಥಿಗಳು ಇಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಪೋಷಕರು ಹಾಗೂ ಸಂಸ್ಥೆಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಆರ್. ಎಸ್ .ಪಾಟೀಲ, ಆಜೀವ ಸದಸ್ಯ ಮಹಾದೇವ ಬಳಿಗಾರ, ಎ.ಆರ್. ಪಾಟೀಲ, ಪಿ.ಎಸ್ .ನಿಡೋಣಿ, ಪಿ.ಎಸ್.ಚಿಮ್ಮಡ, ವಿಶಾಲ ಶಿರೋಳಕರ,ವಿಜಯಲಕ್ಷ್ಮಿ ಲಮಾಣಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಎ.ಆರ್. ಪಾಟೀಲ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಜೆ. ಏಳುಕೋಟಿ ಪರಿಚಯಿಸಿದರು. ಸಿ.ಎಂ ಪಾಗಾದ ನಿರೂಪಿಸಿದರು. ಕೆ.ಆರ್. ಪಟ್ಟಣ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ