Latest

ಮಾಜಿ ಶಾಸಕ, ಕರಾವಳಿ ಭೀಷ್ಮ ಎ.ಜಿ ಕೊಡ್ಗಿ ಇನ್ನಿಲ್ಲ; CM ಸಂತಾಪ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕರಾವಳಿ ಭೀಷ್ಮ ಎಂದೇ ಹೆಸರಾಗಿದ್ದ ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ಎ.ಜಿ ಕೊಡ್ಗಿ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಎ.ಜಿ.ಕೊಡ್ಗಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಕರಾವಳಿ ಭೀಷ್ಮ ಎಂದೇ ಪ್ರಸಿದ್ಧರಾಗಿದ್ದ ಎ.ಜಿ.ಕೊಡ್ಗಿ ನಿಧನಕ್ಕೆ ರಾಜಕೀಯ ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕೆಲ ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿ ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು.

1972-84ರವರೆಗೆ ಬೈಂದೂರು ಶಾಸಕರಾಗಿ ಆಯ್ಕೆಯಾಗಿದ್ದರು, 1982-1990ರವರೆಗೆ ಕರ್ನಾಟಕ ಬ್ಯಾಂಕ್ ನಿರ್ದೇಶಕರಾಗಿ, 2006-08ರವರೆಗೆ ರಾಜ್ಯ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಬಳಿಕ ಅದರ ಕಾರ್ಯಪಡೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

Home add -Advt

ಕರಾವಳಿಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಕೊಡ್ಗಿ ಪಾತ್ರ ಮಹತ್ವದ್ದಾಗಿತ್ತು ಕುಂದಾಪುರ ಬಿಜೆಪಿ ತಾಲೂಕು ಘಟಕ, ಜಿಲ್ಲಾಧ್ಯಕ್ಷರಾಗಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

 

 ಮುಖ್ಯಮಂತ್ರಿ ಸಂತಾಪ 

ಬಿಜೆಪಿ ಹಿರಿಯ ನಾಯಕ, ರಾಜ್ಯ ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಕೊಡ್ಗಿ ಅವರು ಬೈಂದೂರು ಶಾಸಕರಾಗಿ, ನಂತರ ಹಣಕಾಸು ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯವಾದುದು. ಅವರ ರಾಜಕೀಯ ಜೀವನವೂ ಇತರರಿಗೆ ಮಾದರಿಯಾಗಿತ್ತು. ಪಕ್ಷದಲ್ಲಿ ಕರಾವಳಿ ಭಾಗದಲ್ಲಿ ಹಲವು ಯುವ ನಾಯಕರನ್ನು ಪ್ರೋತ್ಸಾಹಿಸಿ ಬೆಳೆಸಿದ ಶ್ರೇಯ ಇವರದು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

ಅವರ ನಿಧನದಿಂದ ಒಬ್ಬ ಸರಳ, ಸಜ್ಜನ ಹಿರಿಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋದ ಬಿ.ವಿ.ಶ್ರೀನಿವಾಸ್

Related Articles

Back to top button