ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಶ್ರೀ ಸಾಯಿನಾಥ ಸ್ಟೋನ್ ಕ್ರಷರ್ಸದಲ್ಲಿ ಅಕ್ರಮವಾಗಿ ತಗಡಿನ ಶೇಡ್ ನಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು.
ಆಂತರಿಕ ಭದ್ರತಾ ವಿಭಾಗದ ಪೋಲಿಸ್ ಅಧಿಕಾರಿ ಶಿವಾನಂದ ಅಂಬಿಗೇರ ಪೊಲೀಸ್ ನಿರೀಕ್ಷರು ಇವರ ಮುಂದಾಳತ್ವದಲ್ಲಿ ರೇಡ್ ಮಾಡುವ ಮೂಲಕ ಎಲ್ಲ ಜಿಲೆಟಿನ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧಿಕಾರಿಗಳಿಗೆ ಬಲ್ಲ ಮೂಲಗಳಿಂದ ಬಂದ ಮಾಹಿತಿ ಮೇರೆಗೆ ಡಿಸೆಂಬರ್ ೨೩ ರಂದು ಮುಂಜಾನೆ ೧೦ ಗಂಟೆಗೆ ರೇಡ್ ಮಾಡಲಾಗಿ ನಾಲ್ಕು ಬಾಕ್ಸ್ ಜಿಲೆಟಿನ್, ಎಂಟು ಬಂಡಲ್ ಇಡಿ ಕೇಬಲ್ಗಳು ಮತ್ತು ಒಂದು ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ ಒಟ್ಟು ೧೫,೪೭೦ ರೂಪಾಯಿ ಮೌಲ್ಯದ ವಸ್ತುಗಳನ್ನು ಹಾಗೂ ಕ್ರಷರ್ಸ ಮ್ಯಾನೇಜರ್ ಬಸವರಾಜ್ ಮಹಾದೇವಪ್ಪಾ ಪಟ್ಟಣಶೆಟ್ಟಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ನಿರೀಕ್ಷರಾದ ಶಿವಾನಂದ ಅಂಬಿಗೇರ ಸಿಬ್ಬಂದಿಗಳಾದ ಪ್ರಶಾಂತ ಹಿರೇಮಠ, ಫಕುದ್ದೀನ್ ಖೋಂದೂನಾಯ್ಕ ಹಾಗೂ ಲೋಹಿತ ಅರೆನ್ನವರ ಇವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿತ್ತು.
ಮುರಗೋಡ ಪೊಲೀಸ್ ಠಾಣೆಯಲ್ಲಿ ಎಕ್ಸ್ಪ್ಲೋಸಿವ್ ಆಕ್ಟ್ ೧೮೮೪ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಂತರಿಕ ಭದ್ರತಾ ವಿಭಾಗ, ಉತ್ತರವಲಯದ ಉಸ್ತುವಾರಿ ಡಿ.ವೈ.ಎಸ್.ಪಿ. ಅನಿಲಕುಮಾರ್ ಎಸ್. ಭೂಮರಡ್ಡಿ ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ