ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ -ಇಲ್ಲಿಯರೈಲ್ವೆ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ವೈಕ್ತಿಯೋರ್ವ ಗಾಯಗೊಂಡಿದ್ದಾನೆ.
ಅನುಮಾನಾಸ್ಪದ ರೀತಿಯಲ್ಲಿದ್ದ ಬಾಕ್ಸ್ ತಗೆದು ಪರಿಶೀಲಿಸುವ ವೇಳೆ ಈ ಸ್ಫೋಟ ಸಂಭವಿಸಿದ್ದು, ಅದೇ ಮಾದರಿಯ ಇನ್ನೂ 10 ಬಾಕ್ಸ್ ಗಳು ಅಲ್ಲಿ ಪತ್ತೆಯಾಗಿವೆ. ಬಾಸ್ಕೆಟ್ ನಲ್ಲಿ ಉಂಡೆಯಾಕಾರದ ಸ್ಫೋಟಕಗಳಿದ್ದವು.
ರೈಲ್ವೆ ನಿಲ್ದಾಣದ ಅಧಿಕಾರಿಗಳು ಅದನ್ನು ಗಮನಿಸಿ ಅಲ್ಲಿದ್ದ ಮಾರಾಟಗಾರನೋರ್ವನಿಂದ ಬಿಚ್ಚಿಸಿದರು. ಆ ವೇಳೆ ಅದು ಸ್ಫೋಟಗೊಂಡಿದೆ. ಹಸೇನ್ ಸಾಬ್ ಎನ್ನುವಾತ ಘಟನೆಯಲ್ಲಿ ಗಾಯಗೊಂಡಿದ್ದಾನೆ. ಆತನ ಕೈ ಬೆರಳುಗಳು ಛಿದ್ರವಾಗಿವೆ. ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಘಟನೆ ನಡೆಯುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಶ್ವಾನದಳ ಕರೆಸಲಾಗಿದೆ. ಬೆರಳಚ್ಚು ತಜ್ಞರು ಆಗಮಿಸಿದ್ದಾರೆ. ಬೆಂಗಳೂರಿನಿಂದ ಬಾಂಬ್ ತತಜ್ಞರು ಧಾವಿಸುತ್ತಿದ್ದಾರೆ.
ಬಾಕ್ಸ್ ಮೇಲೆ ಗಾರ್ಗೋಟಿ ಎಂಎಲ್ಎ ಎಂದು ಬರೆಯಲಾಗಿದ್ದು, ಅನುಮಾನಾಸ್ಪದ ಬರಹಗಳಿವೆ. ಘಟನೆಯ ಕುರಿತು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಶನರ್ ತನಿಖೆ ನಡೆಸಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೆ ನಿರಂತರ ತಪಾಸಣೆ ನಡೆಸುತ್ತಿದ್ದುದರಿಂದಲೇ ಹುಬ್ಬಳ್ಳಿಯಲ್ಲಿ ಇಂತಹ ವಸ್ತು ಪತ್ತೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇದು ಪ್ರಾಣಿಗಳನ್ನು ಬೆದರಿಸಲು ಬಳಸುವ ಸ್ಫೋಟಕವಿರಬಹುದು ಎಂದು ಶಂಕಿಸಲಾಗಿದ್ದು, ಮಹಾರಾಷ್ಟ್ರಕ್ಕೆ ಕಳಿಸಲಾಗುತ್ತಿತ್ತು ಎಂದು ಸಂಕಿಸಲಾಗಿದೆ. ಆದರೆ ಅಮರಾವತಿ ಎಕ್ಸಪ್ರೆಸ್ ನಲ್ಲಿ ಹುಬ್ಬಳ್ಳಿವರೆಗೆ ಬಂದಿದ್ದು, ಅದರ ವಾರಸುದಾರರು ಯಾರೂ ಪತ್ತೆಯಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ