
ಪ್ರಗತಿವಾಹಿನಿ ಸುದ್ದಿ: ತರಬೇತಿ ನಿರತ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್ನ ಎಫ್-16 ಯುದ್ಧ ವಿಮಾನವೊಂದು ಏಕಾಏಕಿ ಪತನಗೊಂದ ಘಟನೆ ನಡೆದಿದೆ.
ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ಈ ಘಟನೆ ನಡೆದಿದೆ. ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಪೈಲಟ್ ಎಜೆಕ್ಟ್ ಆಗುವ ಮೂಲಕ ಪ್ಯಾರಾಚೂಟ್ ನೆರವಿನಿಂದ ಸುರಕ್ಷಿತವಾಗಿ ಹೊರಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಬಳಿ ಈ ದುರ್ಘಟನೆ ಸಂಭವಿಸಿದ್ದು, ಪತನದ ಸ್ಥಳದಲ್ಲಿ ಭಾರಿ ಬೆಂಕಿ ಮತ್ತು ಸ್ಫೋಟಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ.
ಟೆಕ್ಸಾಸ್ನ 149ನೇ ಫೈಟರ್ ವಿಂಗ್ ಘಟಕಕ್ಕೆ ಸೇರಿದ ಈ ವಿಮಾನ ಪತನಗೊಂಡ ತಕ್ಷಣವೇ ಪೈಲಟ್ ವಿಮಾನದಿಂದ ಯಶಸ್ವಿಯಾಗಿ ಹೊರಹಾರಿದ್ದಾರೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಡೆಟ್ರಾಯಿಟ್ನಿಂದ ಉತ್ತರಕ್ಕೆ 305 ಕಿ.ಮೀ ದೂರದಲ್ಲಿರುವ ಆಲ್ಪೆನಾ ರಾಷ್ಟ್ರೀಯ ಗಾರ್ಡ್ ನೆಲೆಯಿಂದ ತಾಲೀಮು ನಡೆಯುತ್ತಿತ್ತು. ಟ್ರಾವರ್ಸ್ ಸಿಟಿ ಬಳಿ ವಿಮಾನ ಪತನವಾದಾಗ ಭಾರಿ ಶಬ್ಢ ಕೇಳಿಬಂದಿದೆ. ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆಗೆ ಆದೇಶಿಸಲಾಗಿದೆ.




