ಪ್ರಗತಿವಾಹಿನಿ ಸುದ್ದಿ: ಐಟಿ ಅಧಿಕಾರಿಗಳು, ಪೊಲೀಸರ ಸೋಗಿನಲ್ಲಿ ಎರಡು ಕಾರುಗಳಲ್ಲಿ ಬಂದ ಆಗಂತುಕರ ತಂಡ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ.
ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬೆಳ್ಳಂ ಬೆಳಿಗ್ಗೆ ಎರಡು ಕಾರುಗಳಲ್ಲಿ ಅಧಿಕಾರಿಗಳ ಸೋಗಿನಲ್ಲಿ ಕೆಲವರು ಬಂದಿದ್ದಾರೆ. ಮನೆಯ ಮುಂಭಾಗದ ಗೇಟನ್ನು ತೆರೆಯಲು ಯತ್ನಿಸಿದ್ದಾರೆ. ಆದರೆ ಗೇಟು ತೆಗೆಯಲು ಸಾಧ್ಯವಾಗಿಲ್ಲ. ಈ ವೇಳೆ ಕೆಲವರು ಕಾಂಪೌಂಡ್ ಹಾರಿ ಅಕ್ರಮವಾಗಿ ಒಳ ಪ್ರವೇಶಿಸಿದ್ದು, ಮನೆಯ ಬಾಗಿಲು, ಕಿಟಕಿಗಳನ್ನು ತೆರೆಯಲು ಯತ್ನಿಸಿದ್ದಾರೆ ಆದರೂ ಸಾಧ್ಯವಾಗದೇ ಬಂದ ದಾರಿಯಲ್ಲಿ ವಾಪಸ್ ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿಯ ಮೇಲೆ ನಿಗಾ ಇಡುತ್ತಿದ್ದ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಎಂಬುವವರು ತಕ್ಷಣ ಮನೆ ಮಾಲಕಿ ಕವಿತಾ (34) ಅವರಿಗೆ ಕರೆ ಮಾಡಿ ಆಗಂತುಕರ ಗುಂಪು ಮನೆ ಬಳಿ ಬಂದು ವಾಪಾಸ್ ತೆರಳಿರುವುದಾಗಿ ಹೇಳಿದ್ದಾರೆ. ಮಹಿಳೆ ಹೊರಬಂದು ನೋಡುವಷ್ಟರಲ್ಲಿ ಯಾರೂ ಇರಲಿಲ್ಲ. ಘಟನೆಯ ಬಗ್ಗೆ ಕವಿತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜುಲೈ 25ರಂದು ಮುಂಜಾನೆ ತಮ್ಮ ಮನೆಗೆ ಎರಡು ಕಾರುಗಳಲ್ಲಿ ಅಧಿಕಾರಿಗಳು ಹಾಗೂ ಪೊಲೀಸರ ಸೋಗಿನಲ್ಲಿ ಬಂದು, ಮನೆ ಬಾಗಿಲು, ಕಿಟಕಿ ತೆರೆಯಲು ಯತ್ನಿಸಿ ವಿಫಲವಾಗಿ ವಾಪಸ್ ತೆರಳಿವೆ. ಹೀಗೆ ಬಂದ ನಕಲಿ ಅಧಿಕಾರಿಗಳು ಯಾರು? ಅಪರಿಚಿತರ ಗುಂಪು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.
ನಕಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ಹಾಡಹಗಲೇ ದರೋಡೆಗೆ ಯತ್ನ ನಡೆದಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ಅಪರುಚಿತ ಗುಂಪಿನ ಪತ್ತೆಗಾಗಿ ಎರಡು ಪ್ರತ್ಯೇಕ ಪೊಲೀಸ್ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ