*ಪಿಎಸ್ಐ ಪರೀಕ್ಷೆಯಲ್ಲಿ ಎರಡು ಬಾರಿ ಫೇಲ್: ಮನೆಗಳಿಗೆ ನುಗ್ಗಿ ಕೇಸ್ ಹಾಕುವುದಾಗಿ ಬೆದರಿಸಿ ಹಣ, ಚಿನ್ನಾಭರಣ ವಸೂಲಿ: ನಕಲಿ ಪೊಲೀಸ್ ಸೇರಿ ನಾಲ್ವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಯೇ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಲ್ಲೋರ್ವ ವ್ಯಕ್ತಿ ಎರಡು ಬಾರಿ ಪಿಎಸ್ ಐ ಪರೀಕ್ಷೆಯಲ್ಲಿ ಫೇಲ್ ಆಗಿ, ಬಳಿಕ ಐಷಾರಾಮಿ ಜೀವನಕ್ಕಾಗಿ ಸ್ನೇಹಿತರೊಂದಿಗೆ ಸೇರಿ ಕಳ್ಳತನಕ್ಕೆ ಇಳಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆ ಪೊಲೀಸರು ನಕಲಿ ಪೊಲೀಸ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಮಲ್ಲಿಕಾರ್ಜುನ, ಪ್ರಮೋದ್, ವಿನಯ್, ಹೃತ್ವಿಕ್ ಬಂಧಿತ ಆರೋಪಿಗಳು. ಸಿರಗುಪ್ಪ ಮೂಲದ ಮಲ್ಲಿಕಾರ್ಜುನ ಎರಡು ಬಾರಿ ಪಿಎಸ್ ಐ ಪರೀಕ್ಷೆ ಬರೆದು ಫೇಲ್ ಆಗಿದ್ದ. ಪೊಲೀಸ್ ಯುನಿಫಾರ್ಮ್, ಲಾಠಿ, ಕ್ಯಾಪ್, ಶೂ ಧರಿಸಿ ಫೋಟೋ ಶೂಟ್ ಮಾಡಿಸಿದ್ದ. ಊರಲ್ಲಿ ತಾನು ಬೆಂಗಳೂರಿನಲ್ಲಿ ಪಿಎಸ್ ಐ ಆಗಿರುವುದಾಗಿ ಹೇಳಿಕೊಂಡು ಬಿಲ್ಡಪ್ ತೆಗೆದುಕೊಂಡಿದ್ದ.
ಇತ್ತ ಬೆಂಗಳೂರಿನಲ್ಲಿ ಐಷಾರಾಮಿ ಜೀವನಕ್ಕಾಗಿ ಪೊಲೀಸ್ ಎಂದು ಬೆದರಿಕೆ ಹಾಕಿ ಹಣ ವಸೂಲಿ, ಮನೆಗಳಿಗೆ ನುಗ್ಗಿ ಕೇಸ್ ಹಾಕುವುದಾಗಿ ಹೇಳಿ ಹೆದರಿಸಿ ಹಣ, ಚಿನ್ನಾಭರಣ ಲೂಟಿ ಮಾಡುವ ಕಾಯಕದಲ್ಲಿ ತೊಡಗಿದ್ದ. ನವೀನ್ ಎಂಬಾತನನ್ನು ಹಲವು ದಿನಗಳಿಂದ ಗಮನಿಸುತ್ತಿದ್ದ ಹೃತ್ವಿಕ್, ಆತನ ಮನೆಗೆ ನುಗ್ಗಿದರೆ ಹಣ, ಚಿನ್ನಾಭರಣ ಸಿಗುತ್ತದೆ ಎಂದು ಹೇಳಿದ್ದ. ಅದರಂತೆ ಕಾರಿನಲ್ಲಿ ಪೊಲೀಸ್ ಯೂನಿಫಾರ್ಮ್ ನಲ್ಲಿ ಮಲ್ಲಿಕಾರ್ಜುನ್ ಹಾಗೂ ಗ್ಯಾಂಗ್ ನವೀನ್ ಮನೆಗೆ ಹೋಗಿ ನೀನು ಗಾಂಜಾ ಮಾರಾಟದಲ್ಲಿ ತೊಡಗಿದ್ದೀಯಾ. ನಿನ್ನ ಮನೆ ಸರ್ಚ್ ಮಡಬೇಕು ಎಂದು ತಡಕಾಡಿದೆ.
ಗಾಂಜಾ ಎಲ್ಲಿ ಬಚ್ಚಿಟ್ಟಿದ್ದೀಯಾ ಎಂದು ಲಾಠಿ, ದೊಣ್ಣೆಗಳಿಂದ ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನ ಮೇಲೆ ಕೇಸ್ ಹಾಕಬಾರದು ಎಂದರೆ ಹಣ ಕೊಡಬೇಕು ಎಂದು ಬೇದಿಕೆ ಇಟ್ಟಿದ್ದಾರೆ. ಆತನಿಂದ 87 ಸಾವಿರ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಮನೆಯಲ್ಲಿದ್ದ 53 ಸಾವಿರ ನಗದು, ಚಿನ್ನಾಭರಣ ನವೀನ್ ಪರ್ಸ್ ನಲ್ಲಿದ್ದ 2 ಸಾವಿರ ಹಣವನ್ನೂ ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಸಂಶಯಗೊಂಡ ನವೀನ್ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದರು. ಕರ್ಯಾಚರಣೆ ನಡೆಸಿದ ಪೊಲೀಸರು ನಕಲಿ ಪೊಲೀಸ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.




