ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಸರ್ಗವನ್ನೇ ತನ್ನ ಉಸಿರಾಗಿಸಿಕೊಂಡು ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿ ಮಗುವನಂತೆ ಬೆಳೆಸಿದ ಸಾಲುಮರದ ತಿಮ್ಮಕ್ಕನಿಗೆ ಕೆಎಲ್‌ಇ ಸಂಸ್ಥೆಯ ಸ್ತ್ರೀಶಕ್ತಿ ಸಂಘವು ಇಂದು ಸತ್ಕಾರ ಮಾಡಿತು.
ಕೆಎಲ್‌ಇ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಆಲದ ಸಸಿ ನೆಟ್ಟು, ಸತ್ಕಾರ ಸ್ವೀಕರಿಸಿ ಮಾತನಾಡಿದ ಸಾಲುಮರದ ತಿಮ್ಮಕ್ಕ ಅವರು, ಪರಿಸರ ನಾಶದಿಂದ ಹವಾಮಾನ ವೈಪರೀತ್ಯ ಉಂಟಾಗಿ ಅಕಾಲಿಕ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಾಕಷ್ಟು ತೊಂದರೆಯುಂಟಾಗುತ್ತಿದೆ. ಅತೀವೃಷ್ಟಿಯಿಂದ ಬೆಳೆ ಹಾನಿಯಾದರೆ ಇನ್ನೊಂದು ಕಡೆ ಅನಾವೃಷ್ಟಿಯಿಂದ ಆಗುತ್ತಿದೆ. ಇದು ತಪ್ಪಬೇಕಾದರೆ ಪರಿಸರವನ್ನು ಉಳಿಸುವ ಕಾರ‍್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆ ನೀಡಿದರು.
ಮಾನವನ ಹಸ್ತಕ್ಷೇಪದಿಂದ ಇಂದು ಪರಿಸರ ನಾಶ ತೀವ್ರಗೊಳ್ಳುತ್ತಿದೆ. ಅಭಿವೃದ್ದಿ ಹೆಸರಿನಲ್ಲಿ ನಿಸರ್ಗದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸದಿದ್ದರೆ ಮುಂದೊಂದು ದಿನ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಪರಿಸರವನ್ನು ರಕ್ಷಿಸುವ ಕಾರ‍್ಯ ನಡೆಯಬೇಕಾಗಿದೆ. ಕಾಯ್ದೆಗಳನ್ನು ರೂಪಿಸಿದರೆ ಸಾಲದು ಅವು ಕಾರ‍್ಯರೂಪಕ್ಕೆ ಬಂದು ಅರಣ್ಯ ಮತ್ತು ಪರಿಸರವನ್ನು ರಕ್ಷಿಸುವ ಸಾಧನಗಳಾಗಿ ಮಾರ್ಪಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾಜಿಕ ಅರಣ್ಯ ಮತ್ತಷ್ಟು ಬಲಗೊಳ್ಳಬೇಕು. ಸಾಮಾಜಿಕ ಅರಣ್ಯ ಬೆಳೆಸುವಲ್ಲಿ ನಿರತರಾಗಿರುವ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳನ್ನು ಸರಕಾರವು ಗುರುತಿಸಿ ಅಗತ್ಯ ಸೌಲಭ್ಯ ಮತ್ತು ಅವುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಮನಗಾಣಬೇಕು. ಇರುವ ಅರಣ್ಯ ಸಂಪತ್ತು ವೃದ್ದಿಸುವಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸ್ವಇಚ್ಚೆಯಿಂದ ನಿಸರ್ಗ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕೆಎಲ್ಇ ವಿಕೆ ದಂತ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ‍್ಯೆ ಡಾ. ಅಲ್ಕಾ ಕಾಳೆ ಅವರು ಸತ್ಕರಿಸಿದರು. ಈ ಸಂದರ್ಭದಲ್ಲಿ ಡಾ ಸುಜಾತಾ ಜಾಲಿ, ಡಾ. ರೇಣುಕಾ ಮೆಟಗುಡ್, ಡಾ ಜಲಜಾ ಹರಪ್ರೀತ, ಡಾ ಸುಧಾ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ