Belagavi NewsBelgaum NewsKannada NewsKarnataka News

*ಬೆಳಗಾವಿ ನಗರದಲ್ಲಿ ಧರೆಗುರುಳಿದ ಮರಗಳು: ಹಲವು ಮನೆಗಳಿಗೆ ಹಾನಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಮೂರ್ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು ನಗರದ ಹಲವೆಡೆ ಮರಗಳು ಧರೆಗುರುಳಿ, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾರಿ ಮಳೆಯ ಆರ್ಭಟಕ್ಕೆ ನಗರದ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ಬೃಹತ್ ಹುಣಸೆ ಮರವೊಂದು ಧರೆಗುರುಳಿದ್ದು ನಾಲ್ಕು ಮನೆಗಳಿಗೆ ತೀವ್ರ ಹಾನಿಯಾಗಿದೆ.

ಮರ ಬಿದ್ದ ರಭಸಕ್ಕೆ ಸ್ಥಳೀಯ ನಿವಾಸಿಗಳಾದ ಅನಿಲ್ ಮುಟ್ಟೇಕರ್, ಆನಂದ ಭದ್ವಾಂಕರ್‌, ಏಕನಾಥ ಭದ್ವಾಂಕರ್ ಹಾಗೂ ಪ್ರಶಾಂತ ಗೋರ್ಲೆ ಎಂಬುವವರ ಮನೆಗಳು ಜಖಂಗೊಂಡಿವೆ. 

ಘಟನೆಯಲ್ಲಿ ಮನೆಯಲ್ಲಿದ್ದ ಅಗತ್ಯ ಸಾಮಗ್ರಿಗಳು ನಾಶವಾಗಿದ್ದು, ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಸದ್ಯ ಸಂಕಷ್ಟದಲ್ಲಿರುವ ಸಂತ್ರಸ್ತರು ತಮಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

ಮರ ಬೀಳುವ ಮುನ್ನವೇ ಮುನ್ಸೂಚನೆ ಸಿಕ್ಕಿದ್ದರಿಂದ ನಾಲ್ಕೂ ಕುಟುಂಬಗಳ ಸದಸ್ಯರು ತಕ್ಷಣವೇ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದರಿಂದಾಗಿ ಯಾವುದೇ ಜೀವಹಾನಿ ಸಂಭವಿಸದೇ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ಶಹಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬಿದ್ದಿರುವ ಬೃಹತ್ ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನು ಕೋರ್ಟ್ ಆವರಣ, ವಡಗಾವಿ, ಶಾಹಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ಬಿದ್ದಿದ್ದು, ಪಾಲಿಕೆಯಿಂದ ತೆರವು ಮಾಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button