
ಪ್ರಗತಿವಾಹಿನಿ ಸುದ್ದಿ: ಭೀಕರವಾಗಿ ಮಿಲಿಟರಿ ವಿಮಾನ ಅಪಘಾತ ಸಂಭವಿಸಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಒಟ್ಟು 14 ಮಂದಿ ಮೃತಪಟ್ಟಿರುವ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆದಿದೆ.
ನೈಋತ್ಯ ಕಾಂಗೋದ ಕಿಕ್ವಿಟ್ನಿಂದ ರಾಜಧಾನಿ ಕಿನ್ಯಾಸಾಗೆ ಹಿಂದಿರುಗುತ್ತಿದ್ದ ವೇಳೆ ವಿಮಾನವು ಕೆಂಗೆ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಉನ್ನತ ಶ್ರೇಣಿಯ ಸೇನಾಧಿಕಾರಿಗಳು, ನಿಯೋಗದ 12 ಸದಸ್ಯರು ಹಾಗೂ ಸಿಬ್ಬಂದಿ ಮೃತಪಟ್ಟಿರುವುದಾಗಿ ಸೇನಾ ವಕ್ತಾರ ಮೇಜರ್ ಜನರಲ್ ಎಫೋಮಿ ಎಕೆಂಗೆ ದೃಢಪಡಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಹಿರಿಯ ಅಧಿಕಾರಿಗಳನ್ನು ಮಿಲಿಟರಿ ನ್ಯಾಯಾಲಯದ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಾಲಯಿ ಟಿಯೆಂಡೆ ಹಾಗೂ ಸಶಸ್ತ್ರ ಪಡೆಗಳ ಆಡಿಟರ್ ಜನರಲ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಬಕುಮಿ ಲಿ ಕುಲಿಯಾ ಎಂದು ಗುರುತಿಸಲಾಗಿದೆ.
ಕಿನ್ಯಾಸಾಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಳಿಕ ನಿಯಂತ್ರಣ ಕಳೆದುಕೊಂಡು ಕೆಂಗೆ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಪಘಾತದ ಸಂಪೂರ್ಣ ಕಾರಣ ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಈ ಕುರಿತು ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ ಟ್ರೈಫೋನ್ ಕಿನ್-ಕಿ ಎ ಮುಲುಂಬಾ ಅವರು ತನಿಖೆ ಮುಂದುವರಿದಿದ್ದು, ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




