ಎರಿಟ್ರಿಯಾ – ಆಫ್ರಿಕಾದ ದೇಶವಾದ ಎರಿಟ್ರಿಯಾದಲ್ಲಿ (Eritrea) ಪುರುಷರು ಕನಿಷ್ಟ 2 ಮದುವೆ ಆಗಲೇಬೇಕೆಂಬ ಕಾನೂನು ತಂದಿರುವ ಸುದ್ದಿಯೊಂದು ಕಳೆದ ಒಂದು ವಾರದಿಂದ ವಿಶ್ವದಾದ್ಯಂತ ಸದ್ದು ಮಾಡಿತ್ತು. ಆದರೆ ಅದು ಸುಳ್ಳು ಸುದ್ದಿಯೆಂದು ಬಿಬಿಸಿ ವರದಿ ಮಾಡಿದೆ. ಅಲ್ಲದೇ ಜಗತ್ತಿನಾದ್ಯಂತ ಎರಿಟ್ರಿಯಾಗೆ ಹೋಗುವ ಕನಸು ಕಂಡಿದ್ದ ಪುರುಷರು ಪೆಚ್ಚಾಗಿದ್ದಾರೆ ಎಂದು ಲೇವಡಿ ಸಹ ಮಾಡಿದೆ.
ಎರಿಟ್ರಿಯಾದಲ್ಲಿ ಪುರುಷರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಅಲ್ಲಿನ ಹೆಚ್ಚಿನ ಯುವತಿಯರಿಗೆ ಮದುವೆಯ ಭಾಗ್ಯ ಇಲ್ಲವಾಗುತ್ತಿದೆ. ಹಾಗಾಗಿ ಅಲ್ಲಿನ ಪುರುಷರಿಗೆ ಎರಡು ಮುವೆಯಾಗುವುದು ಕಡ್ಡಾಯಗೊಳಿಸಲಾಗುತ್ತಿದೆ. ನಿಯಮ ಉಲ್ಲಂಘಿಸುವ ಪುರುಷರಿಗೆ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಸುದ್ದಿಯೊಂದು ಕಳೆದ ಒಂದು ವಾರದಿಂದ ಹರಿದಾಡುತ್ತಿತ್ತು. ಸುದ್ದಿಗೆ ಖಚಿತತೆ ಬರುವ ನಿಟ್ಟಿನಲ್ಲಿ ಅಲ್ಲಿನ ಸರಕಾರದ ಅಧೀಕೃತ ಲೆಟರ್ ಹೆಡ್‌ನಲ್ಲೇ ಇದು ಮುದ್ರಿತವಾದಂತೆ ಕಾಣುವ ಪತ್ರವೊಂದು ಸಹ ವೈರಲ್ ಆಗಿತ್ತು.
ಎರಿಟ್ರಿಯಾ ಸರಕಾರಕ್ಕೆ ತಲೆ ಬಿಸಿ
ಸುಮ್ಮನೇ ಯಾರೋ ಹರಡಿದ ಸುದ್ದಿಯಾಗಿದ್ದರೆ ಜನ ನಂಬುತ್ತಿರಲಿಲ್ಲ. ಆದರೆ ವಿಶ್ವದ ಖ್ಯಾತ ಸುದ್ದಿಸಂಸ್ಥೆಗಳೇ ಈ ಕುರಿತು ವರದಿ ಮಾಡಿದ್ದವು. ವಾಸ್ತವದಲ್ಲಿ ಕೀನ್ಯಾದ ಸುದ್ದಿಸಂಸ್ಥೆ ಕ್ರೇಜಿ ಮಂಡೆ ಮೊದಲ ಬಾರಿಗೆ ಈ ಸುದ್ದಿಯನ್ನು ಮಾಡಿತ್ತು. ಕ್ರೇಜಿ ಮಂಡೆ ನಕಲಿ ದಾಖಲೆಯನ್ನಿಟ್ಟುಕೊಂಡು ಮಾಡಿದ್ದ ವರದಿಯನ್ನು ಇತರ ಸುದ್ದಿ ಸಂಸ್ಥೆಗಳು ಸಹ ನಿಜವೆಂದು ವರದಿ ಮಾಡಿದ್ದವು.
ಬಳಿಕ ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗತೊಡಗಿತು. ಅದರ ಜೊತೆಗೇ ವಿಶ್ವದಾದ್ಯಂತ ಪುರುಷರು ಎರಿಟ್ರಿಯಾದೆಡೆಗೆ ಧಾವಿಸುತ್ತಿರುವ ವ್ಯಂಗ್ಯ ಚಿತ್ರಗಳೂ ಹರಿದಾಡತೊಡಗಿದವು. ಆದರೆ ಈ ಸುದ್ದಿ ಸುಳ್ಳೆಂದು ಸಾಬೀತು ಮಾಡಲು ಎರಿಟ್ರಿಯಾ ಸರಕಾರ ಈಗ ಹರಸಾಹಸಪಡುತ್ತಿದೆ. ಲೆಟರ್‌ಹೆಡ್‌ನಲ್ಲಿ ಇರುವ ಆದೇಶ ಅಧೀಕೃತವಾದದ್ದಲ್ಲ. ಅದು ನಕಲಿ, ಈಸ್ಟ್ ಆಫ್ರಿಕಾ ದೇಶದಲ್ಲಿ ಎರಡು ಮದುವೆಯಾಗುವುದು ಕಾನೂನು ಬಾಹೀರ ಎಂದು ಸಾರುತ್ತಿದೆ. ಆದರೂ ಈ ನಕಲಿ ಸುದ್ದಿ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಲೇ ಇದೆ ಎಂದು ಬಿಬಿಸಿ ವರದಿ ಮಾಡಿದೆ.
ಹೀಗಾಗುತ್ತಿರುತ್ತದೆ
ಎರಡು ಮದುವೆಗೆ ಅವಕಾಶ, ಪುರುಷರ ಬರ ಎಂಬ ಸುದ್ದಿಗಳು ವಿಶ್ವದ ನಾನಾ ದೇಶಗಳ ಹೆಸರಿನಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಎರಡನೇ ವಿಶ್ವ ಯುದ್ಧದ ಬಳಿಕ ಜರ್ಮನಿಯ ಬಗ್ಗೆ ಹೀಗೊಂದು ಸುದ್ದಿ ಹರಡಿತ್ತು. ಬಳಿಕ ೨೦೧೧ರಲ್ಲಿ ಇರಾಕ್‌ನಲ್ಲಿ ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರು ಲಕ್ಷಾಂತರ ಸಂಖ್ಯೆಯಲ್ಲಿದ್ದು ಪುರುಷರ ಸಂಖ್ಯೆ ಕಡಿಮೆಯಾಗಿದೆ ಎಂದು ಸ್ವತಃ ಬಿಬಿಸಿಯೇ ವರದಿ ಮಾಡಿತ್ತು. ಅದೇ ರೀತಿ ಸುಡಾನ್ ಬಗ್ಗೆಯೂ ಇಂಥದ್ದೊಂದು ಸುದ್ದಿ ಹರಡಿತ್ತು. ಪ್ರಸ್ತುತ ಎರಿಟ್ರಿಯಾ ಬಗ್ಗೆಯೂ ಸುಳ್ಳು ಸುದ್ದಿ ಹರಡಿದ್ದು ಆ ದೇಶದ ಸರಕಾರ ಮತ್ತು ಪ್ರಜೆಗಳು ಮುಜುಗರಕ್ಕೀಡಾಗುವಂತಾಗಿದೆ.
ಹನಿಟ್ರ್ಯಾಪ್ ಯತ್ನ : ಶಿರಸಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; ಶಿರಸಿ ಯುವಕರು, ಶಿವಮೊಗ್ಗದ ಮಹಿಳೆ ಪೊಲೀಸ್ ಬಲೆಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ